ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನವೀಕರಣ ಕಾಮಗಾರಿಗೆ ವಿರೋಧ : ಗಾಂಧಿ ಬಜಾರ್ ಸ್ವಯಂಪ್ರೇರಿತ ಬಂದ್

ರಸ್ತೆ ನವೀಕರಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಮಾಲೀಕರು *ಪಾರಂಪರಿಕತೆ ಉಳಿಸಿಕೊಳ್ಳಲು ಆಗ್ರಹ
Published 2 ಮೇ 2023, 21:02 IST
Last Updated 2 ಮೇ 2023, 21:02 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯ ನವೀಕರಣ ಕಾಮಗಾರಿಯನ್ನು ವಿರೋಧಿಸಿರುವ ಸ್ಥಳೀಯ ಅಂಗಡಿಗಳ ಮಾಲೀಕರು, ಇದೇ ಮೊದಲ ಬಾರಿಗೆ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದರು.

ಡಿವಿಜಿ ರಸ್ತೆ, ಪುಟ್ಟಣ್ಣ ರಸ್ತೆ, ಬ್ಯೂಗಲ್ ರಾಕ್ ರಸ್ತೆ, ಎಚ್.ಬಿ.ಸಮಾಜ ರಸ್ತೆಯಲ್ಲಿರುವ ಅಂಗಡಿಗಳು, ಹೋಟೆಲ್‌ಗಳು, ಬ್ಯಾಂಕ್‌ಗಳು ಸೇರಿ ಬಹುತೇಕ ಎಲ್ಲ ಮಳಿಗೆಗಳನ್ನು ಮಂಗಳವಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ಇಡೀ ಗಾಂಧಿ ಬಜಾರ್ ಬಿಕೋ ಎನ್ನುತ್ತಿತ್ತು. ಬೀದಿ ಬದಿ ವ್ಯಾಪಾರಿಗಳು ಹೂವು–ಹಣ್ಣುಗಳ ಮಾರಾಟವನ್ನು ಎಂದಿನಂತೆ ನಡೆಸಿದರೂ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇರಲಿಲ್ಲ. ಬಸವನಗುಡಿ ವರ್ತಕರ ಮಂಡಳಿ ಹಾಗೂ ಹೆರಿಟೇಜ್ ಬಸವನಗುಡಿ ನಿವಾಸಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಗಾಂಧಿ ಬಜಾರ್ ಬಂದ್ ನಡೆಯಿತು. 

ನಗರ ಭೂ ಸಾರಿಗೆ ನಿರ್ದೇಶನಾಲಯವು (ಡಲ್ಟ್‌) ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮದವರೆಗೆ 840 ಮೀಟರ್‌ ಉದ್ದದ ರಸ್ತೆಯಲ್ಲಿ ವೈಟ್‌ ಟಾಪಿಂಗ್, ಪಾದಚಾರಿ ಮಾರ್ಗ ಒಳಗೊಂಡಂತೆ ವಿವಿಧ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ವೈಟ್‌ ಟಾಪಿಂಗ್ ಬಹುತೇಕ ಮುಗಿದಿದ್ದು, ಪಾದಚಾರಿ ಮಾರ್ಗ ನಿರ್ಮಾಣ ಸೇರಿ ವಿವಿಧ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿಂದೆ 100 ಅಡಿ ಅಗಲವಾಗಿದ್ದ ರಸ್ತೆಯನ್ನು 23 ಅಡಿಗೆ ಇಳಿಸಲಾಗಿದೆ. ಒಂದು ಕಡೆ 40 ಅಡಿ, ಮತ್ತೊಂದು ಕಡೆ 35 ಅಡಿ ಅಗಲದ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ಇದು ಸುತ್ತಮುತ್ತಲಿನ ಅಂಗಡಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದ್ದು, ‘ಇಲ್ಲಿನ ಪಾರಂ‍ಪರಿಕತೆ ಕಾಪಾಡಿಕೊಂಡು ಅಭಿವೃದ್ಧಿ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. 

ವ್ಯಾಪಾರ ವಹಿವಾಟಿಗೆ ಹೊಡೆತ: ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವನಗುಡಿ ವರ್ತಕರ ಮಂಡಳಿ ಅಧ್ಯಕ್ಷ ವೆಂಕಟೇಶ್ ಎಂ., ‘ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ತರಕಾರಿ, ತಿಂಡಿ ತಿನಿಸು, ಬಟ್ಟೆ, ಅಲಂಕಾರಿಕ ಸೇರಿ ಬಹುತೇಕ ಎಲ್ಲ ವಸ್ತುಗಳು ಗಾಂಧಿ ಬಜಾರ್‌ನಲ್ಲಿ ಲಭ್ಯವಾಗುತ್ತವೆ. ಹೀಗಾಗಿಯೇ, ಇಲ್ಲಿ ಸದಾ ಜನದಟ್ಟಣೆ ಇರುತ್ತಿತ್ತು. ಆದರೆ, ರಸ್ತೆ ಕಾಮಗಾರಿಯಿಂದಾಗಿ ಆರು ತಿಂಗಳಿಂದ ರಸ್ತೆಗಳ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರಿಲ್ಲದೆ, ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೈಟ್‌ಟಾಪಿಂಗ್ ಕಾಮಗಾರಿಯಿಂದ ಬಸವನಗುಡಿಯ ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗಿದೆ. ಆಹ್ಲಾದಕಾರ ಮತ್ತು ಶಾಂತಿಯ ವಾತಾವರಣ ಮರೆಯಾಗಿದೆ. ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಹಾಗೂ ಟ್ಯಾಗೂರು ವೃತ್ತದಲ್ಲಿ ವಾಹನಗಳನ್ನು ನಿಲ್ಲಿಸಿ, ಗಾಂಧಿ ಬಜಾರ್‌ಗೆ ನಡೆದುಕೊಂಡು ಬರಬೇಕಿದೆ. ಸ್ಥಳೀಯರನ್ನು ಕಡೆಗಣಿಸಿ ಇಷ್ಟಬಂದಂತೆ ಕಾಮಗಾರಿ ನಡೆಸಲಾಗುತ್ತಿದೆ. ಆಧುನೀಕರಣದ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳುವ ಬದಲು, ಈ ಮೊದಲಿನ ಗಾಂಧಿ ಬಜಾರ್‌ ಉಳಿಸಿಕೊಂಡು ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. 

ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಸೇರಿ ವಿವಿಧ ಕಾಮಗಾರಿ ಸಂಬಂಧ ಅಗೆದು ಬಿಟ್ಟಿರುವುದು
ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಸೇರಿ ವಿವಿಧ ಕಾಮಗಾರಿ ಸಂಬಂಧ ಅಗೆದು ಬಿಟ್ಟಿರುವುದು
ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಶೆಲ್ಟರ್ ನಿರ್ಮಾಣದ ಕಾಮಗಾರಿ ಕೈಗೊಂಡಿರುವುದು
ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಶೆಲ್ಟರ್ ನಿರ್ಮಾಣದ ಕಾಮಗಾರಿ ಕೈಗೊಂಡಿರುವುದು
ಗಾಂಧಿ ಬಜಾರ್‌ ಬಂದ್‌ನಿಂದಾಗಿ ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮದವರೆಗೆ ಜನರಿಲ್ಲದೆ ರಸ್ತೆ ಬಿಕೋ ಎನ್ನುತ್ತಿರುವುದು
ಗಾಂಧಿ ಬಜಾರ್‌ ಬಂದ್‌ನಿಂದಾಗಿ ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮದವರೆಗೆ ಜನರಿಲ್ಲದೆ ರಸ್ತೆ ಬಿಕೋ ಎನ್ನುತ್ತಿರುವುದು

‘ಕಾಮಗಾರಿಯಿಂದ ಮರಗಳಿಗೆ ಹಾನಿ’

‘ಪಾದಚಾರಿಗಳ ರಸ್ತೆ ಎಂಬ ಹೆಸರಿನಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅವೈಜ್ಞಾನಿಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಯ ವಿವರದ ಮಾಹಿತಿಯನ್ನು ಎಲ್ಲಿಯೂ ಹಾಕಿಲ್ಲ. ಇದು ₹ 24 ಕೋಟಿಯ ಯೋಜನೆ ಎಂದು ಹೇಳಲಾಗಿದೆ. ₹ 7 ಕೋಟಿಯಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬಹುದಾಗಿದೆ. ಜನರ ಹಣವನ್ನು ಪೋಲು ಮಾಡಲಾಗುತ್ತಿದೆ. ದಿನೇ ದಿನೇ ವಾಹನಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲೆಡೆ ರಸ್ತೆಯ ಅಗಲೀಕರಣ ನಡೆಯುತ್ತಿದೆ. ಆದರೆ ಇಲ್ಲಿ ರಸ್ತೆಯನ್ನು ಸಂಕುಚಿತ ಗೊಳಿಸುತ್ತಿರುವುದು ವಿಪರ್ಯಾಸ’ ಎಂದು ಬಸವನಗುಡಿ ವರ್ತಕರ ಮಂಡಳಿಯ ಸಲಹೆಗಾರ ನಟರಾಜ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದರು.  ‘ಕಾಮಗಾರಿಯ ಹೆಸರಿನಲ್ಲಿ ಹಳೆಯ ಮರಗಳಿಗೂ ಹಾನಿ ಮಾಡಲಾಗುತ್ತಿದೆ. ರಾಸಾಯನಿಕ ಬಳಕೆ ಬೇರುಗಳನ್ನು ಕಡಿದಿರುವುದರಿಂದ ಈಗಾಗಲೇ 80 ಮರಗಳಿಗೆ ಹಾನಿಯಾಗಿದೆ. ಈ ಬಗ್ಗೆ ಬಿಬಿಎಂಪಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸರಕು ಸಾಗಣೆ ವಾಹನಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 7 ಗಂಟೆಯ ಅವಧಿಯಲ್ಲಿ ಅವಕಾಶ ಕಲ್ಪಿಸಿದರೆ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗಲಿದೆ’ ಎಂದರು.

‘ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ’

‘ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸಬಾರದು. ಮುಖ್ಯ ರಸ್ತೆಗೆ ತಲಾ 10 ಅಡಿ ಅಗಲದ ಪಾದಚಾರಿ ಮಾರ್ಗ ಇರಬೇಕು. ದ್ವಿಚಕ್ರ ವಾಹನ ಹಾಗೂ ಕಾರುಗಳ ಪಾರ್ಕಿಂಗ್‌ಗೆ ಹಿಂದಿನಂತೆ ಅವಕಾಶ ಮಾಡಿಕೊಡಬೇಕು. ಮುಖ್ಯ ರಸ್ತೆಯ ಅಗಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು. ಅದೇ ರೀತಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮುಚ್ಚಬಾರದು’ ಎಂದು ವೆಂಕಟೇಶ್ ಎಂ. ಆಗ್ರಹಿಸಿದರು.  ‘ವೈಟ್‌ ಟಾಪಿಂಗ್ ಮಾಡಿರುವುದರಿಂದ ಪಾದಚಾರಿ ಮಾರ್ಗಗಳನ್ನೂ ಎತ್ತರಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ಈಗ 70 ರಿಂದ 80 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಇನ್ನೂ 100 ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದು ಸ್ಥಳೀಯ ನಿವಾಸಿಗಳು ವ್ಯಾಪಾರಿಗಳು ಮತ್ತು ಈಗಿರುವ ಬೀದಿ ಬದಿ ವ್ಯಾಪಾರಿಗಳ ಶಾಂತಿಯನ್ನು ಹಾಳು ಮಾಡುತ್ತದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು ಎಲ್ಲರಿಗೂ ಸಮಸ್ಯೆಯನ್ನು ತಂದೊಡ್ಡಲಿದೆ’ ಎಂದು ಹೇಳಿದರು. 

‘ಸ್ಥಳಾಂತರ ಅನಿವಾರ್ಯ’

‘ಗಾಂಧಿ ಬಜಾರ್‌ನಲ್ಲಿ ಇಂಡಿಯನ್ ಬ್ಯಾಂಕ್ ಶಾಖೆ 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 80 ವರ್ಷದ ಗ್ರಾಹಕರೂ ಇದ್ದಾರೆ. ವಾಹನ ನಿರ್ಬಂಧ ಪಾರ್ಕಿಂಗ್ ಸಮಸ್ಯೆಯಿಂದ ಅವರಿಗೆ ಬ್ಯಾಂಕ್‌ಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರು ಬೇರೆ ಶಾಖೆಗಳಿಗೆ ತೆರಳುತ್ತಿದ್ದಾರೆ. 6 ತಿಂಗಳಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ವಾಹನ ಸಂಚಾರ ನಿರ್ಬಂಧದಿಂದ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ತರಲು ಅಲ್ಲಿಗೆ ಸಲ್ಲಿಸಲು ಕಷ್ಟವಾಗುತ್ತಿದೆ. ಎಟಿಎಂಗೆ ಸಹ ಹಣವನ್ನು ಜಮಾ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬ್ಯಾಂಕಿನ ಶಾಖೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ಸುರೇಂದ್ರ ಪ್ರಕಾಶ್ ಸಿಂಗ್ ತಿಳಿಸಿದರು.  ‘ಅಭಿವೃದ್ಧಿಗೆ ವಿರೋಧವಿಲ್ಲ’ ‘ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ 1956ರಲ್ಲಿ ಹೂವು ಹಣ್ಣು ತರಕಾರಿ ಮಾರುಕಟ್ಟೆ ಕಟ್ಟಲಾಯಿತು. ಆ ಮಾರುಕಟ್ಟೆ ಈಗ ಪಾಳು ಬಿದ್ದಿದೆ. ಅದನ್ನು ಅಭಿವೃದ್ಧಿಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಬೇಕು. ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಕಾರ್ಯಗತವಾಗಿಲ್ಲ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ಪಾರಂಪರಿಕತೆ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕು. ಸರ್ಕಾರಕ್ಕೆ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಅನುಕಂಪ ಇದ್ದರೆ ಪ್ರತಿ ವಾರ್ಡ್‌ನಲ್ಲಿ ಮಾರಾಟಕ್ಕೆ ಅವಕಾಶ ನೀಡಲಿ’ ಎಂದು ವಿದ್ಯಾರ್ಥಿ ಭವನದ ಮಾಲೀಕ ಅರುಣ್ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT