ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಓಲಾ–ಉಬರ್ ಆಟೊ ದರ: ನಾಳೆ ಮತ್ತೊಂದು ಸಭೆ

Last Updated 12 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಓಲಾ, ಉಬರ್ ಹಾಗೂ ರ‌್ಯಾಪಿಡೋ ಆಟೊರಿಕ್ಷಾ ದರ ನಿಗದಿ ಸಂಬಂಧ ಆ್ಯಪ್ ಆಧಾರಿತ ಕಂಪನಿಗಳು ಮತ್ತು ಆಟೊರಿಕ್ಷಾ ಚಾಲಕರ ಸಂಘಗಳ ಜತೆ ಸಾರಿಗೆ ಇಲಾಖೆ ಸೋಮವಾರ ಸಭೆ ಕರೆದಿದೆ.

ಹೈಕೋರ್ಟ್‌ ನಿರ್ದೇಶನದಂತೆ ಅ.29ರಂದು ಕಂಪನಿಗಳ ಮುಖ್ಯಸ್ಥರ ಜತೆ ಸಾರಿಗೆ ಅಧಿಕಾರಿಗಳು ಸಭೆ ನಡೆಸಿದ್ದರು. ಆದರೆ, ದರ ನಿಗದಿ ವಿಷಯದಲ್ಲಿ ಒಮ್ಮತ ಮೂಡಿರಲಿಲ್ಲ. ನ.7ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ ಇನ್ನಷ್ಟು ದಿನಗಳ ಕಾಲಾವಕಾಶವನ್ನು ಸಾರಿಗೆ ಇಲಾಖೆ ಕೇಳಿತ್ತು. ಮುಂದಿನ ವಿಚಾರಣೆ ನ.16ಕ್ಕೆ ನಿಗದಿಯಾಗಿದ್ದು, ಅಷ್ಟರಲ್ಲಿ ಹೈಕೋರ್ಟ್‌ಗೆ ವರದಿ ಸಿದ್ಧಪಡಿಸಲು ಮತ್ತೊಂದು ಸುತ್ತಿನ ಸಭೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಕರೆದಿದ್ದಾರೆ.

ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆ ಒದಗಿಸುತ್ತಿರುವ ಅಗ್ರಿಗೇಟರ್ ಕಂಪನಿಗಳ ಮುಖ್ಯಸ್ಥರು, ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ಆಟೊರಿಕ್ಷಾ ಯೂನಿಯನ್‌ಗಳ ಪ್ರತಿನಿಧಿಗಳು, ಆಟೊರಿಕ್ಷಾ ಗ್ರಾಹಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಬೇಡಿಕೆಗೆ ತಕ್ಕಂತೆ ದರ ನಿಗದಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕಂಪನಿಗಳು ಹಿಂದಿನ ಸಭೆಯಲ್ಲಿ ಪಟ್ಟು ಹಿಡಿದಿದ್ದವು. ಇದಕ್ಕೆ ಒಮ್ಮತ ಮೂಡದೆ ಸಭೆ ಅಂತ್ಯಗೊಂಡಿತ್ತು. ವಾಹನ ದಟ್ಟಣೆ ಅವಧಿಯಲ್ಲಿ ಸಿಗ್ನಲ್‌ಗಳಲ್ಲೇ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಸಾಮಾನ್ಯ ಆಟೊರಿಕ್ಷಾಗಳಿಗೆ ವಿಧಿಸಿದಂತೆ ದರ ನಿಗದಿಪಡಿಸಿದರೆ ತೆರಿಗೆ, ಚಾಲಕರಿಗೆ ನೀಡುವ ಪ್ರೋತ್ಸಾಹಧನ ಸೇರಿ ಮತ್ತಿತರ ಸೇವೆ ಒದಗಿಸುವುದು ಕಷ್ಟ. ಆದ್ದರಿಂದ ಬೇಡಿಕೆ ತಕ್ಕಂತೆ ದರ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕಂಪನಿಗಳು ಬೇಡಿಕೆ ಇಟ್ಟಿದ್ದವು.

ಬೇಡಿಕೆ ಆಧರಿಸಿ ದರ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ನೀಡಿದರೆ ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಇದಕ್ಕೆ ಒಪ್ಪಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT