ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರ್ಡಿಂಗ್‌ಗೆ ಅವಕಾಶ: 'ರಾಜ್ಯ ಸರ್ಕಾರದ ಆದೇಶ ಸಂವಿಧಾನಕ್ಕೆ ವಿರುದ್ಧ'

ಸ್ಥಳೀಯ ಸರ್ಕಾರದ ಅಧಿಕಾರ ಮೊಟಕುಗೊಳಿಸುವ ನಡೆ: ಆರೋಪ
Last Updated 30 ಜುಲೈ 2021, 19:31 IST
ಅಕ್ಷರ ಗಾತ್ರ

ಹೋರ್ಡಿಂಗ್‌ ಮಾಫಿಯಾ ಮಣೆ ಭಾಗ–4

ಬೆಂಗಳೂರು: ಜಾಹೀರಾತು ಫಲಕ ಅಥವಾ ಹೋರ್ಡಿಂಗ್‌ಗಳನ್ನು ಹಾಕಲು ಅನುಮತಿ ನೀಡುವುದು ಅಥವಾ ಬಿಡುವುದು ಸ್ಥಳೀಯ ಸಂಸ್ಥೆಗೆ ಇರುವ ಅಧಿಕಾರ. ಬಿಬಿಎಂಪಿ ಬದಲಾಗಿ ರಾಜ್ಯಸರ್ಕಾರವು ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಂವಿಧಾನಕ್ಕೆ ವಿರುದ್ಧ. ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲೇಬಾರದು...

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಅಳವಡಿಸಲು ಅವಕಾಶ ನೀಡಿದ ರಾಜ್ಯಸರ್ಕಾರದ ಆದೇಶದ ವಿರುದ್ಧ ನಗರ ಯೋಜನಾ ತಜ್ಞರು, ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ. ಎಲ್ಲೆಂದರಲ್ಲಿ ಹೋರ್ಡಿಂಗ್‌ಗಳನ್ನು ಹಾಕುವುದರಿಂದ ನಗರದ ಸೌಂದರ್ಯ ಹಾಳಾಗುವುದಲ್ಲದೆ, ಭ್ರಷ್ಟಾಚಾರಕ್ಕೂ ಅವಕಾಶವಾಗುತ್ತದೆ ಎಂಬ ದೂರು ತಜ್ಞರದ್ದು.

‘ನೀರು, ವಿದ್ಯುತ್‌ನಂತಹ ಸೇವೆಗಳನ್ನು ಒದಗಿಸುವ, ಕರ ಸಂಗ್ರಹಿಸುವ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಇರುತ್ತದೆ. ರಾಜ್ಯಸರ್ಕಾರವು ಬಿಬಿಎಂಪಿಯಿಂದ ಆ ಅಧಿಕಾರವನ್ನು ಕಸಿದುಕೊಂಡಿದೆ. ಈಗ ಜಾಹೀರಾತು ಫಲಕಗಳನ್ನು ಅಳವಡಿಸುವುದಕ್ಕೆ ಅವಕಾಶ ನೀಡಿ ಆದೇಶಿಸಿರುವುದು ಸಂವಿಧಾನಕ್ಕೆ ವಿರುದ್ಧ’ ಎಂದು ‘ಸಿಟಿಜನ್ಸ್‌ ಫಾರ್‌ ಬೆಂಗಳೂರು’ ಸಂಸ್ಥೆಯ ಸಹಸ್ಥಾಪಕಿ ತಾರಾ ಕೃಷ್ಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಹೋರ್ಡಿಂಗ್ ಹಾಕುವುದರ ಕುರಿತು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ವಿರುದ್ಧ ಮತ ಚಲಾಯಿಸಿದ್ದರು. ಈಗ ಸರ್ಕಾರ ಮತ್ತೆ ಅವಕಾಶ ನೀಡಿರುವುದು ಅಚ್ಚರಿ ತಂದಿದೆ’ ಎಂದರು.

‘ಬಿಬಿಎಂಪಿಗೆ ಆದಾಯ ಬರುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ವಾದ ಮುಂದಿಡಲಾಗುತ್ತಿದೆ. ಆದರೆ, ಬಿಬಿಎಂಪಿಯಲ್ಲಿ ಶೇ 50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು, ಹೋರ್ಡಿಂಗ್‌ಗೆ ಅವಕಾಶ ನೀಡುವ ಮೂಲಕ ಉದ್ಯೋಗ ಸೃಷ್ಟಿಯ ಅನಿವಾರ್ಯತೆ ಏನೂ ಇಲ್ಲ’ ಎಂದೂ ಅವರು ಹೇಳಿದರು.

ಭ್ರಷ್ಟಾಚಾರಕ್ಕೆ ದಾರಿ:‘ಸರ್ಕಾರದ ಈ ನಿರ್ಧಾರದಿಂದ ಬಿಬಿಎಂಪಿಗೆ ಆದಾಯಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಒಂದು ಹೋರ್ಡಿಂಗ್‌ ಹಾಕಲು ಅನುಮತಿ ಪಡೆದು, ಹತ್ತಾರು ಕಡೆ ಹಾಕುತ್ತಾರೆ. ಯಾವುದು ಅಧಿಕೃತ, ಯಾವುದು ಅನಧಿಕೃತ ಎಂದು ಗೊತ್ತಾಗುವುದೇ ಇಲ್ಲ’ ಎಂದು ನಗರ ಯೋಜನಾ ತಜ್ಞ ವಿ. ರವಿಚಂದರ್‌ ಹೇಳಿದರು.

‘ಎಷ್ಟೋ ಕಡೆ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಇವು ಜನರ ಬಳಕೆಗಿಂತ ಹೆಚ್ಚಾಗಿ ಜಾಹೀರಾತು ಫಲಕಗಳನ್ನು, ಹೋರ್ಡಿಂಗ್‌ಗಳನ್ನು ಹಾಕುವುದಕ್ಕೇ ಬಳಕೆಯಾಗುತ್ತಿವೆ. ಇವುಗಳ ಸರಿಯಾದ ಲೆಕ್ಕವೂ ಸಿಗುವುದಿಲ್ಲವಾದ್ದರಿಂದ ಬಿಬಿಎಂಪಿಗೆ ಆದಾಯವೂ ಹೆಚ್ಚು ಬರುವುದಿಲ್ಲ. ಖಾಸಗಿ ಜಾಹೀರಾತುದಾರರಿಗೆ ಮಾತ್ರ ಲಾಭವಾಗುತ್ತಿದೆ. ಸರ್ಕಾರದ ಆದೇಶದ ಹಿಂದೆ ಜಾಹೀರಾತು ಲಾಬಿ ಕೆಲಸ ಮಾಡಿದಂತಿದೆ’ ಎಂದೂ ದೂರಿದರು.

‘ಹೋರ್ಡಿಂಗ್‌ಗೆ ಅಡ್ಡವಾಗುತ್ತವೆ ಎಂಬ ಕಾರಣಕ್ಕೆ ಮರಗಳ ರೆಂಬೆ–ಕೊಂಬೆಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿ, ನಗರದ ಸೌಂದರ್ಯಕ್ಕೂ ಧಕ್ಕೆ ಆಗುತ್ತದೆ’ ಎಂದರು.

‘ಸಾರ್ವಜನಿಕರ ಅಭಿಪ್ರಾಯ ಪಡೆದಿಲ್ಲ’

‘ಹೋರ್ಡಿಂಗ್‌ ಹಾಕುವುದಕ್ಕೆ ನಿರ್ಬಂಧ ವಿಧಿಸಿ ಹೈಕೋರ್ಟ್‌ ಈ ಹಿಂದೆ ತೀರ್ಪು ನೀಡಿತ್ತು. ಅಲ್ಲದೆ, ಹೋರ್ಡಿಂಗ್‌ಗೆ ಅವಕಾಶ ನೀಡಬೇಕೇ ಬೇಡವೇ ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಸರ್ಕಾರ ಪಡೆದಿಲ್ಲ. ಬಿಬಿಎಂಪಿಯಲ್ಲಿ ಇದರ ವಿರುದ್ಧ ನಿರ್ಣಯ ಕೈಗೊಂಡಿದ್ದರೂ, ಈಗ ಮತ್ತೆ ಅವಕಾಶ ನೀಡಿರುವುದು ಸರಿಯಲ್ಲ’ ಎಂದು ‘ಹೆರಿಟೇಜ್ ಬೇಕು’ ಸ್ಥಾಪಕಿ ಪ್ರಿಯಾ ಚೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ಮೂಲಸ್ವರೂಪವನ್ನೇ ಹಾಳು ಮಾಡುವಂತಹ ಆದೇಶ ಇದು. ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಲೂ ಇದು ಕಾರಣವಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಹೋರ್ಡಿಂಗ್‌ಗೆ ಅವಕಾಶ ಬೇಡ ಎಂಬುದರ ಬಗ್ಗೆ ಈ ಹಿಂದೆ ನಾವು ಆನ್‌ಲೈನ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದೆವು. 1,600ಕ್ಕೂ ಹೆಚ್ಚು ಜನ ಹೋರ್ಡಿಂಗ್‌ಗೆ ಅವಕಾಶ ಬೇಡ ಎಂದು ಒತ್ತಾಯಿಸಿದ್ದರು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT