ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಐಡಿಎಲ್‌ ಪ್ರೀತಿಗಾಗಿ ರಾಶಿ ಬಿತ್ತೇ ಕಸ?

ಕಸ ವಿಲೇವಾರಿ ಸಮಸ್ಯೆ ಹಿಂದೆ ಕಾಣದ ಕೈಗಳ ಕೈವಾಡ: ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪ
Last Updated 31 ಜುಲೈ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿಟಗಾನಹಳ್ಳಿ ಹಾಗೂ ಮಾರೇನಹಳ್ಳಿಯ ಕ್ವಾರಿಗಳ ಭೂಭರ್ತಿ ಘಟಕಗಳಲ್ಲಿ ಕಸದ ವಿಲೇವಾರಿ ಹೊಣೆಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್‌) ವಹಿಸುವುದಕ್ಕೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದಲೇ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಲಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ’ ಎಂದು ಪಾಲಿಕೆ ವಿರೋಧ ಪಕ್ಷವಾದ ಬಿಜೆಪಿ ಆರೋಪಿಸಿದೆ.

‘ಬೆಲ್ಲಹಳ್ಳಿ ಕ್ವಾರಿ ಭರ್ತಿಯಾಗುತ್ತಿರುವುದು ಪಾಲಿಕೆ ಅಧಿಕಾರಿಗಳಿಗೆ ಮೊದಲೇ ಗೊತ್ತಿತ್ತು. ಮಿಟಗಾನಹಳ್ಳಿ ಹಾಗೂ ಮಾರೇನಹಳ್ಳಿ ಕ್ವಾರಿಗಳಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಮೊದಲೇ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಟೆಂಡರ್‌ ಕರೆದಂತೆ ನಾಟಕ ಮಾಡಲಾಗಿದೆ. ಟೆಂಡರ್‌ನಲ್ಲಿ ಯಾರೂ ಭಾಗವಹಿಸಲಿಲ್ಲ ಎಂಬ ಕಾರಣ ನೀಡಿ ಕೆಆರ್‌ಡಿಎಲ್‌ಗೆ ಈ ಜವಾಬ್ದಾರಿ ವಹಿಸಲು ಪಾಲಿಕೆ ಮುಂದಾಗಿರುವುದು ಸರಿಯಲ್ಲ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.

‘ಟೆಂಡರ್‌ ಅರ್ಜಿ ಸಲ್ಲಿಸುವಾಗ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಮಾಹಿತಿಯನ್ನು ಅಪ್‌ಲೋಡ್ ಮಾಡಿರಲಿಲ್ಲ. ಹಾಗಾಗಿ ಯಾರೂ ಭಾಗವಹಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ’ ಎಂದು ದೂರಿದರು.

ಮಿಟಗಾನಹಳ್ಳಿ ಭೂಭರ್ತಿ ಘಟಕವು ದುರ್ವಾಸನೆ ಬೀರುತ್ತಿದೆ ಎಂಬ ಕಾರಣಕ್ಕೆ ಅಲ್ಲಿ ಕಸ ವಿಲೇವಾರಿ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. 2017ರ ಸೆಪ್ಟೆಂಬರ್‌ನಿಂದ ಈ ಕ್ವಾರಿಯ ಬಳಕೆ ಸ್ಥಗಿತಗೊಳಿಸಲಾಗಿತ್ತು.

ಈ ಕ್ವಾರಿಯಲ್ಲಿ ತುಂಬಿರುವ ಲೀಚೆಟ್‌ ಮಿಶ್ರಿತ ಮಳೆ ನೀರನ್ನು ಶುದ್ಧೀಕರಿಸಲು ಎರೇಟರ್ ಅಳವಡಿಸಲಾಗಿದೆ. ಲೀಚೆಟ್‌ ಸಂಸ್ಕರಣಾ ಘಟಕ ಸ್ಥಾಪನೆಗೂ ಕ್ರಮ ಕೈಗೊಂಡಿರುವ ಪಾಲಿಕೆ ಮತ್ತೆ ಇಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವಂತೆ ಸ್ಥಳಿಯರ ಮನವೊಲಿಸಿತ್ತು.

ನಿತ್ಯ 600 ಟನ್‌ಗಳಷ್ಟು ಕಸ ತುಂಬಿದರೂ ಸುಮಾರು 36 ತಿಂಗಳು ಈ ಕ್ವಾರಿಯನ್ನು ಬಳಸಿಕೊಳ್ಳಲು ಸಾಧ್ಯವಿದೆ. ನಿತ್ಯ 1000 ಟನ್‌ ಕಸ ತುಂಬಿದರೆ 15 ತಿಂಗಳು ಬಳಸಿಕೊಳ್ಳಲು ಸಾಧ್ಯವಿದೆ ಎಂದು ಪಾಲಿಕೆ ಅಧಿಕಾರಿಗಳು ಅಂದಾಜಿಸಿದ್ದರು.

ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಇಲ್ಲಿ ಘನತ್ಯಾಜ್ಯ ಸಂಸ್ಕರಣೆ ಮತ್ತು ವಿಲೇ ಮಾಡಲು 2018–19ನೇ ಸಾಲಿಗೆ ₹71.90 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಿತ್ತು.

ಟೆಂಡರ್‌ ಕರೆದು ಕಾಮಗಾರಿ ಅನುಷ್ಠಾನಗೊಳಿಸಿದರೆ ವಿಳಂಬವಾಗುತ್ತದೆ. ಅದರ ಬದಲು ಕಾಮಗಾರಿಯನ್ನು ಕೆಆರ್‌ಡಿಎಲ್‌ಗೆ ವಹಿಸುವುದಕ್ಕೆ 1999ರ ಕೆಟಿಪಿಪಿ ಕಾಯ್ದೆಯ ಕಲಂ 4 (ಎ) ಅಡಿ ವಿನಾಯಿತಿ ನೀಡಬೇಕು ಎಂದು ಪಾಲಿಕೆ ಕೋರಿತ್ತು. ನಗರಾಭಿವೃದ್ಧಿ ಇಲಾಖೆ ಇದಕ್ಕೆ ಅನುಮತಿ ನೀಡಿರಲಿಲ್ಲ. ಅದರ ಬದಲು ‘ಕಸ ನಿರ್ವಹಣೆಯು ಬಿಬಿಎಂಪಿ ಕಡ್ಡಾಯ ಕಾರ್ಯ. ಸರ್ಕಾರ ಇದರ ಕ್ರಿಯಾ ಯೋಜನೆಗೂ ಅನುಮೋದನೆ ನೀಡಿದೆ. ಈಗ ಕಾಮಗಾರಿಯಲ್ಲಿ ಬದಲಾವಣೆ ಕೋರಿರುವುದು ಏಕೆ’ ಎಂದು ಜು.11ರಂದು ವಿವರಣೆ ಕೇಳಿತ್ತು.

‘ಪಾಲಿಕೆ ಹಾಗೂ ಕೆಆರ್‌ಐಡಿಎಲ್‌ ನಡುವೆ ಅಕ್ರಮ ನಂಟು ಇದೆ. ಹಾಗಾಗಿ ಎಲ್ಲ ಕಾಮಗಾರಿಗಳನ್ನು ಈ ಸಂಸ್ಥೆಗೆ ವಹಿಸಲು ಪಾಲಿಕೆ ಉತ್ಸಾಹ ತೋರಿಸುತ್ತಿದೆ. ಈ ಬಗ್ಗೆ ನಾನು ಜನವರಿಯಲ್ಲೇ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೆ. ಯಾವುದೇ ಕಾಮಗಾರಿಯನ್ನು ಟೆಂಡರ್‌ ಕರೆಯದೆಯೇ ನಿರ್ವಹಿಸಬಾರದು ಎಂಬು ಮುಖ್ಯ ಕಾರ್ಯದರ್ಶಿಯವರು ಈ ಹಿಂದೆಯೇ ಆದೇಶ ಮಾಡಿದ್ದರು. ಈಗ ಕಸ ವಿಲೇವಾರಿಯನ್ನೂ ಕೆಆರ್‌ಐಡಿಎಲ್‌ಗೆ ವಹಿಸಲು ಮುಂದಾಗಿರುವುದು ವಿಪರ್ಯಾಸ’ ಎಂದು ಕಾಡುಮಲ್ಲೇಶ್ವರ ವಾರ್ಡ್‌ನ ಪಾಲಿಕೆ ಸದಸ್ಯ ಮಂಜುನಾಥ ರಾಜು ಬೇಸರ ವ್ಯಕ್ತಪಡಿಸಿದರು.

‘ಮಿಟಗಾನಹಳ್ಳಿ, ಮಾರೇನಹಳ್ಳಿ ಕ್ವಾರಿಗಳಲ್ಲಿ ಕಸ ವಿಲೇವಾರಿಗೆ ಟೆಂಡರ್ ಆಹ್ವಾನಿಸಲು 15 ದಿನಗಳ ಹಿಂದೆ ಅನುಮೋದನೆ ಸಿಕ್ಕಿದೆ. ಅದರಂತೆ ಟೆಂಡರ್‌ ಕೂಡಾ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಆ.7ರವರೆಗೆ ಅವಕಾಶ ಇದೆ’ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT