ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಗಣೇಶ ಮೆರವಣಿಗೆ ಮೇಲೆ ದಾಳಿ ಮಾಡಿ ಸುಮಾರು 25 ಅಂಗಡಿಗಳಿಗೆ ಬೆಂಕಿ ಹಚ್ಚಿದ ನಾಗಮಂಗಲ ಘಟನೆಯ ಬಗ್ಗೆ ಎನ್‌ಐಎ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಸ್ಥಳೀಯರು ಅಪರಿಚಿತ ಮುಖಗಳನ್ನು ಗುರುತಿಸಿ ವರದಿ ಮಾಡುತ್ತಾರೆ. ಅಲ್ಲದೆ ಕೇರಳದಿಂದ ಬರುವ ಸಮಾಜ ವಿರೋಧಿ ಶಕ್ತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ವೈಫಲ್ಯಕ್ಕೆ ಕರ್ನಾಟಕ ಸರ್ಕಾರವೇ ಹೊಣೆಯಾಗಬೇಕು!’ ಎಂದು ಬರೆದುಕೊಂಡಿದ್ದಾರ.
‘ನಾಗಮಂಗಲ ಘಟನೆ ಕೇವಲ ಸ್ಥಳೀಯ ವಿಷಯವಲ್ಲ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬೆದರಿಕೆಯಾಗಿದೆ. ನಿಷೇಧಿತ ಪಿಎಫ್‌ಐ ಅಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿದೆ. ನನ್ನ ಮೇಲೆ ಎಫ್‌ಐಆರ್ ದಾಖಲಾದ ಬಗ್ಗೆ ನಾನು ಹೆದರುವುದಿಲ್ಲ ಅಥವಾ ಮೌನವಾಗಿರುವುದಿಲ್ಲ, ಅದನ್ನು ಎದುರಿಸುತ್ತೇನೆ. ನ್ಯಾಯವು ಮೇಲುಗೈ ಸಾಧಿಸಬೇಕು, ಹೊಣೆಗಾರರು ನ್ಯಾಯಕ್ಕೆ ತಲೆಬಾಗಬೇಕು’ ಎಂದಿದ್ದಾರೆ.