ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಿತಿಗೆ ವರದಿ ಕೊಟ್ಟ ಪೊಲೀಸರು

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯ ಪ್ರಕರಣ
Last Updated 10 ಆಗಸ್ಟ್ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯ ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆ ನಡೆಸಿರುವ ವಿ.ವಿ. ಪುರಂ ಪೊಲೀಸರು, ವರದಿಯೊಂದನ್ನು ಸಿದ್ಧಪಡಿಸಿ ಉನ್ನತಮಟ್ಟದ ವಿಚಾರಣಾ ಸಮಿತಿಗೆ ಸಲ್ಲಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದ ಬೊಮ್ಮನಹಳ್ಳಿ ಸಮೀಪದ ಐಟಿಐ ಲೇಔಟ್‌ ನಿವಾಸಿ ರುದ್ರೇಶ್ ಸೇರಿದಂತೆ ಹಲವು ರೋಗಿಗಳನ್ನು ಜುಲೈ 9ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅದಾಗಿ ಏಳು ದಿನವಾದರೂ ಅವರಿಗೆ ಕಣ್ಣಿನ ದೃಷ್ಟಿ ಬಂದಿರಲಿಲ್ಲ.

‘ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಹಾಗೂ ಸಿಬ್ಬಂದಿ ವೈಫಲ್ಯದಿಂದಲೇ ತಮ್ಮ ಪತಿ ರುದ್ರೇಶ್ ಸೇರಿದಂತೆ ಹಲವು ರೋಗಿಗಳಿಗೆ ದೃಷ್ಟಿ ಬಂದಿಲ್ಲ’ ಎಂದು ಆರೋಪಿಸಿ ಸುಜಾತ ಎಂಬುವರು ದೂರು ನೀಡಿದ್ದರು. ನಿರ್ಲಕ್ಷ್ಯ (ಐಪಿಸಿ 338) ಆರೋಪದಡಿ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ತಮ್ಮ ವ್ಯಾಪ್ತಿಯ ತನಿಖೆ ಮುಗಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿ ವರದಿ ನೀಡುವಂತೆ, ಸರ್ಕಾರ ರಚಿಸಿರುವ ಉನ್ನತಮಟ್ಟದ ವಿಚಾರಣಾ ಸಮಿತಿಯನ್ನು ಕೋರಿದ್ದಾರೆ.

ವೈದ್ಯರ ಹೇಳಿಕೆ ಸಂಗ್ರಹ: ‘ರೋಗಿಗಳ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಹಾಗೂ ಸಿಬ್ಬಂದಿಗೆ, ಪ್ರಕರಣ ದಾಖಲಾಗುತ್ತಿದ್ದಂತೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ವೈದ್ಯರು ಹಾಗೂ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯೂ ಆಂತರಿಕ ವಿಚಾರಣೆ ನಡೆಸಿ ವರದಿ ನೀಡಿದೆ. ಅದೆಲ್ಲವನ್ನೂ ಸಮಿತಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

‘ಇದೊಂದು ವೈದ್ಯಕೀಯ ವಿಷಯಕ್ಕೆ ಸಂಬಂಧಪಟ್ಟ ಪ್ರಕರಣ. ನಮ್ಮಿಂದ ತನಿಖೆ ನಡೆಸುವುದು ಕಷ್ಟ. ಹೀಗಾಗಿಯೇ ಪ್ರಾಥಮಿಕ ತನಿಖೆ ಮಾತ್ರ ನಡೆಸಲಾಗಿದೆ. ಹೆಚ್ಚಿನ ತನಿಖೆಯನ್ನೂ ಸಮಿತಿಯು ನಡೆಸಲಿದ್ದು, ಅದು ನೀಡುವ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT