ಶನಿವಾರ, ಆಗಸ್ಟ್ 13, 2022
23 °C
ಲಿಂಗಾನುಪಾತ ಪ್ರಮಾಣದಲ್ಲಿ ಗಣನೀಯ ಏರಿಕೆ * ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಬಹಿರಂಗ

ಬೆಂಗಳೂರು ನಗರದಲ್ಲಿ ಸಾವಿರ ಪುರುಷರಿಗೆ 1,006 ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಯವು ನಡೆಸಿರುವ 2019–20ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ನಗರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮೀಕ್ಷೆಯ ಲಿಂಗಾನುಪಾತ ಪ್ರಕಾರ ಪ್ರತಿ ಸಾವಿರ ಪುರುಷರಿಗೆ 1,006 ಮಹಿಳೆಯರಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು 2019ರ ಜು.10 ರಿಂದ ಡಿ.11ರವರೆಗೆ ನೀಲ್ಸನ್ ಇಂಡಿಯಾ ಪ್ರೈ.ಲಿ. ಏಜೆನ್ಸಿ ಸಹಯೋಗದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ಜಿಲ್ಲಾವಾರು ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ 837 ಮನೆಗಳು, 840 ಮಹಿಳೆಯರು ಮತ್ತು 125 ಪುರುಷರಿಂದ ಮಾಹಿತಿ ಸಂಗ್ರಹಿಸಿತ್ತು.

2015–16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ನಗರದಲ್ಲಿ ಪ್ರತಿ ಸಾವಿರ ಪುರುಷರಿಗೆ 898 ಮಹಿಳೆಯರಿದ್ದರು. ಆದರೆ, ಈಗ ಆ ಸಂಖ್ಯೆಯಲ್ಲಿ ಗಮನಾರ್ಹವಾದ ಹೆಚ್ಚಳವಾಗಿದ್ದು, ನೂತನ ಸಮೀಕ್ಷೆಯ ವರದಿಯ ಪ್ರಕಾರ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆ ಕಂಡಿದೆ. ಕಳೆದ ಐದು ವರ್ಷಗಳನ್ನು ಅವಧಿಯಲ್ಲಿ ಜನಿಸಿದ ಮಕ್ಕಳ ಲಿಂಗಾನುಪಾತವನ್ನು ಪರಿಗಣಿಸಿದ ಬಳಿಕವೂ ಲಿಂಗಾನುಪಾತದಲ್ಲಿ ಗಮನಾರ್ಹವಾದ ಬದಲಾವಣೆಗಳಾಗಿದೆ. ಪ್ರತಿ ಸಾವಿರ ಗಂಡು ಮಕ್ಕಳಿಗೆ 1,163 ಹೆಣ್ಣು ಮಕ್ಕಳಿದ್ದಾರೆ. 2015–16ರ ಸಮೀಕ್ಷೆಯ ಪ್ರಕಾರ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ಅನುಪಾತ 1000: 727 ಇತ್ತು. 

ಬಾಲ್ಯ ವಿವಾಹ ಹೆಚ್ಚಳ: ನಗರದಲ್ಲಿ ಬಾಲ್ಯ ವಿವಾಹದ ಪ್ರಮಾಣವೂ ಏರಿಕೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ನಡೆಸಲಾಗಿದ್ದ ಸಮೀಕ್ಷೆಯ ಪ್ರಕಾರ 18 ವರ್ಷದೊಳಗೆ ವಿವಾಹವಾದ ಬಾಲಕಿಯರ ಪ್ರಮಾಣ ಶೇ 11.6ರಷ್ಟಿತ್ತು. ಆದರೆ, ಈಗ ಆ ಪ್ರಮಾಣ ಶೇ 14.5ಕ್ಕೆ ಏರಿಕೆಯಾಗಿದೆ. ಬಾಲ್ಯ ವಿವಾಹ ಸೇರಿದಂತೆ ವಿವಿಧ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ (15 ರಿಂದ 19 ವರ್ಷ) ತಾಯಂದಿರಾಗುತ್ತಿರುವವರ ಸಂಖ್ಯೆ ಶೇ 2ಕ್ಕೆ ಇಳಿಕೆ ಕಂಡಿದೆ. ಈ ಹಿಂದೆ ಆ ಪ್ರಮಾಣ ಶೇ 4.6ರಷ್ಟಿತ್ತು.

ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಳ
ನಗರದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಳವಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019–20ರ ವರದಿಯಿಂದ ತಿಳಿದುಬಂದಿದೆ.

2015–16ನೇ ಸಾಲಿನ ಸಮೀಕ್ಷೆಯಲ್ಲಿ 6ರಿಂದ 59 ತಿಂಗಳೊಳಗಿನ ಶೇ 51.7 ರಷ್ಟು ಮಕ್ಕಳು ರಕ್ತ ಹೀನತೆ ಹೊಂದಿದ್ದುದು ಪತ್ತೆಯಾಗಿತ್ತು. ಈಗ ಆ ಪ್ರಮಾಣವು ಶೇ 58.9ಕ್ಕೆ ಏರಿಕೆಯಾಗಿದೆ. 15ರಿಂದ 19 ವರ್ಷದೊಳಗಿನ ಮಹಿಳೆಯರಲ್ಲಿ ಶೇ 40.2ರಷ್ಟು ಮಂದಿ ಈ ಹಿಂದೆ ರಕ್ತ ಹೀನತೆ ಸಮಸ್ಯೆ ಎದುರಿಸುತ್ತಿದ್ದರು. ಈಗ ಆ ಪ್ರಮಾಣ ಶೇ 45.1ಕ್ಕೆ ಏರಿಕೆ ಕಂಡಿದೆ.

ಬೊಜ್ಜು ಸಮಸ್ಯೆ ಎದುರಿಸುವ ಮಹಿಳೆಯರ ಸಂಖ್ಯೆಯು ಶೇ 32ರಿಂದ ಶೇ 40.1ಕ್ಕೆ ಹೆಚ್ಚಳವಾಗಿದೆ. ಜನಿಸಿದ ಒಂದು ಗಂಟೆಯಿಂದ ಮಗುವಿಗೆ 3 ವರ್ಷವಾಗುವವರೆಗೂ ಎದೆಹಾಲುಣಿಸುವ ತಾಯಂದಿರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿಂದೆ ಶೇ 49.8ರಷ್ಟು ತಾಯಂದಿರು ಮಕ್ಕಳಿಗೆ 3 ವರ್ಷದವರೆಗೆ ಎದೆ ಹಾಲುಣಿಸುತ್ತಿದ್ದರು. ಆದರೆ, ಈಗ ಆ ಪ್ರಮಾಣವು ಶೇ 53.8ಕ್ಕೆ ಏರಿಕೆ ಕಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು