ಮಂಗಳವಾರ, ಅಕ್ಟೋಬರ್ 26, 2021
23 °C
ತಿದ್ದುಪಡಿ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು

ಆನ್‌ಲೈನ್ ಗೇಮ್: ‘ಡ್ರೀಮ್–11’ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆನ್‌ಲೈನ್‌ ಜೂಜು ನಿಷೇಧಿಸಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ಇತ್ತೀಚೆಗಷ್ಟೇ ತಿದ್ದುಪಡಿ ತರಲಾಗಿದ್ದು, ಈ ಹೊಸ ತಿದ್ದುಪಡಿ ಅನ್ವಯ ‘ಡ್ರೀಮ್–11’ ಆ್ಯಪ್ ವಿರುದ್ಧ ರಾಜ್ಯದಲ್ಲಿ ಮೊದಲ ಎಫ್ಐಆರ್ ದಾಖಲಾಗಿದೆ.

ಆನ್‌ಲೈನ್‌ ಗೇಮ್‌ಗಳ ಮೂಲಕ ಅಕ್ರಮವಾಗಿ ಜೂಜು ನಡೆಸುತ್ತಿರುವ ಆರೋಪದಡಿ ‘ಡ್ರೀಮ್–11’ ಆ್ಯಪ್‌ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನಾಗರಬಾವಿ ನಿವಾಸಿಯಾಗಿರುವ ಚಾಲಕ ಮಂಜುನಾಥ್ ಎಂಬುವರು ದೂರು ನೀಡಿದ್ದಾರೆ. ‘ಡ್ರೀಮ್–11’ ಆ್ಯಪ್‌ ನಿರ್ವಹಣೆ ಮಾಡುತ್ತಿರುವ 'ಸ್ಪೋರ್ಟಾ ಟೆಕ್ನಾಲಜೀಸ್’ ಕಂಪನಿಯ ಸಂಸ್ಥಾಪಕರಾದ ಮುಂಬೈನ ಭವಿತ್ ಸೇಠ್ ಮತ್ತು ಹರೀಶ್ ಜೈನ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕ್ರಿಕೆಟ್, ಹಾಕಿ, ಫುಟ್‌ಬಾಲ್, ಕಬಡ್ಡಿ ಹಾಗೂ ಬ್ಯಾಸ್ಕೆಟ್‌ಬಾಲ್ ಆಟಗಳನ್ನು ಆ್ಯಪ್‌ನಲ್ಲಿ ಸೇರಿಸಲಾಗಿದೆ. ಈ ಆಟಗಳ ಮೇಲೆ ತಂಡಗಳನ್ನು ರಚಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದೇ ತಂಡಗಳ ಮೂಲಕ ಕೋಟಿ ಕೋಟಿ ಹಣ ಗೆಲ್ಲಬಹುದೆಂದು ಆಮಿಷವೊಡ್ಡಿ ಜನರನ್ನು ಪ್ರಚೋದಿಸಲಾಗುತ್ತಿದೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.

‘ಆ್ಯಪ್‌ ಜಾಹೀರಾತು ನಂಬಿ ಹಲವರು, ಹಣ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಗೇಮ್‌ನಲ್ಲಿ ಗೆದ್ದವರಿಗೂ ಹಣ ನೀಡದೇ, ಮತ್ತೊಂದು ಮಗದೊಂದು ಗೇಮ್‌ ಮೇಲೆ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಬಹುತೇಕರು ಆ್ಯಪ್‌ ಮೂಲಕ ಹಣ ಠೇವಣಿ ಇರಿಸಿ ಆಟವಾಡುತ್ತಿದ್ದಾರೆ. ಅವರೆಲ್ಲರೂ ಆನ್‌ಲೈನ್ ಗೇಮ್‌ನಿಂದಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಆ್ಯಪ್‌ ಮೂಲಕ ಜನರ ದಿಕ್ಕು ತಪ್ಪಿಸುವ ಉದ್ದೇಶ ಆರೋಪಿಗಳದ್ದು ಎಂಬುದಾಗಿ ದೂರುದಾರರು ಹೇಳಿದ್ದಾರೆ’ ಎಂದೂ ಅಧಿಕಾರಿ ವಿವರಿಸಿದರು.

ಕಾಯ್ದೆ ಅನ್ವಯ ನೋಟಿಸ್ ಜಾರಿ: ‘ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 79 ಹಾಗೂ 80 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಾದ ಭವಿತ್ ಸೇಠ್ ಹಾಗೂ ಹರೀಶ್ ಜೈನ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಹೇಳಿಕೆ ಪಡೆದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

ಹಣವನ್ನು ಪಣವಾಗಿರಿಸಿ ಆನ್‌ಲೈನ್‌ ಮೂಲಕ ಆಡುವ ಎಲ್ಲ ಬಗೆಯ ಜೂಜುಗಳ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು