ಮಂಗಳವಾರ, ಜುಲೈ 5, 2022
21 °C
ಜನ–ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ l ಜಲಮೂಲ ಸೇರುತ್ತಿರುವ ಕ್ಯಾನ್ಸರ್‌ಕಾರಕ ರಾಸಾಯನಿಕ

ಕೆರೆಗಳ ಕೊಲ್ಲುತ್ತಿರುವ ‘ಡೈಯಿಂಗ್‌’ ಘಟಕ!

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುತ್ತ ಗಿಡ–ಮರ. ಮಧ್ಯೆ ಕಾಲುದಾರಿ. ಆ ದಾರಿ ಹಿಡಿದು ಒಳ ಹೋದರೆ ಕೆರೆಯೋ, ಕಾಲು ವೆಯೋ ಇರುತ್ತದೆ. ಇದರ ಬಳಿಯಲ್ಲಿಯೇ ನಿಮಗೆ ಕೆಲವು ತಗಡಿನ ಶೆಡ್‌ಗಳು ಕಾಣುತ್ತವೆ. ಅವು ‘ಡೈಯಿಂಗ್‌’ ಘಟಕಗಳು. ಬಟ್ಟೆಗೆ ಬಣ್ಣ ಹಾಕುವ ಯಂತ್ರಗಳು ಈ ಘಟಕದೊಳಗೆ ಸದ್ದು
ಮಾಡುತ್ತಿರುತ್ತವೆ. 

ಕೆ.ಆರ್.ಪುರದ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಈ ಡೈಯಿಂಗ್‌ ಘಟಕಗಳು ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳಿಗೆ ಪರವಾನಗಿ ಇಲ್ಲ. ಆದರೂ, ಅಕ್ರಮವಾಗಿ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಕೆರೆ ‍ಪಕ್ಕದ ಖಾಸಗಿ ಜಮೀನಿನಲ್ಲಿ ತಗಡಿನ ಶೆಡ್‌ಗಳನ್ನು ನಿರ್ಮಿಸಿ, ಈ ಘಟಕಗಳನ್ನು ನಡೆಸಲಾಗುತ್ತಿದೆ. 

ಡೈಯಿಂಗ್‌, ಪ್ರಿಂಟಿಂಗ್ ಹಾಗೂ ಕಲರಿಂಗ್‌ಗೆ ಬಳಸುವ ರಾಸಾಯನಿಕಯುಕ್ತ ನೀರನ್ನು ಯಾವುದೇ ಶುದ್ಧೀಕರಣ ಮಾಡದೆಯೇ ನೇರವಾಗಿ ಕೆರೆ–ಕಾಲುವೆಗಳಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ಹೊಲಗಳ ಬೆಳೆಗಳಿಗೆ ಹಾನಿಯಾಗುತ್ತಿದೆ. ರಾಸಾಯನಿಕ ಮಿಶ್ರಿತ ನೀರನ್ನು ಕುಡಿದು ಜಾನುವಾರುಗಳು ಅಸುನೀಗಿದ ಉದಾಹರಣೆಗಳೂ ಇವೆ. ಸದ್ದಿಲ್ಲದೆ ಕೆರೆಗಳನ್ನು ಕೊಲ್ಲುತ್ತಿರುವ ಇಂತಹ ಘಟಕಗಳನ್ನು ಕಂಡೂ ಕಾಣದಂತಿದ್ದಾರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧಿಕಾರಿಗಳು, ತಾಲ್ಲೂಕು ಆಡಳಿತಾಧಿಕಾರಿಗಳು ನಾಲ್ಕು ತಿಂಗಳ ಹಿಂದೆ ಈ ಘಟಕಗಳ ಮೇಲೆ ದಾಳಿ ಮಾಡಿ, ಕಾರ್ಯ ಸ್ಥಗಿತಗೊಳಿಸಿದ್ದರು. ಈಗ ಇವು ಮತ್ತೆ ಕಾರ್ಯಾಚರಿಸುತ್ತಿವೆ. 

ಮೊದಲಿಗೆ ಬೆಳ್ಳಂದೂರು, ವರ್ತೂರು ಕೆರೆಯ ಆಸುಪಾಸಿನ ಪ್ರದೇಶಗಳಲ್ಲಿ ಈ ಡೈಯಿಂಗ್ ಘಟಕಗಳು ತಲೆ ಎತ್ತಿದ್ದವು. ಅಲ್ಲಿನ ಜನ ಎಚ್ಚೆತ್ತು ಅವುಗಳು ಜಾಗ ಖಾಲಿ ಮಾಡುವಂತೆ ಮಾಡಿದ್ದರು. ಆದರೆ, ಈಗ  ಕೆ.ಆರ್.ಪುರ ಸಮೀಪದ ಮೇಡಹಳ್ಳಿ, ಆವಲಹಳ್ಳಿ ಸಮೀಪದ ಹೀರಂಡಹಳ್ಳಿ, ಕಿತ್ತಿಗನೂರು, ಆದೂರು, ಬಿಳಿ ಶಿವಾಲೆ ಬಳಿಯ ಕಲ್ಕೆರೆ, ಎಲೆಮಲ್ಲಪ್ಪನ ಕೆರೆ, ರಾಂಪುರ ಕೆರೆ ಮೊದಲಾದ ಕೆರೆ ಮತ್ತು ಕಾಲುವೆಗಳ ದಡದಲ್ಲಿ ಇಂತಹ ಘಟಕಗಳು ಸದ್ದಿಲ್ಲದೆ ತಲೆ ಎತ್ತಿವೆ. ಇಲ್ಲಿನ ಕೆಲವು ರೈತರು ಮತ್ತು ಪ್ರಭಾವಿ ವ್ಯಕ್ತಿಗಳೇ ಈ ಘಟಕಗಳಿಗೆ ಜಾಗ ಒದಗಿಸಿದ್ದಾರೆ.

ತಮಿಳುನಾಡಿನವರೇ ಹೆಚ್ಚು: ತಮಿಳುನಾಡಿನಲ್ಲಿ 720ಕ್ಕೂ ಹೆಚ್ಚು ಡೈಯಿಂಗ್‌ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಇವು ಜಲಮೂಲಗಳಿಗೆ ಬಿಡುವ ರಾಸಾಯನಿಕಗಳಿಂದ ಅಂತರ್ಜಲ ಮಟ್ಟ ಕುಸಿಯುವುದರ ಜೊತೆಗೆ, ಜನ–ಜಾನುವಾರು ಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿ ದ್ದುದನ್ನು ಗಮನಿಸಿದ ಅಲ್ಲಿನ ಜನ ಈ ಬಗ್ಗೆ ಧ್ವನಿ ಎತ್ತಿದ್ದರು. ಇವುಗಳನ್ನು ಸ್ಥಗಿತಗೊಳಿಸುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದ ನಂತರ, ಈ ಘಟಕಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿವೆ. 

ಆತಂಕದ ವಾತಾವರಣ: ಇಂತಹ ಘಟಕಗಳಿಗೆ ಜಾಗ ನೀಡಿದವರ ವಿವರವನ್ನು ಬಹಿರಂಗಪಡಿಸಲು ಸ್ಥಳೀಯರು ಹಿಂದೇಟು ಹಾಕುತ್ತಾರೆ. ಈ ಘಟಕಗಳಿರುವ ಜಾಗದ ಮಾಲೀಕರನ್ನು ಪ್ರಶ್ನಿಸಿದರೆ, ‘ಮೊದಲು ನಡೆಯುತ್ತಿದ್ದವು. ಈಗ ಈ ಕಾರ್ಯ ನಡೆಯುತ್ತಿಲ್ಲ. ಕಟ್ಟಿಗೆ ಡಿಪೊ ಮಾಡಲಾಗಿದೆ’ ಎಂದು ಹೇಳುತ್ತಾರೆ. ಆದರೆ, ಅಲ್ಲಿ ಡೈಯಿಂಗ್‌ ಘಟಕಗಳಿಗೇ ಅವಕಾಶ ಮಾಡಿಕೊಡಲಾಗಿದೆ.

ಬಟ್ಟೆಗಳಿಗೆ ಬಣ್ಣ ಹಾಕಲು ವೈಜ್ಞಾನಿಕ ವಿಧಾನವಿದೆ. ಆದರೆ, ಅದು ದುಬಾರಿ. ಹೀಗಾಗಿ, ಸಾವಯವ ಬಣ್ಣಗ ಳನ್ನು ಹೊರತುಪಡಿಸಿ, ಕ್ಯಾನ್ಸರ್‌ಕಾರಕ ಅಂಶಗಳಿರುವ, ಕಡಿಮೆ ವೆಚ್ಚದ ರಾಸಾಯನಿಕ ಬಣ್ಣಗಳನ್ನು ಇಂತಹ ಘಟಕಗಳಲ್ಲಿ ಬಳಸಲಾಗುತ್ತಿದೆ. ಪರಿಣಾಮ, ಜಲಚರಗಳಿಗೆ ಕುತ್ತು, ಪರಿಸರ ಹಾಳಾಗುತ್ತಿದೆ.

***

ಡೈಯಿಂಗ್‌ ಫ್ಯಾಕ್ಟರಿಗಳಿಂದ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಭತ್ತ, ರಾಗಿ, ಜೋಳ ಬೆಳೆದರೂ ಹಾಗೇ ಒಣಗಿ ಹೋಗುತ್ತಿವೆ. ಅಧಿಕಾರಿಗಳು ದಾಳಿ ಮಾಡಿದಾಗ ಮುಚ್ಚುತ್ತಾರೆ. ಸ್ವಲ್ಪ ದಿನಗಳ ನಂತರ ಮತ್ತೆ ಪ್ರಾರಂಭಿಸುತ್ತಾರೆ.

ಎಚ್.ವಿ. ಮಂಜುನಾಥ್, ಹೀರಂಡಹಳ್ಳಿ ಗ್ರಾ.ಪಂ. ಸದಸ್ಯ

***

ರಾಸಾಯನಿಕ ಬೆರೆತ ಇಂತಹ ಕಲುಷಿತ ನೀರು ಕುಡಿದು ಹಲವು ಜಾನುವಾರುಗಳು ಸಾವಿಗೀಡಾಗಿವೆ. ಕೃಷಿಗೆ ಈ ನೀರೇ ಆಧಾರ. ದಯಮಾಡಿ ಡೈಯಿಂಗ್‌ ಘಟಕಗಳನ್ನು ಮುಚ್ಚಿಸಿ.

ಮಂಜುನಾಥ್, ಬಿಳಿ ಶಿವಾಲೆ ನಿವಾಸಿ

***

ಆರೋಗ್ಯದ ಮೇಲೆ ದುಷ್ಪರಿಣಾಮ 

ಇಂತಹ ರಾಸಾಯನಿಕ ಬೆರೆತ ನೀರಿನ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಸದ್ಯಕ್ಕೆ ಯಾವುದೇ ತೊಂದರೆ ಕಂಡು ಬರದಿದ್ದರೂ, ಭವಿಷ್ಯದಲ್ಲಿ ಇವುಗಳ ಪರಿಣಾಮ ಗೋಚರಿಸುತ್ತದೆ. 

ನರಮಂಡಲದಲ್ಲಿ ತೊಂದರೆ, ಸಂತಾನೋತ್ಪತ್ತಿ ಶಕ್ತಿ ಕ್ಷೀಣ, ಚರ್ಮರೋಗ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ
ದುರ್ಬಲವಾಗಿರುವವರ ಮೇಲೆ ಬಹಳ ಬೇಗ ದುಷ್ಪರಿಣಾಮ ಉಂಟಾಗುತ್ತದೆ. 

ಮಣ್ಣಿನಲ್ಲಿರುವ ಹೀರುವ ಸಾಮರ್ಥ್ಯ ಕ್ಷೀಣ 

‘ನಾವೇನು ಈ ರಾಸಾಯನಿಕವನ್ನು ಕೆರೆಗೆ ಬಿಡುತ್ತಿಲ್ಲ, ಒಂದು ಗುಂಡಿಗೆ ಹರಿಸಿ ಅದನ್ನು ಇಂಗಿಸುತ್ತಿದ್ದೇವೆ’ ಎಂದು ಡೈಯಿಂಗ್‌ ಘಟಕಕ್ಕೆ ಭೂಮಿ ಕೊಟ್ಟ ರೈತರೊಬ್ಬರು ಹೇಳಿದರು.

‘ಕಲುಷಿತ ನೀರನ್ನು ಇಂಗಿಸಿಬಿಟ್ಟರೆ ಯಾವುದೇ ಪರಿಣಾಮವಾಗುವುದಿಲ್ಲ ಎನ್ನುವ ವಾದವೇ ವಿಚಿತ್ರ ಮತ್ತು ಇದೊಂದು ತಪ್ಪು ಕಲ್ಪನೆ’ ಎನ್ನುತ್ತಾರೆ ವಿಜ್ಞಾನಿ ವಿ.ಎಸ್. ಪ್ರಕಾಶ್‌.

‘ಕೆರೆಗಳ ಬಯಲು ಪ್ರದೇಶದಲ್ಲಿ ಕಲುಷಿತ ಮತ್ತು ರಾಸಾಯನಿಕ ಬೆರೆತ ನೀರನ್ನು ಇಂಗಿಸುತ್ತಿದ್ದರೆ ಮಣ್ಣಿನ ಆರೋಗ್ಯ ಹಾಳುತ್ತದೆ ಮತ್ತು ಅದು ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ಹೀರಿಕೊಳ್ಳುವ ಮಣ್ಣಿನ ಸಾಮರ್ಥ್ಯ ಶೂನ್ಯವಾಗಿಬಿಡುತ್ತದೆ. ಮಣ್ಣು ಇಂತಹ ಶಕ್ತಿ ಕಳೆದುಕೊಂಡರೆ ಯಾವ ನೀರೂ ಇಂಗುವುದಿಲ್ಲ, ಬದಲಾಗಿ ಭೂಮಿ ಬಿರುಕು ಬಿಡಲು ಪ್ರಾರಂಭಿಸುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಬೆಳ್ಳಂದೂರು ಕೆರೆ, ವೃಷಭಾವತಿ ಕಾಲುವೆಯ ದಡದಲ್ಲಿ ಕಲುಷಿತ ನೀರನ್ನು ಹೀಗೆ ಇಂಗಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅದು ತಪ್ಪು ನಿರ್ಧಾರ. ಇದರಿಂದ ಪರಿಸರಕ್ಕೆ ಅಪಾಯ ಇದೆ’
ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. 

‘₹30 ಸಾವಿರ ಬಿಡೋಕಾಗುತ್ತಾ?’

‘ಮುಚ್ಚಿಸುವುದಾದರೆ ಎಲ್ಲ ಘಟಕಗಳನ್ನು ಮುಚ್ಚಿಸಿ. ಇಲ್ಲವಾದರೆ ಸುಮ್ಮನೆ ಬಂದು ಕಿರಿಕಿರಿ ಮಾಡಬೇಡಿ. ಜಮೀನಿನಲ್ಲಿ ಸ್ವಲ್ಪ ಜಾಗವನ್ನು ಫ್ಯಾಕ್ಟರಿಗೆ ಬಿಟ್ಟುಕೊಟ್ಟಿದ್ದೇವೆ. ತಿಂಗಳಿಗೆ ₹30 ಸಾವಿರ ಬಾಡಿಗೆ ಬರುತ್ತಿದೆ’ ಎಂದು ಹೇಳುತ್ತಾರೆ ಘಟಕಕ್ಕೆ ಜಾಗ ನೀಡಿರುವ ರೈತರೊಬ್ಬರು. 

‘ಮನೆಯಲ್ಲಿ ಕಷ್ಟವಿದೆ. ಸಾಕಷ್ಟು ಸಾಲವಿದೆ. ಇಂಥದ್ದರಲ್ಲಿ ಬಾಡಿಗೆ ರೂಪದಲ್ಲಿ ಬರುವ ಈ ಹಣವನ್ನು ಕಳೆದುಕೊಳ್ಳುವುದಕ್ಕೆ ಆಗುತ್ತದೆಯೇ’ ಎಂದು ಅವರು ಪ್ರಶ್ನಿಸುತ್ತಾರೆ.

ಘಟಕಗಳ ವಿರುದ್ಧ ಕ್ರಮ: ಕೆಎಸ್‌ಪಿಸಿಬಿ

‘ಈ ಹಿಂದೆ ಡೈಯಿಂಗ್‌ ಘಟಕಗಳ ಮೇಲೆ ದಾಳಿ ಮಾಡಲಾಗಿತ್ತು. ಆಗಿನ ಜಿಲ್ಲಾಧಿಕಾರಿ ಕೂಡ ಇವುಗಳನ್ನು ಮುಚ್ಚಿಸಲಾಗಿದೆ ಎಂದು ತಿಳಿಸಿದ್ದರು. ಮತ್ತೆ ಘಟಕಗಳು ಕಾರ್ಯನಿರ್ವಹಿಸುವುದನ್ನು ಯಾವುದೇ ಕಾರಣಕ್ಕೆ ಒಪ್ಪಲಾಗದು. ಅವುಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌ ತಿಳಿಸಿದರು. 

‘ಇಂತಹ ಘಟಕಗಳಿಗೆ ಮಂಡಳಿ ಯಾವುದೇ ಪರವಾನಗಿ ನೀಡಿಲ್ಲ ಮತ್ತು ನೀಡುವುದೂ ಇಲ್ಲ. ಇವುಗಳಿಗೆ ನಿಗದಿತ ವಿಳಾಸವಿರುವುದಿಲ್ಲ. ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದು ಕಾರ್ಯನಿರ್ವಹಿಸುತ್ತಿರುತ್ತವೆ. ಇವುಗಳ ಮೇಲೆ ದಾಳಿ ಮಾಡಿ ಮುಚ್ಚಿಸಬೇಕೇ ವಿನಾ ಬೇರೆ ಮಾರ್ಗವಿಲ್ಲ’ ಎಂದು ಅವರು ಹೇಳಿದರು. 

‘ಘಟಕಗಳಿಗೆ ಜಾಗ ನೀಡಿದ ರೈತರು ಅಥವಾ ಆ ಭೂಮಿಯ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಮನೋಜ್‌ಕುಮಾರ್‌ ತಿಳಿಸಿದರು.

ಬಣ್ಣಗಳಲ್ಲಿರುವ ರಾಸಾಯನಿಕಗಳು 

ಸೀಸ, ಕ್ರೋಮಿಯಂ, ಕಬ್ಬಿಣ, ತಾಮ್ರ, ಮ್ಯಾಂಗನೀಸ್‌ ಅಲ್ಲದೇ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಈ ಬಣ್ಣಗಳಲ್ಲಿರುತ್ತವೆ.

ಹಾಲು–ತರಕಾರಿ ಸೇವನೆಯಿಂದ ತೊಂದರೆ

ಇಂತಹ ರಾಸಾಯನಿಕ ಬೆರೆತ ನೀರನ್ನು ಬಳಸಿ ಬೆಳೆಯಲಾದ ಎಳನೀರಿನಲ್ಲಿ ರಾಸಾಯನಿಕ ಅಂಶಗಳು ಸೇರಿರುತ್ತವೆ. ಇದನ್ನು ಸೇವಿಸಿದವರ ಆರೋಗ್ಯ ಹಾಳಾಗುತ್ತದೆ. ಇಲ್ಲಿ ಬೆಳೆದ ಹುಲ್ಲನ್ನು ತಿನ್ನುವ ಹಸುಗಳ ಹಾಲಿನಲ್ಲಿಯೂ ರಾಸಾಯನಿಕ ಅಂಶ ಸೇರಿರುತ್ತದೆ. ಅದರ ಸೇವನೆಯೂ ಅಪಾಯಕಾರಿ ಎನ್ನುತ್ತಾರೆ ವಿಜ್ಞಾನಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು