ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ದಿನ: ಸ್ವಾಮಿ ವಿವೇಕಾನಂದರಿಗೆ ನಮನ

Last Updated 12 ಜನವರಿ 2021, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ವಿವಿಧ ಸಂಸ್ಥೆಗಳುನಗರದಾದ್ಯಂತ ವಿಶೇಷ ಕಾರ್ಯಕ್ರಮಗಳ ಮೂಲಕ ಮಂಗಳವಾರ ನೆರವೇರಿಸಿದವು.

ಸಮರ್ಥ ಭಾರತ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿವೇಕಾನಂದರ ಜಯಂತಿ ಅಂಗವಾಗಿ ಅವರ ಸಂದೇಶ ಸಾರುವ ‘ಉತ್ತಮನಾಗು–ಉಪಕಾರಿಯಾಗು’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮರ್ಥ ಭಾರತದ ಪ್ರಧಾನ ಮಾರ್ಗದರ್ಶಕ ನಾ.ತಿಪ್ಪೇಸ್ವಾಮಿ,‘ಉತ್ತಮನಾಗಿ ಸಮಾಜಕ್ಕೆ ಉಪಕಾರ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಯೂತ್ ಫಾರ್‌ ಸೇವಾ ಸಂಸ್ಥೆಯ ಸಂಸ್ಥಾಪಕ ವೆಂಕಟೇಶಮೂರ್ತಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನರಸಿಂಹ ಮೂರ್ತಿ, ಕುಲಸಚಿವೆ ಆರತಿ ಆನಂದ್ ಭಾಗವಹಿಸಿದ್ದರು.

ಅಂಧ ಮಕ್ಕಳಿಂದ ಪ್ರತಿಜ್ಞಾವಿಧಿ: ಸ್ವಾಮಿ ವಿವೇಕಾನಂದರ 158ನೇ ಜನ್ಮದಿನವನ್ನು ನಗರದ ಕರ್ನಾಟಕ ಅಂಧರ ಶಾಲೆಯಲ್ಲಿ ಅಂಧ ಮಕ್ಕಳು ವಿಶೇಷವಾಗಿ ಆಚರಿಸಿದರು.

‘ವಿವೇಕಾನಂದರು ಜಗತ್ತಿಗೆ ಸಾರಿದ ಶಾಂತಿಯ ಸಂದೇಶ, ಆದರ್ಶ ಅಜ್ಞಾನವನ್ನು ಅಳಿಸಿ ಜ್ಞಾನವನ್ನು ಉಳಿಸಿ, ಸಮಾಜದ ಏಳಿಗೆಗೆ ಬದುಕಬೇಕು. ಯುವಕರು ದೇಶದ ಶಕ್ತಿ, ಯುವ ಶಕ್ತಿಯಿಂದ ದೇಶದ ಬಲಿಷ್ಠತೆಯನ್ನು ಸಾರಲು ಯುವಪೀಳಿಗೆ ಮುಂದಾಗಬೇಕು ಎಂಬ ಅವರ ದೂರದೃಷ್ಟಿಯ ಕನಸುಗಳನ್ನು ಇಂದು ನಾವೆಲ್ಲರೂ ಸಾಕಾರಗೊಳಿಸೋಣ’ ಎಂದು ಮಕ್ಕಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಎಸ್.ಮನೋಹರ್, ಜನಾರ್ದನ್, ಆನಂದ್ ಹಾಗೂ ಇತರರು ಭಾಗವಹಿಸಿದ್ದರು.

‌ವಿಶೇಷ ಲಕೋಟೆ ಬಿಡುಗಡೆ: ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಾರ್ಥ ಅಂಚೆ ಇಲಾಖೆಯು ಸ್ವಾಮಿ ವಿವೇಕಾನಂದ ಭಾವಚಿತ್ರ ಇರುವ ವಿಶೇಷ ಅಂಚೆ ಲಕೋಟೆಯನ್ನು ಹೊರ ತಂದಿದೆ.

ನವ ಬೆಂಗಳೂರು ಪ್ರತಿಷ್ಠಾನ ಹಾಗೂ ಅಂಚೆ ಇಲಾಖೆ ಸಹಯೋಗದಲ್ಲಿ ಇಲ್ಲಿನ ಅಂಚೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ಅಂಚೆ ವಿಭಾಗದ ಪೋಸ್ಟ್‌ಮಾಸ್ಟರ್ ಜನರಲ್ ಶಿಫಾಲಿ ಬರ್ಮನ್ ಅವರು ಲಕೋಟೆ ಬಿಡುಗಡೆ ಮಾಡಿದರು. ಪ್ರತಿಷ್ಠಾನದ ಸ್ಥಾಪಕ ಅನಿಲ್ ಶೆಟ್ಟಿ ಭಾಗವಹಿಸಿದ್ದರು.

ಸ್ವಾಮಿ ವಿವೇಕಾನಂದರ ರಂಗೋಲಿ: ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಕೊಡಿಗೇಹಳ್ಳಿಯ ನಿವಾಸಿ ಅರ್ಚನಾ ಎಸ್‌.ಎನ್‌.ಭಟ್ ಅವರು ಸ್ವಾಮಿ ವಿವೇಕಾನಂದ ಮೂರ್ತಿಯನ್ನು ರಂಗೋಲಿಯಲ್ಲಿ ಚಿತ್ರಿಸಿದರು.

‘ನಾನು ವೃತ್ತಿಯಲ್ಲಿ ಶಿಕ್ಷಕಿ. ಲಾಕ್‌ಡೌನ್ ಅವಧಿಯಲ್ಲಿ ರಂಗೋಲಿ ಬಿಡಿಸುವುದನ್ನು ಹೆಚ್ಚಾಗಿ ಕಲಿತೆ. ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿತ್ತು. 17 ಅಡಿ ಅಗಲ ಮತ್ತು 29 ಅಡಿ ಉದ್ದವಾದ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ರಂಗೋಲಿಯಲ್ಲಿ ಬಿಡಿಸಿದ್ದೇನೆ. ಇದಕ್ಕಾಗಿ 15 ಗಂಟೆ ಬೇಕಾಯಿತು’ ಎಂದುಅರ್ಚನಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT