ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’

Published 7 ಏಪ್ರಿಲ್ 2024, 16:04 IST
Last Updated 7 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಶಿಬಿರ, ಕಾರ್ಯಾಗಾರ, ಅಭಿವೃದ್ಧಿ ಕೆಲಸಗಳು ಹಾಗೂ ಕಾರ್ಯಕ್ರಮಗಳ ಮೂಲಕ ತನ್ನ ಹುಟ್ಟೂರಿನ ಜನರ ಜೀವನಮಟ್ಟ ಹೆಚ್ಚಿಸಲು  ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ, ಪ್ರತಿ ವರ್ಷ ತನ್ನೂರು ನಾಗತಿಹಳ್ಳಿಯಲ್ಲಿ ‘ಸಂಸ್ಕೃತಿ ಹಬ್ಬ‘ವನ್ನು ಆಯೋಜಿಸುತ್ತಾ ಬಂದಿದ್ದಾರೆ.

ಮಂಡ್ಯ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ನಡೆಯುವ ಎರಡು ದಿನಗಳ ‘ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ‘ ಹಬ್ಬದಲ್ಲಿ ವೈದ್ಯಕೀಯ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ನಾಡಿನ ಖ್ಯಾತ ವಿದ್ವಾಂಸರು, ಸಾಧಕರನ್ನು ಆಹ್ವಾನಿಸಿ, ತನ್ನ ಊರಿನ ಜನತೆಯ ವೈಚಾರಿಕ ತಿಳಿವನ್ನು ಮತ್ತಷ್ಟು ವಿಸ್ತಾರಗೊಳಿಸಲು ಪ್ರಯತ್ನಿಸುತ್ತಾರೆ. ಸರ್ಕಾರದ ಬೆಂಬಲವಿಲ್ಲದೆ ಎರಡು ದಶಕಗಳಿಂದ ಸ್ವಂತ ಖರ್ಚಿನಲ್ಲಿ ಅವರು ನಡೆಸುವ ಈ ‘ಹಬ್ಬ‘ ಅನೇಕ ಕಾರಣಗಳಿಗಾಗಿ ವಿಶಿಷ್ಟವಾದುದು.

ಈ ವರ್ಷವೂ ಏ.8 ಮತ್ತು 9ರಂದು ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ನಡೆಯುತ್ತಿದೆ. ಇದು ‘ಹಬ್ಬ‘ದ 20ನೇ ವಾರ್ಷಿಕೋತ್ಸವ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಿಹಿ ಕನಸು ರಂಗಮಂದಿರದಲ್ಲಿ ಸೋಮವಾರ ಬೆಳಿಗ್ಗೆ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಎಂ.ಪುಷ್ಪಾವತಿ, ಸಹ ಪ್ರಾಧ್ಯಾಪಕ ಸಾರಾಂಶ್ ಜೈನ್, ಮಹದೇವಪ್ಪ, ತಂತ್ರಜ್ಞರಾದ ಶಿಮೂಲಾ, ತೇಜಸ್ವಿನಿ, ಇಳಕ್ಕಿಯಾ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಅಲ್ಲದೇ ಬೆಂಗಳೂರು ಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್, ಹಿರಿಯ ವೈದ್ಯೆ ಸವಿತಾ, ಶ್ರಿಯಾ ಶ್ರೀಧರ್ ಸೇರಿದಂತೆ ಹಲವು ವೈದ್ಯರು ಭಾಗವಹಿಸಲಿದ್ದಾರೆ. ‌ಜತೆಗೆ, ಬೆಂಗಳೂರಿನ ಎಂಡೋಕ್ರಿನಾಲಜಿ ಮತ್ತು ಮಧುಮೇಹ ರೋಗ ಚಿಕಿತ್ಸಾ ಸಂಶೋಧನಾ ಕೇಂದ್ರದ ಎ.ಸಿ.ಸಂಜಯ ರೆಡ್ಡಿ, ಬಿ.ಆರ್.ಅರುಣಾ ಕೃಷ್ಣನ್, ನಾಗತಿಹಳ್ಳಿ ಶ್ರೀನಿವಾಸ್ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮೈಕ್ರೊ ಲ್ಯಾಬ್ ಸಂಸ್ಥೆ ಉಚಿತ ಔಷಧ ಒದಗಿಸಲಿದೆ.

ಅಂದೇ ಸಂಜೆ 5ಕ್ಕೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದೆ‌. ನಟನ ರಂಗಶಾಲೆಯಿಂದ ಮಂಡ್ಯ ರಮೇಶ್ ನಿರ್ದೇಶನದಲ್ಲಿ ‘ಸ್ಥಾವರವೂ ಜಂಗಮ’ ನಾಟಕ ಪ್ರದರ್ಶನಗೊಳ್ಳಲಿದೆ.

ಏ.9ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ‘ಗ್ರಾಮಮುಖಿ ಸಂಪುಟ– 2’ ಕೃತಿಯನ್ನು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಬಿಡುಗಡೆ ಮಾಡಲಿದ್ದಾರೆ. ಮೂಡಬಿದಿರೆ ಆಳ್ವಾಸ್‌ ಪ್ರತಿಷ್ಠಾನದ ಮೋಹನ್‌ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಕೃಷ್ಣೇಗೌಡ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ವೀರಕಪುತ್ರ ಶ್ರೀನಿವಾಸ್‌ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ‘ನಮ್ಮ–ನಿಮ್ಮ ಹತ್ತೊಂಬತ್ತು ಹೆಜ್ಜೆಗಳು’ ಎಂಬ ಚಿತ್ರಮಾಲಿಕೆ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ‘ನರಶಾರ್ದೂಲ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನ ಆಯೋಜಿಸಲಾಗಿದೆ. ಮಂಗಳವಾರ ರಾತ್ರಿ 11ರ ತನಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದು ಸಂಸ್ಕೃತಿ ಹಬ್ಬದ ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT