ಗುರುವಾರ , ಜೂನ್ 24, 2021
28 °C
ನಗರದ ಆಸ್ಪತ್ರೆಗಳಿಗೆ ಭೇಟಿ ನೀಡುವ ಕೋವಿಡೇತರ ರೋಗಿಗಳ ಸಂಖ್ಯೆ ಅರ್ಧದಷ್ಟು ಇಳಿಕೆ

ಬೆಂಗಳೂರಿನಲ್ಲಿ ಅನ್ಯ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾದ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ, ಲಾಕ್‌ಡೌನ್ ಜಾರಿ ಸೇರಿದಂತೆ ವಿವಿಧ ಕಾರಣಗಳಿಂದ ಅನ್ಯ ಕಾಯಿಲೆಗಳನ್ನು ಎದುರಿಸುತ್ತಿರುವವರಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗಲಾರಂಭಿಸಿದೆ. ಪರಿಣಾಮ ಆಸ್ಪತ್ರೆಗೆ ಹೊರರೋಗಿಗಳಾಗಿ ಭೇಟಿ ನೀಡುವ ಕೋವಿಡೇತರ ರೋಗಿಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.

ವಿಕ್ಟೋರಿಯಾ, ಬೌರಿಂಗ್, ಕೆ.ಸಿ. ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಕೆಲವು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಇನ್ನೊಂದೆಡೆ, ಕೋವಿಡೇತರ ಆಸ್ಪತ್ರೆಗಳಲ್ಲೂ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಸೋಂಕಿತರಾಗುತ್ತಿದ್ದಾರೆ. ಇದರಿಂದಾಗಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ನಡುವೆ, ಸರ್ಕಾರವು ಕೋವಿಡ್ ಕರ್ಪ್ಯೂ ವಿಧಿಸಿದ ಪರಿಣಾಮ ಸಾರ್ವಜನಿಕ ಸಾರಿಗೆವ್ಯವಸ್ಥೆ ಇಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಹೃದಯ, ಮೂತ್ರಪಿಂಡ, ಶ್ವಾಸಕೋಶ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳು ಹಾಗೂ ಮನೋರೋಗದಿಂದ ಬಳಲುತ್ತಿರುವವರು ಮಾತ್ರೆ ಸೇವಿಸಿ, ಚಿಕಿತ್ಸೆ ಮುಂದೂಡುತ್ತಿದ್ದಾರೆ.

ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ನೆಪ್ರೊ ಯುರಾಲಜಿ ಸಂಸ್ಥೆ, ನಿಮ್ಹಾನ್ಸ್ ಒಳಗೊಂಡಂತೆ ನಗರದ ಪ್ರಮುಖ ವೈದ್ಯಕೀಯ ಸಂಸ್ಥೆಗಳು ಆಸ್ಪತ್ರೆಗೆ ಬಂದ ರೋಗಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿ, ಚಿಕಿತ್ಸೆ ಒದಗಿಸುತ್ತಿವೆ. ಸೋಂಕು ದೃಢಪಟ್ಟಲ್ಲಿ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.

ಕ್ಲಿನಿಕ್‌ಗಳು ಹಿಂದೇಟು: ನಗರದಲ್ಲಿ ಕೊರೊನಾ ಸೋಂಕು ವ್ಯಾಪಿಸಿಕೊಂಡ ಬಳಿಕ ಬಹುತೇಕ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲವು ಬಾಗಿಲು ತೆರೆಯುತ್ತಿಲ್ಲ. ಹೀಗಾಗಿ, ಗಂಭೀರವಲ್ಲದ ಸಮಸ್ಯೆಯಿಂದ ಬಳಲುತ್ತಿರುವವರು ಮನೆ ಆರೈಕೆಗೆ ಮೊರೆ ಹೋಗಲಾರಂಭಿಸಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಿವೆ. ಇದರಿಂದ ಕೋವಿಡೇತರ ರೋಗಿಗಳು ಚಿಕಿತ್ಸೆ ಸಿಗದೆ ಪಡಿಪಾಟಲು ಪಡುತ್ತಿದ್ದಾರೆ.

‘ರೋಗದ ತೀವ್ರತೆ ಆಧರಿಸಿ ಆದ್ಯತೆ ನೀಡಬೇಕಾಗುತ್ತದೆ. ಈಗ ಕೋವಿಡ್ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ. ಕೋವಿಡೇತರ ರೋಗಿಗಳಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡದಿದ್ದಲ್ಲಿ ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆಯನ್ನು ಮುಂದೂಡಿದಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ, ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹೊರ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಎಲ್ಲರಿಗೂ ಕೋವಿಡ್‌ ಪರೀಕ್ಷೆ ನಡೆಸಿ, ದಾಖಲಿಸಿಕೊಳ್ಳುತ್ತೇವೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ವಿವರಿಸಿದರು.

ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಮುಂದೂಡಿಕೆ
ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಕೋವಿಡೇತರ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆಸ್ಪತ್ರೆಗಳ ವೈದ್ಯರು, ಶುಶ್ರೂಷಕರನ್ನು ಕೋವಿಡ್ ಚಿಕಿತ್ಸೆಗೆ ನಿಯೋಜನೆ ಮಾಡುತ್ತಿರುವುದರಿಂದ ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ. ನೇತ್ರ ಹಾಗೂ ದಂತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೂಡ ಚಿಕಿತ್ಸೆಯನ್ನು ಮುಂದಕ್ಕೆ ಹಾಕುವಂತೆ ಸೂಚಿಸಲಾಗುತ್ತಿದೆ.

‘ಹೊರ ರೋಗಿಗಳ ಸಂಖ್ಯೆ ಶೇ 50ರಷ್ಟು ಕಡಿಮೆಯಾಗಿದೆ. ಡಯಾಲಿಸಿಸ್ ಈ ಮೊದಲಿನಂತೆ ನಡೆಯುತ್ತಿದೆ. ಕೋವಿಡ್‌ ರೋಗಿಗಳಿಗೆ ಡಯಾಲಿಸಿಸ್ ನಡೆಸಲು ವಿಕ್ಟೋರಿಯಾದಲ್ಲಿ 12 ಯಂತ್ರಗಳನ್ನು ಅಳವಡಿಸಲಾಗಿದೆ. ಸಂಸ್ಥೆಯಲ್ಲಿ ಪ್ರತಿನಿತ್ಯ ಸರಾಸರಿ 65 ಮಂದಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಇರುವ ಕಾರಣ ಬರುವ ರೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಕಸಿ ಮಾಡಿಸಿಕೊಂಡವರಿಗೆ ಮಾತ್ರೆಗಳನ್ನು ಕೋರಿಯರ್ ಮಾಡಿದ್ದೇವೆ’ ಎಂದು ನೆಫ್ರೊ ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ. ಆರ್. ಕೇಶವಮೂರ್ತಿ ತಿಳಿಸಿದರು. 

‘ಮಾನಸಿಕ ಸಮಸ್ಯೆ ಹೆಚ್ಚಳ ಸಾಧ್ಯತೆ’
‘ಕರ್ಫ್ಯೂ ಇರುವ ಕಾರಣ ಮನೋರೋಗಗಳಿಗೆ ಚಿಕಿತ್ಸೆ ಪಡೆಯಲು ಬರುವ ಹೊರರೋಗಿಗಳ ಸಂಖ್ಯೆ ಮೂರನೇ ಒಂದರಷ್ಟು ಇಳಿಕೆಯಾಗಿದೆ. ತುರ್ತು ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಕೂಡ ಸ್ವಲ್ಪ ಕಡಿಮೆಯಾಗಿದೆ. ಚಿಕಿತ್ಸೆಗೆ ಬಂದವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹೆಚ್ಚಿನವರಿಗೆ ಕೊರೊನಾ ಸೋಂಕು ದೃಢಪಡುತ್ತಿದೆ’ ಎಂದು ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ. ಶಶಿಧರ್ ಎಚ್.ಎನ್. ತಿಳಿಸಿದರು. 

‘ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಮಾತ್ರೆಗಳನ್ನು ನೀಡಿ ಕಳುಹಿಸುತ್ತೇವೆ. ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಯವಾಗಲಿಲ್ಲ. ಲಾಕ್‌ಡೌನ್‌ ಜಾರಿ ಮಾಡಿದ್ದರಿಂದ ಬಹುತೇಕರಿಗೆ ಮನೆಯಲ್ಲಿ ಕೂಡಿ ಹಾಕಿದ ಅನುಭವವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಾನಸಿಕ ಸಮಸ್ಯೆ ಎದುರಿಸುವವರ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆಯಿದೆ’ ಎಂದರು.

 *
ಡಯಾಲಿಸಿಸ್ ಸೇರಿದಂತೆ ವಿವಿಧ ತುರ್ತು ಚಿಕಿತ್ಸೆಗಳನ್ನು ಮುಂದೂಡುವ ಹಾಗಿಲ್ಲ. ಕೋವಿಡ್‌ ಹಾಗೂ ಕರ್ಫ್ಯೂ ಕಾರಣ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ
-ಡಾ.ಆರ್. ಕೇಶವಮೂರ್ತಿ, ನೆಫ್ರೊ ಯುರಾಲಜಿ ಸಂಸ್ಥೆ ನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು