ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಹೊಸ ಪ್ರಭೇದದ ‘ಬಿಲ ಕಪ್ಪೆ’ ಪತ್ತೆ

Published 3 ಫೆಬ್ರುವರಿ 2024, 14:18 IST
Last Updated 3 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಾಜಾನುಕುಂಟೆಯಲ್ಲಿ ಹೊಸ ಪ್ರಭೇದದ ಬಿಲ ಕಪ್ಪೆ ಪತ್ತೆಯಾಗಿದ್ದು, ಇದಕ್ಕೆ ‘ಸ್ಫೆರೋಥೆಕಾ ವರ್ಷಾಬು’ ಎಂದು ನಾಮಕರಣ ಮಾಡಲಾಗಿದೆ. 

ವಿವಿಧ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನೆರವಿನಿಂದ ಕಪ್ಪೆಯ ನೂತನ ಪ್ರಭೇದವನ್ನು ಗುರುತಿಸಲಾಗಿದೆ. ಈ ಕಪ್ಪೆಯು ಈಶಾನ್ಯ ಮುಂಗಾರಿನ ಅವಧಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಬಿಲದಿಂದ ಹೊರಬರುವ ವಿಶಿಷ್ಟ ಗುಣವನ್ನು ಹೊಂದಿದೆ. ಹೀಗಾಗಿ ಈ ಕಪ್ಪೆಗೆ ‘ಸ್ಫೆರೋಥೆಕಾ ವರ್ಷಾಬು’ ಎಂದು ನಾಮಕರಣ ಮಾಡಲಾಗಿಗಿದೆ.

‘ವರ್ಷಾಬು’ ಎನ್ನುವುದು ಸಂಸ್ಕೃತ ಮೂಲದ ಹೆಸರಾಗಿದೆ. ಮಳೆಯ ಸಮಯದಲ್ಲೇ ಈ ತಳಿಯ ಕಪ್ಪೆಗಳು ಸಂತಾನೋತ್ಪತ್ತಿಯನ್ನೂ ಮಾಡುತ್ತವೆಯಾದ್ದರಿಂದ ಈ ಹೆಸರು ಅನ್ವರ್ಥವಾಗಿದೆ ಎಂದು ಜೀವವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಇಲ್ಲಿನ ಸ್ವಾಯತ್ತ ಸಂಸ್ಥೆಯಾದ ಮೌಂಟ್‌ ಕಾರ್ಮೆಲ್ ಕಾಲೇಜು, ಜೈನ್‌ (ಡೀಮ್ಡ್‌) ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ, ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ, ಪುಣೆಯ ಭಾರತೀಯ ಪ್ರಾಣಿ ಸರ್ವೇಕ್ಷಣಾ ಪ್ರಾದೇಶಿಕ ಕಚೇರಿ, ನ್ಯಾಷನಲ್‌ ಮ್ಯೂಸಿಯಂ ಆಫ್‌ ಹಿಸ್ಟರಿ, ಫ್ರಾನ್ಸ್‌ ಮತ್ತು ಚೀನಾದ ವಿಶ್ವವಿದ್ಯಾಲಯಗಳು ಸೇರಿ ವಿವಿಧ ಸಂಸ್ಥೆಗಳ ನೆರವಿನಿಂದ ಬಿಲ ಕಪ್ಪೆಯ ಹೊಸ ಪ್ರಭೇದವನ್ನು ಪತ್ತೆ  ಮಾಡಲಾಗಿದೆ. 

ನೀರಿನ ಅಭಾವವಿದ್ದರೂ ಜೀವನ: ‘ಪತ್ತೆಯಾಗಿರುವ ಉಭಯವಾಸಿ ಪ್ರಭೇದವು ಅನೇಕ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ಈಗಾಗಲೆ ಪತ್ತೆಯಾಗಿರುವ ಕಪ್ಪೆಯ ಪ್ರಭೇದಗಳಿಗಿಂತ ವಿಭಿನ್ನವಾಗಿದೆ. ನೂತನ ಪ್ರಭೇದದ ಈ ಕಪ್ಪೆ ಶುದ್ಧ ನೀರಿನ ಅಭಾವವಿದ್ದರೂ ನಗರದ ಪರಿಸರಕ್ಕೆ ಆಶ್ಚರ್ಯಕರ ರೀತಿಯಲ್ಲಿ ಹೊಂದಿಕೊಂಡು ಜೀವಿಸುತ್ತಿದೆ. ಈ ಹೊಸ ಪ್ರಭೇದದಿಂದಾಗಿ ನಗರ ಪ್ರದೇಶವನ್ನು ಮತ್ತಷ್ಟು ಶೋಧಿಸಲು ಉತ್ತೇಜನ ಸಿಕ್ಕಂತಾಗಿದೆ’ ಎಂದು ಸಂಶೋಧಕ ದೀಪಕ್‌ ಪಿ. ತಿಳಿಸಿದ್ದಾರೆ. 

ಭಾರತೀಯ ಪ್ರಾಣಿ ಸರ್ವೇಕ್ಷಣಾ ವಿಜ್ಞಾನಿ ಕೆ.ಪಿ. ದಿನೇಶ್, ‘ಭವಿಷ್ಯದಲ್ಲಿ ಇನ್ನಷ್ಟು ಹೊಸ ಪ್ರಭೇದದ ಕಪ್ಪೆಗಳನ್ನು ಪತ್ತೆ ಮಾಡಲಾಗುವುದು. ಈಗಾಗಲೇ ಕಪ್ಪೆಗಳಲ್ಲಿ 451 ಪ್ರಭೇದಗಳನ್ನು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT