ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಪಿ ಬಂದ ಬಳಿಕವಷ್ಟೇ ಲಸಿಕೆ; ಬಿಬಿಎಂಪಿ ವ್ಯಾಪ್ತಿಯ 1507 ಕಡೆ ಲಸಿಕೆ ಕೇಂದ್ರ

ಕೋವಿಡ್‌: ಬಿಬಿಎಂಪಿ ಭರದ ಸಿದ್ಧತೆ * 1507 ಕಡೆ ಲಸಿಕೆ ಕೇಂದ್ರ
Last Updated 6 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕೋವಿಡ್‌ ಲಸಿಕೆ ನೀಡಲಾಗುತ್ತದೆ. ಇದು ದುರ್ಬಳಕೆ ಆಗುವುದನ್ನು ತಡೆಯಲು ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡುವುದಕ್ಕೆ ಒಟ್ಟು ‌1,68,820 ಮಂದಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಅಷ್ಟೂ ಮಂದಿಯ ಮೊಬೈಲ್‌ ಸಂಖ್ಯೆಗಳನ್ನು ಕೇಂದ್ರ ಸರ್ಕಾರದ ಕೋವಿನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

‘ನಿಗದಿತ ದಿನದಂದು ಲಸಿಕೆ ಕೇಂದ್ರಕ್ಕೆ ಬರುವಂತೆ ಫಲಾನುಭವಿಗಳಿಗೆ ಸಂದೇಶ ಕಳುಹಿಸಲಾಗುತ್ತದೆ. ಲಸಿಕಾ ಕೇಂದ್ರಕ್ಕೆ ಬಂದವರು ನಾವು ಮೊದಲೇ ಗುರುತಿಸಿದ ಫಲಾನುಭವಿ ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ನೆರವನ್ನು ಪಡೆಯಲಿದ್ದೇವೆ. ಫಲಾನುಭವಿಗಳು ಲಸಿಕೆ ಕೇಂದ್ರಕ್ಕೆ ಬಂದಾಗ ಅವರ ಹೆಸರು ಹಾಗೂ ವಿವರವನ್ನು ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಆಗ ಫಲಾನುಭವಿಯ ಮೊಬೈಲ್‌ಗೆ ಒಮ್ಮೆ ಮಾತ್ರ ಬಳಸುವ ರಹಸ್ಯ ಸಂಖ್ಯೆ (ಒಟಿಪಿ) ರವಾನೆಯಾಗುತ್ತದೆ. ಸರಿಯಾದ ಒಟಿಪಿ ನೀಡಿದರೆ ಮಾತ್ರ ಅವವರಿಗೆ ಲಸಿಕೆ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಂಡಳಿಯಲ್ಲಿ ನೋಂದಾಯಿಸಿರುವ 4,300 ಸಂಸ್ಥೆಗಳಲ್ಲಿ ಹಾಗೂ 292 ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಶುಶ್ರೂಷಕಿಯರು, ಅರೆ ವೈದ್ಯಕೀಯ ಸಿಬ್ಬಂದಿ ಮುಂತಾದ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಬಿಬಿಎಂಪಿ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ಇತರ ಇಲಾಖೆಗಳ ಸಿಬ್ಬಂದಿ ಲಸಿಕೆಗಾಗಿ ಇನ್ನಷ್ಟು ಕಾಯಬೇಕು. ಅವರಿಗೆಲ್ಲ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ’ ಎಂದರು.

‘ಲಸಿಕೆ ರವಾನೆ ಇನ್ನೂ ಆರಂಭವಾಗಿಲ್ಲ. ಯಾವಾಗ ಲಸಿಕೆ ಕೈಸೇರಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ಲಸಿಕೆ ಸಂಗ್ರಹಿಸಲು ಬೇಕಾದ ಶೈತ್ಯಾಗಾರಗಳ ವ್ಯವಸ್ಥೆ ಹಾಗೂ ಕೈ ಸೇರಿದ ಬಳಿಕ ಆರೋಗ್ಯ ಕಾರ್ಯಕರ್ತರಿಗೆ ಅದನ್ನು ನೀಡುವುದಕ್ಕೆ ಅಗತ್ಯ ಇರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.

1,507 ಕಡೆ ಲಸಿಕೆ ಕೇಂದ್ರ: ‘ಎಲ್ಲೆಲ್ಲಿ ಲಸಿಕಾ ಕೇಂದ್ರಗಳ ಅಗತ್ಯ ಇವೆ ಎಂಬ ಬಗ್ಗೆ ಈಗಾಗಲೇ ಮ್ಯಾಪಿಂಗ್‌ ಮಾಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1,507 ಕಡೆ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಬಿಬಿಎಂಪಿ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್‌ ಹೋಂ, ಖಾಸಗಿ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು ಇದರಲ್ಲಿ ಸೇರಿವೆ’ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದರು.

‘ಪ್ರತಿ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು 1,507 ಸಿಬ್ಬಂದಿಯನ್ನು ನಿಯೋಜಿಸಲಿದ್ದೇವೆ. ಇವರಲ್ಲದೇ ಪ್ರತಿ ಕೇಂದ್ರದಲ್ಲಿ ನಾಲ್ವರು ಸಹಾಯಕ ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ. ಲಸಿಕಾ ಕೇಂದ್ರದಲ್ಲಿ ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ ಹಾಗೂ ಪರಿವೀಕ್ಷಣಾ ಕೊಠಡಿಗಳಿರುತ್ತವೆ.ಫಲಾನುಭವಿಗಳ ವಿವರವನ್ನು ಕೋವಿನ್‌ ಪೋರ್ಟಲ್‌ಗೆ ನೋಂದಾಯಿಸಲು, ಕಾಯುವ ಕೊಠಡಿ ಹಾಗೂ ಪರಿವೀಕ್ಷಣಾ ಕೊಠಡಿಗಳನ್ನು ನಿರ್ವಹಿಸಲು ಸಹಾಯಕ ಸಿಬ್ಬಂದಿ ನೆರವಾಗಲಿದ್ದಾರೆ’ ಎಂದು ವಿವರಿಸಿದರು.

‘ಲಸಿಕೆ ನೀಡಿದ ಬಳಿಕ ಅರ್ಧ ಗಂಟೆ ನಿಗಾ’

‘ಲಸಿಕೆ ಪಡೆದ ತಕ್ಷಣವೇ ಫಲಾನುಭವಿಯನ್ನು ಲಸಿಕಾ ಕೇಂದ್ರದಿಂದ ಹೊರಗೆ ಕಳುಹಿಸಿಕೊಡುವುದಿಲ್ಲ. ಅವರನ್ನು ಪರಿವೀಕ್ಷಣಾ ಕೊಠಡಿಯಲ್ಲಿ ಅರ್ಧ ಗಂಟೆ ಕುಳ್ಳಿರಿಸುತ್ತೇವೆ. ಲಸಿಕೆ ಪಡೆದ ಬಳಿಕ ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾಗುತ್ತವೆಯೇ ಎಂದು ನಿಗಾ ಇಡುತ್ತೇವೆ. ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳದಿದ್ದರೆ ಅವರನ್ನು ಕಳುಹಿಸಿಕೊಡಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

ಅಂಕಿ ಅಂಶ

1,46,019

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಲಸಿಕೆ ಪಡೆಯಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ಆರೋಗ್ಯ ಕಾರ್ಯಕರ್ತರು

4,300

ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಿಬ್ಬಂದಿಗೆ ಲಸಿಕೆ ಲಭ್ಯ

21,918

ಲಸಿಕೆ ಪಡೆಯಲಿರುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಆರೋಗ್ಯ ಕಾರ್ಯಕರ್ತರು

292

ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಸಿಬ್ಬಂದಿಗೆ ಲಸಿಕೆ ಲಭ್ಯ

ಕೋವಿಡ್‌ ಲಸಿಕೆ ಪಡೆಯುವವರ ವಲಯವಾರು ವಿವರ

ವಲಯ; ಖಾಸಗಿ ವೈದ್ಯಕೀಯ ಸಂಸ್ಥೆಗಳ ಫಲಾನುಭವಿಗಳು; ಖಾಸಗಿ ವೈದ್ಯಕೀಯ ಸಂಸ್ಥೆಗಳು; ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಫಲಾನುಭವಿಗಳು; ಸರ್ಕಾರಿ ವೈದ್ಯಕೀಯ ಸಂಸ್ಥೆಗಳು

ಯಲಹಂಕ; 12,275; 380; 952; 18

ದಾಸರಹಳ್ಳಿ; 8,210; 178; 466; 13

ಪಶ್ಚಿಮ; 25,556; 904; 5521; 79

ಪೂರ್ವ; 32,760; 851; 4,137; 49

ಮಹದೇವಪುರ; 17,747; 458; 762; 18

ದಕ್ಷಿಣ; 26,452; 945; 8,337; 66

ಆರ್‌.ಆರ್‌.ನಗರ; 15,902; 338; 714; 26

ಬೊಮ್ಮನಹಳ್ಳಿ; 7,126; 242; 1,912; 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT