ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಯಪ್ಪನಹಳ್ಳಿ–ಕೆ.ಆರ್‌.ಪುರ, ಕೆಂಗೇರಿ–ಚಲ್ಲಘಟ್ಟ ಮೆಟ್ರೊ ಸಂಚಾರ ನಾಳೆ ಆರಂಭ!

ನೇರಳೆ ಮಾರ್ಗದ ವಿಸ್ತರಿತ ಮಾರ್ಗಗಳು: ಉದ್ಘಾಟನೆಯಿಲ್ಲದೇ ಅಕ್ಟೋಬರ್ 9ರಿಂದಲೇ ಆರಂಭ: ಉದ್ಘಾಟನೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಜಟಾಪಟಿ
Published 8 ಅಕ್ಟೋಬರ್ 2023, 14:28 IST
Last Updated 8 ಅಕ್ಟೋಬರ್ 2023, 14:28 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ–ಕೆ.ಆರ್‌. ಪುರ ಹಾಗೂ ಕೆಂಗೇರಿ–ಚಲ್ಲಘಟ್ಟದ ನಡುವೆ ಅ.9ರಂದು ಮೆಟ್ರೊ ರೈಲು ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 5 ಗಂಟೆಗೆ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದೆ. ರಾತ್ರಿ 10.45ಕ್ಕೆ ದಿನದ ಕೊನೆಯ ಮೆಟ್ರೊ ಸಂಚರಿಸಲಿದೆ.

ವಿಸ್ತರಿತ ಪ್ರದೇಶ ಸೇರಿ ಈಗ ನೇರಳೆ ಮಾರ್ಗವು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಚಲ್ಲಘಟ್ಟದವರೆಗೆ 43.49 ಕಿಲೋಮೀಟರ್‌ ದೂರವಿರಲಿದೆ. ಒಟ್ಟು 37 ಮೆಟ್ರೊ ನಿಲ್ದಾಣಗಳಿವೆ. ನೇರಳೆ ಮತ್ತು ಹಸಿರು ಮಾರ್ಗ ಸೇರಿ ಮೆಟ್ರೊ ಸಂಪರ್ಕ ಜಾಲವು 69.66 ಕಿ.ಮಿ. ಇದ್ದಿದ್ದು, 73.81 ಕಿ.ಮಿ.ಗೆ ವಿಸ್ತರಣೆಗೊಂಡಿದೆ. 66 ಮೆಟ್ರೊ ನಿಲ್ದಾಣಗಳಿವೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮೆಟ್ರೊ ನೇರಳೆ ಮಾರ್ಗ: ಕೇಂದ್ರ, ರಾಜ್ಯ ಸರ್ಕಾರಗಳ ಜಟಾಪಟಿ

ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ಕಾಮಗಾರಿ ಪೂರ್ಣಗೊಂಡಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಯಲ್ಲಿ ಉದ್ಘಾಟನೆಗೆ ದಿನ ನಿಗದಿಯಾಗುತ್ತಿಲ್ಲ. ಯಾವ ಉದ್ಘಾಟನೆಗೂ ಕಾಯದೇ ಅ.9ರಂದೇ ರೈಲು ಆರಂಭಿಸಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು.

ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಬೈಯಪ್ಪನಹಳ್ಳಿ–ಕೆ.ಆರ್‌. ಪುರ ನಡುವೆ 2.10 ಕಿಲೋಮೀಟರ್‌ ಹಾಗೂ ಕೆಂಗೇರಿ–ಚಲ್ಲಘಟ್ಟದ ನಡುವೆ 2.05 ಕಿ.ಮೀ ಕಾಮಗಾರಿಗಳು ಜುಲೈಯಲ್ಲಿ ಪೂರ್ಣಗೊಂಡಿದ್ದವು. ಬಳಿಕ ಒಂದು ತಿಂಗಳುಗಳ ಕಾಲ ವಿವಿಧ ಪರೀಕ್ಷೆಗಳು ನಡೆದಿದ್ದವು. ಸೆಪ್ಟೆಂಬರ್‌ನಲ್ಲಿ ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಪರಿಶೀಲನೆ ನಡೆಸಿ, ವರದಿ ನೀಡಿದ್ದರು. ಆದರೆ, ಉದ್ಘಾಟನೆಗೆ ದಿನ ನಿಗದಿಯಾಗಿರಲಿಲ್ಲ. ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದರು.

2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ಕರೆಸಿ ಅದ್ದೂರಿಯಾಗಿ ಉದ್ಘಾಟಿಸಲು ತಯಾರಿ ನಡೆಸಿದ್ದರು. ಇನ್ನೊಂದು ಕಡೆಯಿಂದ ಪ್ರಧಾನಿಯವರಿಂದಲೇ ಉದ್ಘಾಟಿಸಬೇಕು ಎಂದು ಬಿಜೆಪಿ ಮುಂದಾಗಿತ್ತು. ಈ ಜಟಾಪಟಿಯಲ್ಲಿ ಚಾಲನೆಗೆ ದಿನ ನಿಗದಿಯಾಗಿರಲಿಲ್ಲ.

ಸಂಸದ ಪಿ.ಸಿ ಮೋಹನ್ ಪೋಸ್ಟ್

ಜನರಿಗೆ ತೀರ ಅಗತ್ಯವಾದ ಮೆಟ್ರೊ ನೇರಳೆ ಮಾರ್ಗದ ಉದ್ಘಾಟನೆಗೆ ಕಾಯುವುದು ಬೇಡ. ಕೂಡಲೇ ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ ಎಂದು ಬೆಂಗಳೂರು ಸೆಂಟ್ರಲ್‌ ಸಂಸದ ಪಿ.ಸಿ. ಮೋಹನ್‌ ‘ಎಕ್ಸ್‌’ ಕಾರ್ಪ್‌ನಲ್ಲಿ ಭಾನುವಾರ ಬೆಳಿಗ್ಗೆ ಪೋಸ್ಟ್‌ ಮಾಡಿ ಚರ್ಚೆ ಹುಟ್ಟುಹಾಕಿದ್ದರು. ‘ಉದ್ಘಾಟನೆಗೆ ಕಾಯದೇ ಅ.9ರಂದೇ ಮೆಟ್ರೊ ರೈಲು ಸಂಚಾರ ಆರಂಭಿಸಿ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿರುವುದನ್ನು ಮಧ್ಯಾಹ್ನ ‘ಎಕ್ಸ್‌’ ಕಾರ್ಪ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಮೆಟ್ರೊ ಚಾಲನೆಗೊಳ್ಳುವ ಬಗ್ಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ರಾತ್ರಿವರೆಗೆ ಖಚಿತ ಪಡಿಸದ ಕಾರಣ ಗೊಂದಲ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT