ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ಝಳ: ಹಾಲು ಉತ್ಪಾದನೆ ಕುಸಿತ

Published 29 ಏಪ್ರಿಲ್ 2024, 15:59 IST
Last Updated 29 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಗ್ರಾಮೀಣ ಭಾಗದ ನೂರಾರು ಕುಟುಂಬಗಳ ಆರ್ಥಿಕ ಸಂಪನ್ಮೂಲಕ್ಕೆ ಆಧಾರವಾಗಿದ್ದ ಹೈನುಗಾರಿಕೆ (ಹೈನೋದ್ಯಮ) ಮೇಲೆ ಮಳೆ ಕೊರತೆ ಹಾಗೂ ಬಿಸಿಲ ಝಳ ಗಂಭೀರ ಪರಿಣಾಮ ಬೀರಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಮೇ ತಿಂಗಳು ಆರಂಭವಾದರೂ ಮಳೆಯ ಸುಳಿವಿಲ್ಲ. ಬಿಸಿಲ ತಾಪವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊಳವೆಬಾವಿಗಳು ಬತ್ತಿಹೋಗಿವೆ. ಇದರಿಂದಾಗಿ ಮೇವಿನ ಕೊರತೆ ಉಂಟಾಗಿ, ಹಾಲು ಉತ್ಪಾದನೆ ಇಳಿಕೆಯಾಗುವಂತೆ ಮಾಡಿದೆ.

ದಿನಕ್ಕೆ 10ರಿಂದ 12 ಲೀಟರ್ ಹಾಲು ನೀಡುತ್ತಿದ್ದ ಆಕಳುಗಳು, ಆರೇಳು ಲೀಟರ್ ಕೊಡುತ್ತಿವೆ. ಆದರೆ, ಹಸುಗಳಿಗೆ ಮೇವು, ನೀರು, ಬೂಸ, ಹಿಂಡಿಯಂತಹ ಪಶು ಆಹಾರ ಸೇರಿದಂತೆ ನಿರ್ವಹಣೆಗಾಗಿ ಮಾಡುತ್ತಿರುವ ಖರ್ಚು ಮಾತ್ರ ಅಷ್ಟೇ ಇದೆ ಎನ್ನುತ್ತಾರೆ ರೈತರು.

‘ರಾಸುಗಳಿಗೆ ಹಿಂಡಿ, ಬೂಸಾದಂತಹ ಪಶು ಆಹಾರವನ್ನು ಎಷ್ಟೇ ಕೊಟ್ಟರೂ, ಹಸಿ ಮೇವು ಅಥವಾ ರಾಗಿ ಹುಲ್ಲು ತಿಂದಾಗ ಕೊಡುವಷ್ಟು ಹಾಲನ್ನು ಕೊಡುವುದಿಲ್ಲ. ಮಳೆ ಇಲ್ಲದ ಕಾರಣ, ಹೊರಗಡೆ ಹಸಿರ ಮೇವೂ ಇಲ್ಲ. ಬಣವೆಗಳಲ್ಲಿರುವ ಮೇವು ದಿನೇ ದಿನೇ ಕಡಿಮೆಯಾಗುತ್ತಿದೆ. ರಾಸುಗಳು ಸೊರಗುತ್ತಿವೆ. ಅವುಗಳನ್ನು ಸಾಕುವುದು ಕಷ್ಟ’ ಎನ್ನುವುದು ರೈತರ ಅಳಲು.

‘ಹಾಲು ಉತ್ಪಾದನೆ ಕುಸಿದಿದೆ. ಈಗ ಬರುತ್ತಿರುವ ಹಣ ರಾಸುಗಳ ನಿರ್ವಹಣೆಯ ಖರ್ಚಿಗೆ ಸಾಕಾಗುತ್ತಿದೆ. ಆರ್ಥಿಕವಾಗಿ ನಷ್ಟ ಆಗುತ್ತಿದೆ‘ ಎಂದು ಬೇಸರ ತೋಡಿಕೊಂಡರು ರೈತ ಮಹಿಳೆ ಶಾಂತಮ್ಮ. ‘ಬೇಸಿಗೆಯಲ್ಲಿ ನಿತ್ಯ ಹಸುಗಳ ಮೈ ತೊಳೆದು, ಹೊಟ್ಟೆ ತುಂಬಾ ಮೇವು ಹಾಕಿ, ಹೊರಗಿನ ಆಹಾರ ಕೊಟ್ಟರೆ ಉತ್ತಮ ಹಾಲು ಸಿಗುತ್ತದೆ. ಈ ವರ್ಷ ಮಳೆ ಕೊರತೆಯಿಂದಾಗಿ, ರಾಸುಗಳ ಆರೈಕೆ ಹೇಗೆ ಎಂಬುದೇ ಚಿಂತೆಯಾಗಿದೆ‘ ಎನ್ನುತ್ತಾರೆ ಅವರು.

ಚನ್ನೋಹಳ್ಳಿ ಹಾಲಿನ ಡೇರಿಯಲ್ಲಿ ಹಾಲು ಸಂಗ್ರಹಿಸುತ್ತಿರುವುದು
ಚನ್ನೋಹಳ್ಳಿ ಹಾಲಿನ ಡೇರಿಯಲ್ಲಿ ಹಾಲು ಸಂಗ್ರಹಿಸುತ್ತಿರುವುದು

Cut-off box - ಡೇರಿಗೆ ಬರುತ್ತಿರುವ ಹಾಲಿನಲ್ಲಿ ಫ್ಯಾಟ್ (ಕೊಬ್ಬು) ಕಡಿಮೆಯಾಗಿದೆ. ಹಾಲಿನ ಗುಣಮಟ್ಟವೂ ಇಳಿದಿದೆ. ರೈತರಿಗೆ ಹಾಗೂ ಸಂಘಕ್ಕೆ ಇದರಿಂದ ಆದಾಯ ಕುಂಠಿತವಾಗಿದೆ. -ವನಿತಾ ಕಾರ್ಯನಿರ್ವಾಹಕ ಅಧಿಕಾರಿ ಹಾಲೇನಹಳ್ಳಿ ಡೇರಿ ಬಿಸಿಲ ಝಳಕ್ಕೆ ರಾಸುಗಳು ಬಳಲುತ್ತಿವೆ ಜೊಲ್ಲು ಸುರಿಸುತ್ತಿವೆ. ಬೆಳಿಗ್ಗೆ 8ಕ್ಕೆ ಬಿಸಿಲ ತಾಪ ಶುರುವಾಗುತ್ತದೆ. ಸಂಜೆ 4 ಆದರೂ ಕಡಿಮೆ ಆಗುತ್ತಿಲ್ಲ. ಇದು ರಾಸುಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. - ಹರೀಶ್ ಹಾಲು ಉತ್ಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT