ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ‘ನೋವು ನಿರ್ವಹಣಾ ಕ್ಲಿನಿಕ್’ ಪ್ರಾರಂಭ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತೊಂದು ಎಂ.ಆರ್.ಐ ಯಂತ್ರ ಅಳವಡಿಕೆ
Published 6 ಸೆಪ್ಟೆಂಬರ್ 2023, 14:09 IST
Last Updated 6 ಸೆಪ್ಟೆಂಬರ್ 2023, 14:09 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿ ಕಾರ್ಯನಿರ್ವಹಿಸುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ‘ನೋವು ನಿರ್ವಹಣಾ ಕ್ಲಿನಿಕ್’ ಪ್ರಾರಂಭಿಸಲಾಗಿದ್ದು, ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. 

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಬಿಎಂಸಿಆರ್‌ಐ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡ ಶಿಕ್ಷಕರ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ ಅವರು ಕ್ಲಿನಿಕ್‌ಗೆ ಚಾಲನೆ ನೀಡಿದರು. ಸಂಸ್ಥೆಗೆ ಅಳವಡಿಸಿರುವ ನೂತನ ನಾಮಫಲಕ, ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಎರಡನೇ ಎಂ.ಆರ್.ಐ. ಯಂತ್ರ, ಬಿಎಂಸಿಆರ್‌ಐ ಆಟದ ಮೈದಾನದ ಫ್ಲಡ್‌ ಲೈಟ್ ಸೇರಿ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿದ ಅವರು, ಶಿಕ್ಷಕರು ಹಾಗೂ ವೈದ್ಯರಿಗೆ ಶುಭಹಾರೈಸಿದರು. 

ನೂತನ ಸೌಲಭ್ಯಗಳ ಬಗ್ಗೆ ವಿವರಿಸಿದ ಬಿಎಂಸಿಆರ್‌ಐ ಡೀನ್ ಡಾ. ರಮೇಶ್ ಕೃಷ್ಣ ಕೆ., ‘ನೋವಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಪ್ರಾರಂಭಿಸಲಾದ ಮೊದಲ ಕ್ಲಿನಿಕ್ ಇದಾಗಿದೆ. ಕ್ಯಾನ್ಸರ್‌ ಸೇರಿ ವಿವಿಧ ಕಾಯಿಲೆಗಳಿಂದ ಕಾಣಿಸಿಕೊಳ್ಳುವ ನೋವು, ಬೆನ್ನುಮೂಳೆ, ಕೀಲು ಸೇರಿ ವಿವಿಧ ತೀವ್ರತರ ಹಾಗೂ ದೀರ್ಘಕಾಲಿನ ನೋವಿಗೆ ಇಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಆಸ್ಪತ್ರೆಯ ಅರಿವಳಿಕೆ ವಿಭಾಗ ಇದನ್ನು ನಿರ್ವಹಿಸುತ್ತದೆ. ಪ್ರಾಯೋಗಿಕವಾಗಿ 200ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ತಿಳಿಸಿದರು. 

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಳವಡಿಸಿರುವ ನೂತನ ಎಂ.ಆರ್‌.ಐ. ಯಂತ್ರವು ಸುಧಾರಿತ ತಂತ್ರಾಂಶವನ್ನು ಹೊಂದಿದೆ. ಈಗಾಗಲೇ ಒಂದು ಎಂ.ಆರ್‌.ಐ. ಯಂತ್ರ ಕಾರ್ಯನಿರ್ವಹಿಸುತ್ತಿದೆ. ಈ ಸಂಖ್ಯೆ ಎರಡಕ್ಕೆ ಏರಿಕೆ ಆಗಿರುವುದರಿಂದ ರೋಗಿಗಳು ಎಂ.ಆರ್‌.ಐ ಮಾಡಿಸಿಕೊಳ್ಳಲು ಕಾಯುವುದು ತಪ್ಪಲಿದೆ’ ಎಂದು ಹೇಳಿದರು. 

ಅಂತಿಮ ಹಂತದ ಆಯ್ಕೆ

‘ಕ್ಯಾನ್ಸರ್ ಸಂಧಿವಾತ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರ ಚಿಕಿತ್ಸೆಯ ನಂತರವೂ ನೋವು ಕಡಿಮೆಯಾಗದಿದ್ದಲ್ಲಿ ‘ನೋವು ನಿರ್ವಹಣಾ ಕ್ಲಿನಿಕ್’ಗೆ ಶಿಫಾರಸು ಮಾಡಲಾಗುತ್ತದೆ. ಎಲ್ಲ ವಯೋಮಾನದವರಿಗೂ ಈ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನೋವು ಶಮನ ಮಾಡಲು ಇದು ಅಂತಿಮ ಆಯ್ಕೆಯಾಗಿರುತ್ತದೆ. ಸಾಮಾನ್ಯವಾಗಿ 12 ವಾರಗಳು ಇರುವ ನೋವನ್ನು ದೀರ್ಘ ಕಾಲದ ನೋವು ಎಂದು ಕರೆಯಲಾಗುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು. ‘ವೈದ್ಯರ ಶಿಫಾರಸು ಇಲ್ಲದೆಯೇ ನೋವು ನಿವಾರಕ ಚಿಕಿತ್ಸೆ ಹಾಗೂ ಔಷಧವನ್ನು ನೀಡುವುದಿಲ್ಲ. ನೋವು ನಿವಾರಕ ಔಷಧದ ಅತಿಯಾದ ಬಳಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT