ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವಾಣಿಯಲ್ಲಿನ ಬದಲಾವಣೆ ಖಂಡನಾರ್ಹ: ಎಂ.ಸೂರ್ಯ ಪ್ರಸಾದ್‌

Last Updated 6 ಡಿಸೆಂಬರ್ 2021, 4:39 IST
ಅಕ್ಷರ ಗಾತ್ರ

ಬೆಂಗಳೂರು: ‘ಆಕಾಶವಾಣಿಯು ಶಾಸ್ತ್ರೀಯ ಸಂಗೀತದ ತವರು ಮನೆ ಇದ್ದಂತೆ. ಈಗ ಈ ಕೇಂದ್ರದಲ್ಲಿ ಸಂಗೀತ ಕಾರ್ಯಕ್ರಮಗಳ ಪ್ರಸಾರ ನಿಂತೇ ಹೋದಂತಾಗಿದೆ. ಸಂಗೀತದ ಅಭಿವ್ಯಕ್ತಿ ಹಾಗೂ ಜನಪ್ರಿಯತೆಯ ಏಕೈಕ ಬಲಿಷ್ಠ ಮಾಧ್ಯಮವೆನಿಸಿದ್ದ ಆಕಾಶವಾಣಿಯಲ್ಲಿ ಆಗುತ್ತಿರುವ ಈ ಬದಲಾವಣೆ ಖಂಡನಾರ್ಹ’ ಎಂದು ಕಲಾ ವಿಮರ್ಶಕ ಎಂ.ಸೂರ್ಯ ಪ್ರಸಾದ್‌ ಹೇಳಿದರು.

ಬೆಂಗಳೂರು ಗಾಯನ ಸಮಾಜವು ‘ಸಂಗೀತ ಕಲಾರತ್ನ’ ವಿದ್ವಾನ್ ಎಸ್.ಕೃಷ್ಣ ಮೂರ್ತಿ ನೆನಪಿನಾರ್ಥವಾಗಿ ಭಾನುವಾರ ಹಮ್ಮಿಕೊಂಡಿದ್ದ 51ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಂಗಳೂರು ಆಕಾಶವಾಣಿಯ ‘ಅಮೃತವರ್ಷಿಣಿ’ ವಾಹಿನಿ ಸ್ಥಳೀಯ ಕಲಾವಿದರಿಗೆ ಮಹತ್ವದ ವೇದಿಕೆಯಾಗಿತ್ತು. ಅದನ್ನು ರಾಷ್ಟ್ರೀಯ ವಾಹಿನಿಯೊಂದರ ಜೊತೆ ವಿಲೀನ ಮಾಡಲು ಸರ್ಕಾರ ಮುಂದಾಗಿದೆ. ಈ ನಿರ್ಧಾರದ ವಿರುದ್ಧ ಹೋರಾಟ ಮುಂದುವರಿಸಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಹಲವು ಆಕಾಶವಾಣಿ ಕೇಂದ್ರಗಳಿವೆ. ಹಣ ಗಳಿಕೆ ಹಾಗೂ ಮನರಂಜನೆಗಳಷ್ಟೇ ಅವುಗಳ ಗುರಿ ಆಗಬಾರದು. ಮನೋವಿಕಾಸ ಹಾಗೂ ಜ್ಞಾನ ಪ್ರಸಾರದ ಜೊತೆಗೆ ಸಂಸ್ಕೃತಿ, ಸಂಗೀತ, ನೃತ್ಯ ಕಲೆಗಳ‍ಪೋಷಣೆ ಮತ್ತು ಪ್ರಚಾರದ ಹೊಣೆಯನ್ನೂ ಅವು ಹೊರಬೇಕು. ಪತ್ರಿಕೆಗಳೂ ಕಲಾ ವಿಮರ್ಶೆ, ಅವುಗಳ ಪರಿಚಯದ ಕುರಿತ ಅಂಕಣ ಮತ್ತು ಲೇಖನಗಳನ್ನು ಪ್ರಕಟಿಸುವ ಮೂಲಕ ಓದುಗರ ದೃಷ್ಟಿಯನ್ನು ಅವುಗಳತ್ತ ಹೊರಳಿಸಬೇಕು. ಓದುಗರ ಸಂಖ್ಯೆ ಕಡಿಮೆ ಎಂದು ಅವುಗಳನ್ನು ಕಡೆಗಣಿಸಬಾರದು’ ಎಂದು ಸಲಹೆ ನೀಡಿದರು.

ಸಂಸ್ಕಾರ ಭಾರತಿ ಸಂಸ್ಥೆಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಪ.ರಾ.ಕೃಷ್ಣಮೂರ್ತಿ,‘ಗಾಯನ ಸಮಾಜವು ಸಂಗೀತ ಗಂಗೆಯ ತೀರ್ಥಕ್ಷೇತ್ರವಿದ್ದಂತೆ. ಸಂಗೀತ ಗಂಗೆಯು ಸರ್ವಪಥ ಗಾಮಿನಿ. ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ಶುದ್ಧಗೊಳಿಸುತ್ತಾ ನಮ್ಮನ್ನು ಸನ್ಮಾರ್ಗಕ್ಕೆ ಹಚ್ಚುವಂತಹ ಶಕ್ತಿ ಸಂಗೀತಕ್ಕಿದೆ. ನಮ್ಮ ದೇಶ, ಸಂಸ್ಕೃತಿ, ಹಿಂದುತ್ವ ಹಾಗೂ ರಾಷ್ಟ್ರೀಯತೆಯನ್ನು ಜೀವಂತವಾಗಿಟ್ಟಿದ್ದು ಸಂಗೀತ’ ಎಂದು ತಿಳಿಸಿದರು.

‘ವ್ಯಾವಹಾರಿಕ ಉತ್ಪತ್ತಿಗೆ ಸಂಗೀತ ತತ್ವ ಒತ್ತೆ ಇಡದಿರಿ’

‘ಸಂಗೀತದಿಂದ ನಾನು ಬದುಕಿದ್ದೇನೆ ಎಂಬ ಭಾವನೆ ಪ್ರತಿಯೊಬ್ಬ ಸಂಗೀತಗಾರರಲ್ಲೂ ಇರಬೇಕು. ಸಂಗೀತದ ತತ್ವಗಳನ್ನು ವ್ಯಾವಹಾರಿಕ ಉತ್ಪತ್ತಿಗೆ ಒತ್ತೆ ಇಡಬಾರದು’ ಎಂದುತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೀಠಾಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

‘ನಮ್ಮ ಸಂಗೀತಗಾರರುಹಿಂದೂ ಸನಾತನ ಧರ್ಮವನ್ನು ತೆಗಳುವುದಕ್ಕಾಗಿ ಹೇಗೆ ಪಕ್ಷಾಂತರ ಹಾಗೂ ಧರ್ಮಾಂತರ ಮಾಡಿದ್ದಾರೆ ಎಂಬುದು ತಿಳಿದಿದೆ. ಈ ಸಮಾಜದಿಂದ ಎಲ್ಲವನ್ನೂ ಪಡೆದ ಅವರು ಹೀಗೇಕೆ ಮಾಡುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳನ್ನು ನಮ್ಮದಾಗಿಸಿಕೊಳ್ಳಲು ಇರುವ ಅತ್ಯಂತ ಪ್ರಭಾವಿ ಅಸ್ತ್ರ ಸಂಗೀತ. ಈಗ ಆಧ್ಯಾತ್ಮಿಕ ಶಕ್ತಿ ಮಸುಕಾಗುತ್ತಿದ್ದು, ವೈಜ್ಞಾನಿಕ ಶಕ್ತಿ ನಾಗಾಲೋಟದಲ್ಲಿ ಸಾಗುತ್ತಿದೆ. ನಾವು ಬಿಟ್ಟ ಕ್ಷಿಪ‍ಣಿ ಯಶಸ್ವಿಯಾಗಿ ಗುರಿ ಮುಟ್ಟಿದೆ. ಆದರೆ, ಮನುಷ್ಯ ಸಾಗಬೇಕಿದ್ದ ಸತ್ಪಥ ತಪ್ಪಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT