ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ರಾಜ್ಯಪಾಲರ ತೀರ್ಮಾನ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತು ರಾಜಭವನದ ಮಧ್ಯೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಶನಿವಾರ ಸಂಜೆ ಹೊತ್ತಿಗೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯಪಾಲರ ನಿರ್ಣಯಕ್ಕೆ ಧಿಕ್ಕಾರ ಹೇಳುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡಕೂಡದು, ನಿಮ್ಮ ಜತೆ ಒಗ್ಗಟ್ಟಿನಿಂದ ನಾವು ನಿಲ್ಲಲಿದ್ದೇವೆ ಎಂಬ ನಿರ್ಣಯವನ್ನೂ ಸಚಿವ ಸಂಪುಟದ ಸಹೋದ್ಯೋಗಿಗಳು ಕೈಗೊಂಡರು.
ಬಳಿಕ ವಿಧಾನಸೌಧದಲ್ಲಿ ಒಟ್ಟಾಗಿಯೇ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಈ ಕುರಿತ ನಿರ್ಣಯವನ್ನು ಪ್ರಕಟಿಸಿದರು. ತನಿಖೆಗೆ ಅನುಮತಿ ನೀಡಿರುವುದರ ವಿರುದ್ಧ ಕಾನೂನು ಹೋರಾಟಕ್ಕೂ ಸರ್ಕಾರ ತಯಾರಿ ನಡೆಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ಆರಂಭಿಸಿದ್ದಾರೆ. ಸಂಪುಟದ ಎಲ್ಲ ಸದಸ್ಯರು ಮತ್ತು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯವರ ಬೆನ್ನಿಗೆ ನಿಂತಿದ್ದಾರೆ. ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಮುಖ್ಯಮಂತ್ರಿಯವರ ರಾಜೀನಾಮೆಗೆ ಆಗ್ರಹಿಸಿವೆ.
ವಕೀಲರಾದ ಟಿ.ಜೆ. ಅಬ್ರಹಾಂ, ಪ್ರದೀಪ್ ಕುಮಾರ್ ಎಸ್.ಪಿ. ಮತ್ತು ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮನವಿಗಳನ್ನು ಪುರಸ್ಕರಿಸಿರುವ ರಾಜ್ಯಪಾಲರು, ಮೂರೂ ದೂರುಗಳಲ್ಲಿರುವ ಆರೋಪಗಳ ಕುರಿತು ತನಿಖೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17–ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218ರಡಿ ಒಪ್ಪಿಗೆ ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಕೋರಿ ಅಬ್ರಹಾಂ ಜುಲೈ 26ರಂದು ಮನವಿ ಸಲ್ಲಿಸಿದ್ದರು. ಅದೇ ದಿನ ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದ ರಾಜ್ಯಪಾಲರು, ವಿವರಣೆ ಕೇಳಿದ್ದರು. ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಣಯವನ್ನು ಆಗಸ್ಟ್ 1ರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿಯವರು ಆ.3ರಂದು ರಾಜ್ಯಪಾಲರಿಗೆ ಉತ್ತರ ಸಲ್ಲಿಸಿದ್ದರು.
ಎರಡು ವಾರ ಮೌನವಾಗಿದ್ದ ರಾಜ್ಯಪಾಲರು, ತನಿಖೆಗೆ ಅನುಮತಿ ನೀಡುವ ನಿರ್ಧಾರವನ್ನು ಶುಕ್ರವಾರ ತಡರಾತ್ರಿ ಕೈಗೊಂಡಿದ್ದಾರೆ. ಮೂರೂ ಅರ್ಜಿದಾರರಿಗೆ ಶನಿವಾರ ಆದೇಶದ ಪ್ರತಿಯನ್ನು ಹಸ್ತಾಂತರಿಸಲಾಯಿತು.
ಶೋಕಾಸ್ ನೋಟಿಸ್ ನೀಡಿದ್ದ ರಾಜ್ಯಪಾಲರ ಕ್ರಮಕ್ಕೇ ಆಕ್ಷೇಪಿಸಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಈಗ ತನಿಖೆಗೆ ಅನುಮತಿ ನೀಡಿರುವುದನ್ನೂ ವಿರೋಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.