ಮಂಗಳವಾರ, ಜನವರಿ 18, 2022
22 °C
ಬೆಂಗಳೂರಲ್ಲಿ ಓಮೈಕ್ರಾನ್ ಕುರಿತು ಬಿಬಿಎಂಪಿ ಕಮೀಷನರ್ ಸುದ್ದಿಗೋಷ್ಠಿ

ಬೆಂಗಳೂರಲ್ಲಿ ಓಮೈಕ್ರಾನ್: ಸೋಂಕಿತರ ಸಂಪರ್ಕಕ್ಕೆ ಬಂದ ಐವರಿಗೆ ಕೋವಿಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ಓಮೈಕ್ರಾನ್‌ ವೈರಾಣುವಿನಿಂದ ಕೋವಿಡ್‌ ಹೊಂದಿರುವುದು ದೃಢಪಟ್ಟಿದೆ. ಅವರಲ್ಲಿ ಒಬ್ಬ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಮೂವರಿಗೆ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ಇಬ್ಬರಿಗೆ ಕೋವಿಡ್‌ ಹೊಂದಿರುವುದು ದೃಢಪಟ್ಟಿದೆ. ಈ ಐವರ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಿದ್ದು, ಅವರ ಮಾದರಿಗಳನ್ನೂ ಸಹ ಸೀಕ್ವೆನ್ಸಿಂಗ್‌ಗೆ ಕಳುಹಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು,‘ಓಮೈಕ್ರಾನ್‌ ವೈರಾಣು ಹೊಂದಿದ್ದ ವ್ಯಕ್ತಿಗಳ ಜೊತೆ ನೇರ ಸಂಪರ್ಕ ಹೊಂದಿದ್ದ 37 ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 445 ಮಂದಿಯನ್ನು ಬಿಬಿಎಂಪಿಯಿಂದಲೇ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

‘ಓಮೈಕ್ರಾನ್‌ ದೃಢಪಟ್ಟ ಮೊದಲನೆ ವ್ಯಕ್ತಿ ದಕ್ಷಿಣ ಆಫ್ರಿಕಾ ಪ್ರಜೆ. 66 ವರ್ಷದ ಆ ಪುರುಷ ನ.20ರಂದು ನಗರಕ್ಕೆ ಬಂದಿದ್ದರು. ವಿಮಾನನಿಲ್ದಾಣದಲ್ಲಿ ಅವರ ಮಾದರಿಯನ್ನು ಸಂಗ್ರಹಿಸಿದ್ದೆವು. ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ಮಾದರಿಯನ್ನು ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಿದ್ದೆವು. ಅದರ ಫಲಿತಾಂಶ ಇಂದು ಕೈಸೇರಿದೆ’ ಎಂದರು.

ಇದನ್ನೂ ಓದಿ: ಬೆಂಗಳೂರು ಮೂಲಕ ಭಾರತಕ್ಕೂ ಎಂಟ್ರಿ ಕೊಟ್ಟ ಓಮೈಕ್ರಾನ್:ಕರ್ನಾಟಕದ ಇಬ್ಬರಲ್ಲಿ ಪತ್ತೆ

‘ಅವರನ್ನು ಹೋಟೆಲ್‌ನಲ್ಲಿ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಿದ್ದೆವು. ಅವರ ಜೊತೆ 24 ಮಂದಿ ನೇರ ಸಂಪರ್ಕಕ್ಕೆ ಬಂದಿದ್ದರು. 240 ಮಂದಿ ಪರೋಕ್ಷವಾಗಿ ಅವರ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರ ವಿವರ ಕಲೆಹಾಕಿದ್ದೇವೆ. ಅವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರೂ ಕೋವಿಡ್‌ ಹೊಂದಿಲ್ಲ ಎಂದು ತಿಳಿದುಬಂದಿದೆ’ ಎಂದರು.

‘ಓಮೈಕ್ರಾನ್‌ ಸೋಂಕಿತ ವ್ಯಕ್ತಿಯು ಮತ್ತೊಂದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕೋವಿಡ್‌ ಹೊಂದಿಲ್ಲ ಎಂದು ವರದಿ ಬಂತು. ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ನ.27ರಂದು ದುಬೈಗೆ ತೆರಳಿದ್ದಾರೆ’ ಎಂದರು. 

‘46 ವರ್ಷದ ಸ್ಥಳೀಯ ವ್ಯಕ್ತಿಯೊಬ್ಬರಿಂದ ನ.22ರಂದು ಅವರ ಗಂಟಲ ದ್ರವದ ಮಾದರಿ ಸಂಗ್ರಹಿಸಿದ್ದೆವು. ಆ ವ್ಯಕ್ತಿಯು ಎಲ್ಲಿಗೂ ಪ್ರವಾಸ ಕೈಗೊಂಡಿರಲಿಲ್ಲ. ಪರೀಕ್ಷೆ ವೇಳೆ ಅವರು ಕೋವಿಡ್‌ ಹೊಂದಿರುವುದು ನ.24ರಂದು ದೃಢಪಟ್ಟಿದೆ. ನಂತರ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಅವರೂ ಓಮೈಕ್ರಾನ್‌ ವೈರಾಣು ಹೊಂದಿರುವುದು ದೃಢಪಟ್ಟಿದೆ. ಅವರು ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಒಳಗಾಗಲು ವ್ಯವಸ್ಥೆ ಮಾಡಲಾಗಿತ್ತು. ಅವರ ನೇರ ಸಂಪರ್ಕಕ್ಕೆ ಬಂದ 13 ಮಂದಿ ಯನ್ನು ಹಾಗೂ ಪರೋಕ್ಷವಾಗಿ ಸಂಪರ್ಕಕ್ಕೆ ಬಂದ 205 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಈ ವೇಳೆ ವ್ಯಕ್ತಿ ಜೊತೆ ನೇರ ಸಂಪರ್ಕದಲ್ಲಿದ್ದ ಮೂವರಿಗೆ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ಇಬ್ಬರಿಗೆ ಕೋವಿಡ್‌ ಹೊಂದಿರುವುದು ದೃಢಪಟ್ಟಿದೆ. ಓಮೈಕ್ರಾನ್‌ ವೈರಾಣು ಹೊಂದಿದ ವ್ಯಕ್ತಿಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ ಐವರನ್ನೂ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅವರ ಮಾದರಿಗಳ ಸೀಕ್ವೆನ್ಸಿಂಗ್‌ಗೆ ಕಳುಹಿಸಿದ್ದೇವೆ’ ಎಂದು ತಿಳಿಸಿದರು.

‘ಓಮೈಕ್ರಾನ್‌ ಸೋಂಕಿತ 46 ವರ್ಷದ ವ್ಯಕ್ತಿಯು ಸದ್ಯಕ್ಕೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸಧೃಡವಾಗಿದ್ದು, ಗುಣಮುಖರಾಗುತ್ತಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಬಹಿರಂಗಪಡಿಸಲಾಗದು’ ಎಂದರು.

‘ನಗರದಲ್ಲಿ ಕೋವಿಡ್‌ ದೃಢಪಟ್ಟವರ ಸಂಪರ್ಕಕ್ಕೆ ಬಂದವರರನ್ನು ಪತ್ತೆಹಚ್ಚಲಾಗುತ್ತಿದೆ. ಅಂತರರಾಷ್ಟ್ರೀಯ ಪ್ರವಾಸಿಗರ ಮಾದರಿಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ ಒಳಪಡಿಸುತ್ತಿದ್ದೇವೆ. ಹಿಂದೆ ಜೀನೋಮ್‌ ಸೀಕ್ವೆನ್ಸಿಂಗ್‌ ಫಲಿತಾಂಶ ಬರಲು ಎರಡು ತಿಂಗಳುಗಟ್ಟಲೆ ಕಾಯಬೇಕಿತ್ತು. ಈಗ ಇದರ ಫಲಿತಾಂಶ ವಾರದೊಳಗೆ ಎಂಟು ದಿನದೊಳಗೆ ವರದಿ ಕೈಸೇರುತ್ತಿದೆ. ಇದನ್ನು ಬೇರೆ ಬೇರೆ ರೀತಿ ತಜ್ಞರಿಂದ ದೃಢಪಡಿಸಿಕೊಂಡು ನಿರ್ಧಾರಕ್ಕೆ ಬರುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಓಮೈಕ್ರಾನ್‌ ದೃಢಪಟ್ಟ ಇಬ್ಬರೂ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರು. ಅವರ ನೇರ ಹಾಗೂ ಪರೋಕ್ಷ ಸಂಪರ್ಕಕಕ್ಕೆ ಬಂದವರನ್ನು ಬಿಬಿಎಂಪಿ ವತಿಯಿಂದ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಿದ್ದೇವೆ. ಯಾರೂ ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗುವುದಕ್ಕೆ ಅವಕಾಶ ಕಲ್ಪಿಸಿಲ್ಲ. ಓಮೈಕ್ರಾನ್‌ ಸೊಂಕಿತರ ಚಿಕಿತ್ಸೆಗೆ ಸದ್ಯಕ್ಕೆ ಬೌರಿಂಗ್‌ ಆಸ್ಪತ್ರೆಯನ್ನು ಗೊತ್ತುಪಡಿಸಲಾಗಿದೆ’ ಎಂದರು.

‘ಚಿಕಿತ್ಸೆಗೆ ಸಂಬಂಧಿಸಿ ಮಾರ್ಪಾಡು ಮಾಡುವ ಬಗ್ಗೆ ಚರ್ಚೆ ಆಗಿದೆ. ಈ ವೈರಾಣುವಿನ ಬಗ್ಗೆ ಕಡಿಮೆ ತಿಳಿವಳಿಕೆ ಇದೆ. ಇದು ದುರ್ಬಲ ವೈರಾಣು. ಆದರೆ ಬೇಗವಾಗಿ ಹರಡುತ್ತದೆ ಎಂದು ದಕ್ಷಿಣ ಆಫ್ರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವೈರಾಣು ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಏನನ್ನೂ ಹೇಳಲು ಬರುವುದಿಲ್ಲ. ಊಹಾಪೋಹ ಬೇಡ. ಎಲ್ಲರೂ ಹಿಂದಿನಂತೆಯೇ ಮುಂಜಾಗ್ರತಾ ಕ್ರಮ ಮುಂದುವರಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

***

‘ವೈರಾಣು ಹರಡುವಿಕೆ ತಡೆಯಲು ಹೆಚ್ಚಿನ ನಿಗಾ ಅಗತ್ಯ’

ಓಮೈಕ್ರಾನ್‌ ದೃಢಪಟ್ಟ ಒಬ್ಬ ವ್ಯಕ್ತಿಯು ಇತ್ತೀಚೆಗೆ ಯಾವುದೇ ಪ್ರವಾಸ ಕೈಗೊಂಡಿಲ್ಲ. ಹಾಗಾಗಿ ಹೊಸ ರೂಪಾಂತರಿ ತಳಿ ಬಗ್ಗೆ ಓಮೈಕ್ರಾನ್‌ ವೈರಾಣು ಹರಡುವಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಅಗತ್ಯ ಇದೆ’ ಎಂದರು ಗೌರವ್‌ ಗುಪ್ತ ಅಭಿಪ್ರಾಯಪಟ್ಟರು.

‘ವೈರಾಣು ಹರಡುವಿಕೆ ತಡೆಯುವ ಬಗ್ಗೆ ಬೇರೆ ಬೇರೆ ಆಸ್ಪತ್ರೆಯ ತಜ್ಞರ ಜೊತೆ ಸಭೆ ನಡೆಸಿದ್ದೇವೆ. ತಾಂತ್ರಿಕ ಸಲಹಾ ಸಮಿತಿಯೂ ಅಭಿಪ್ರಾಯ ಹಾಗೂ ಸಲಹೆ ನೀಡಿದೆ. ರೂಪಾಂತರ ತಳಿ ಯಾವುದೇ ಆಗಿದ್ದರೂ ಎಂದಿನಂತೆಯೇ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್‌ ಧರಿಸಬೇಕು’ ಎಂದರು.

**

ಓಮೈಕ್ರಾನ್‌ ವೈರಾಣು ಹರಡದಂತೆ ತಡೆಯಲು ಇನ್ನಷ್ಟು ಬಿಗಿ ಕ್ರಮದ ಅಗತ್ಯ ಇದೆ. ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದೇವೆ

–ಗೌರವ್‌ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

***

ಇದನ್ನೂ ಓದಿ: ಓಮೈಕ್ರಾನ್ ಆತಂಕ: ಹೆದರುವ ಅವಶ್ಯಕತೆ ಇಲ್ಲವೆಂದ ಕೇಂದ್ರ ಆರೋಗ್ಯ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು