ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್‌: ಮನವಿ

Last Updated 26 ಮೇ 2021, 21:57 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ವಿಧಾನಪರಿಷತ್‌ ಬಿಜೆಪಿ ಸದಸ್ಯರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್‌ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿದ ಸದಸ್ಯರು, ‘ಈ ಸಮುದಾಯದ ದೈನಂದಿನ ಜೀವನ ನಿರ್ವಹಣೆಯೂ ದುಸ್ತರವಾಗಿದೆ. ಜೀವನ ನಡೆಸಲು ಹಲವರು ಹಣ್ಣು, ತರಕಾರಿ ಮಾರುತ್ತಿದ್ದಾರೆ. ಕೆಲವರು ಕೂಲಿ ಕೆಲಸ‌ ಮಾಡುತ್ತಿದ್ದಾರೆ. ಸರ್ಕಾರದ ಆರ್ಥಿಕ ಪ್ಯಾಕೇಜ್ ಈ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲು ಸಹಕಾರಿ
ಆಗಲಿದೆ’ ಎಂದರು.

ಬಳಿಕ ಶಿಕ್ಷಕ, ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಹಾಗೂ ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಸುರೇಶ್‌ಕುಮಾರ್‌, ‘ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಿಕ್ಷಕರು ಸಹಾಯಹಸ್ತ ಚಾಚಬೇಕು’ ಎಂದು ಮನವಿ ಮಾಡಿದರು.

‘ಶಿಕ್ಷಕರ ಹಾಗೂ ಪದವೀಧರ‌ ಕ್ಷೇತ್ರದ ಸದಸ್ಯರು ವೇತನ ನೀಡಲು ಮುಂದೆ ಬಂದಿದ್ದಾರೆ. ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣಕ್ಕೂ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘಟನೆಯ ಮಂಜುನಾಥ್, ಪದವಿಪೂರ್ವ ಉಪನ್ಯಾಸಕರ‌ ಸಂಘಟನೆಯ ಅಧ್ಯಕ್ಷ ನಿಂಗೇಗೌಡ ಅವರು ಸಚಿವರ ನಿಲುವಿಗೆ ಬದ್ಧ ಎಂದರು.

ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಲಿಖಿತ ಒಪ್ಪಿಗೆ ನೀಡುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಅಧ್ಯಕ್ಷ ಶಂಭುಗೌಡನ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ‌ ನುಗ್ಲಿ ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ವೈ.ಎ. ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಶಿ, ಎಸ್‌.ವಿ. ಸಂಕನೂರ, ಹಣಮಂತ ನಿರಾಣಿ ಮತ್ತು ಚಿದಾನಂದ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT