ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರ್ಯಾಂಡ್ ಬೆಂಗಳೂರು | ಬೀದಿ ವ್ಯಾಪಾರಕ್ಕೊಂದು ಸೂರು: ಪಾಲಿಕೆ ಬಜಾರ್‌

Published : 9 ಸೆಪ್ಟೆಂಬರ್ 2024, 21:34 IST
Last Updated : 9 ಸೆಪ್ಟೆಂಬರ್ 2024, 21:34 IST
ಫಾಲೋ ಮಾಡಿ
Comments

ಬೆಂಗಳೂರು: ಬೀದಿ ವ್ಯಾಪಾರಕ್ಕೊಂದು ಸೂರು ಕಲ್ಪಿಸುವ ಉದ್ದೇಶದಿಂದ ವಿಜಯನಗರದಲ್ಲಿ ಆರಂಭಗೊಂಡಿರುವ ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ‘ಶ್ರೀಕೃಷ್ಣದೇವರಾಯ ಪಾಲಿಕೆ ಬಜಾರ್‌’ ಈಗ ಆಕರ್ಷಣೆಯ ಕೇಂದ್ರವಾಗಿದೆ. ಯೋಜನೆ ಇಲ್ಲಿ ಯಶಸ್ವಿಯಾದರೆ ನಗರದಲ್ಲಿ ಸಾಧ್ಯ ಇರುವ ಕಡೆಗಳಲ್ಲೆಲ್ಲ ಇನ್ನಷ್ಟು ಪಾಲಿಕೆ ಬಜಾರ್‌ಗಳನ್ನು ತೆರೆಯಲು ಬಿಬಿಎಂಪಿ ಚಿಂತನೆ ನಡೆಸಿದೆ.

ಬೀದಿ ಬದಿ ವ್ಯಾಪಾರಿಗಳು ರಸ್ತೆ ಬದಿ, ಪಾದಚಾರಿ ಮಾರ್ಗ ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದನ್ನು ತಪ್ಪಿಸಿ, ಒಂದೇ ಕಡೆ ವ್ಯಾಪಾರ ಮಾಡಲು ಪಾಲಿಕೆ ಬಜಾರ್‌ ಅವಕಾಶ ಕಲ್ಪಿಸಿಕೊಟ್ಟಿದೆ. ನೆಲದಡಿಯಲ್ಲಿ ಮಾರುಕಟ್ಟೆ ಇದಾಗಿರುವುದರಿಂದ ವಾಹನ ಸಂಚಾರಕ್ಕೆ ಉಂಟಾಗುತ್ತಿದ್ದ ತೊಡಕು ತಪ್ಪಲಿದೆ. ಅಪಘಾತಗಳ ಸಂಖ್ಯೆಯೂ ತಗ್ಗುವ ನಿರೀಕ್ಷೆ ಮೂಡಿದೆ. ಪಾದಚಾರಿ ಮಾರ್ಗಗಳು ವ್ಯಾಪಾರಕ್ಕೆ ಬಳಕೆಯಾಗುವ ಬದಲು ಜನಸಂಚಾರಕ್ಕೆ ಒದಗಲಿವೆ. ಜೊತೆಗೆ ವ್ಯಾಪಾರಿಗಳು ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡುವ ಪ್ರಮೇಯ ತಪ್ಪಲಿದೆ.

ದೆಹಲಿಯಲ್ಲಿ ರಾಜೀವ್‌ ಚೌಕ ಮೆಟ್ರೊ ನಿಲ್ದಾಣ ಬಳಿಯೇ ಪಾಲಿಕೆ ಬಜಾರ್‌ ನಿರ್ಮಿಸಲಾಗಿದ್ದರೆ, ಬೆಂಗಳೂರಿನಲ್ಲಿಯೂ ನಮ್ಮ ಮೆಟ್ರೊ ಮತ್ತು ಬಿಎಂಟಿಸಿ ನಿಲ್ದಾಣಗಳ ಬಳಿಯೇ ಪಾಲಿಕೆ ಬಜಾರ್‌ ನಿರ್ಮಿಸಲಾಗಿದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ.

ಶ್ರೀಕೃಷ್ಣದೇವರಾಯ ಪಾಲಿಕೆ ಬಜಾರ್‌ ಅನ್ನು ಆಗಸ್ಟ್‌ 25ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರೂ ವ್ಯಾಪಾರಿಗಳು ತೆರಳಿರಲಿಲ್ಲ. ಗಣೇಶನ ಹಬ್ಬ ಮುಗಿಯುವವರೆಗೆ ಬೀದಿಯಲ್ಲೇ ವ್ಯಾಪಾರ ಮಾಡಿದ್ದು, ಸೆಪ್ಟೆಂಬರ್‌ 8ಕ್ಕೆ ಪಾಲಿಕೆ ಬಜಾರ್‌ ಒಳಗೆ ಅಂಗಡಿಗಳನ್ನು ತೆರೆದಿದ್ದಾರೆ. ಪೂಜೆ ಸಾಮಗ್ರಿ, ಹಣ್ಣು, ತರಕಾರಿ, ತೆಂಗಿನಕಾಯಿ, ಬಳೆ–ಕ್ಲಿಪ್‌ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳ ವ್ಯಾಪಾರಗಳು ಗರಿಗೆದರಿವೆ. ಗ್ರಾಹಕರು, ಕುತೂಹಲಿಗಳು ಪ್ರತಿದಿನ ಪಾಲಿಕೆ ಬಜಾರ್‌ಗೆ ಬಂದು ಸುತ್ತು ಹಾಕಿ ಹೋಗುತ್ತಿದ್ದಾರೆ. ಇದರಿಂದ ಪ್ರತಿದಿನ ಸಂಜೆಯ ಹೊತ್ತಿಗೆ ಬಜಾರ್‌ನಲ್ಲಿ ಜನ ಸಂಚಾರ ಹೆಚ್ಚಾಗಿದೆ.

7 ವರ್ಷ: 2017ರಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಿದ್ದ ರಾಜ್ಯ ಸರ್ಕಾರವು, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ₹5 ಕೋಟಿ ಬಿಡುಗಡೆ ಮಾಡಿತ್ತು. ಏಳು ವರ್ಷಗಳ ಬಳಿಕ ಒಟ್ಟು ₹13 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.

ಪೂರ್ಣ ಹವಾನಿಯಂತ್ರಿತವಾದ ಈ ಬಜಾರ್‌ ಒಟ್ಟು 1,165 ಚದರ ಮೀಟರ್‌ ವಿಸ್ತೀರ್ಣವನ್ನು ಹೊಂದಿದೆ. 136 ಮೀಟರ್‌ ಉದ್ದ, 11 ಮೀಟರ್‌ ಅಗಲ ಇರುವ ಈ ಬಜಾರ್‌ನಲ್ಲಿ ಪ್ರತಿ ಮಳಿಗೆಯ ವಿಸ್ತೀರ್ಣ 9 ಚದರ ಮೀಟರ್‌ ಆಗಿದೆ. 81 ಮಳಿಗೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಒಂದು ಕೊಠಡಿ ಭದ್ರತಾ ಸಿಬ್ಬಂದಿಗೆ, ಇನ್ನೊಂದು ಕೊಠಡಿ ವಿದ್ಯುತ್‌ ನಿರ್ವಹಣಾ ಸಿಬ್ಬಂದಿಗೆ ನೀಡಲಾಗಿದ್ದು, 79 ಮಳಿಗೆಗಳು ಬೀದಿ ವ್ಯಾಪಾರಿಗಳಿಗೆ ನೀಡಲಾಗಿದೆ. ಪ್ರತಿ ಮಳಿಗೆಗೆ ಅಗ್ನಿಶಾಮಕ ಉಪಕರಣ ಅಳವಡಿಸಲಾಗಿದೆ ಎಂದು ಪಾಲಿಕೆ ಬಜಾರ್‌ ಕಾಮಗಾರಿ ನಿರ್ವಹಿಸಿದ್ದ ಪರಿಚಿತ ಕನ್‌ಸ್ಟ್ರಕ್ಷನ್‌ ಎಂಜಿನಿಯರ್‌ ಶ್ರೇಯಸ್‌ ತಿಳಿಸಿದರು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಇಂಥ ಪಾಲಿಕೆ ಬಜಾರ್‌ಗಳ ಅವಶ್ಯಕತೆ ಹೆಚ್ಚಿದ್ದು, ಗ್ರಾಹಕರು ಅಧಿಕ ಇರುವ ಪ್ರದೇಶಗಳಲ್ಲಿ ಪಾಲಿಕೆ ಬಜಾರ್‌ಗಳನ್ನು ನಿರ್ಮಿಸಬೇಕು ಎಂಬುದು ಜನರ ಬೇಡಿಕೆಯಾಗಿದೆ.

ಬೀದಿ ಬದಿ ವ್ಯಾಪಾರಿಗಳ ಹಕ್ಕು ರಕ್ಷಣೆಗೆ ಪೂರಕ
ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳನ್ನು ನಿಯಂತ್ರಿಸಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು 2014ರಲ್ಲಿ ಕೇಂದ್ರ ಸರ್ಕಾರವು ಬೀದಿ ವ್ಯಾಪಾರಿಗಳ ಜೀವನದ ರಕ್ಷಣೆ ಮತ್ತು ವ್ಯಾಪಾರದ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಬಹುತೇಕ ಕಡೆಗಳಲ್ಲಿ ಬೀದಿ ವ್ಯಾಪಾರಿಗಳನ್ನು ಎಬ್ಬಿಸಿ ಕಳುಹಿಸಲಾಗುತ್ತಿತ್ತೇ ಹೊರತು, ಅವರ ಹಕ್ಕುಗಳನ್ನು ರಕ್ಷಿಸುವ ಕೆಲಸಗಳಾಗುತ್ತಿರಲಿಲ್ಲ. ಇಂಥ ಬಜಾರ್‌ಗಳು ಈ ಕಾಯ್ದೆಗೆ ಪೂರಕವಾಗಿವೆ ಎಂದು ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.
ವಿಜಯನಗರ ವ್ಯಾಪ್ತಿಯಲ್ಲಿ ಮತ್ತೆ ಮೂರು ಬಜಾರ್‌
ನಾನು ದೆಹಲಿಗೆ ಹೋದಾಗ ಅಲ್ಲಿನ ಪಾಲಿಕೆ ಬಜಾರ್‌ ನೋಡಿದ್ದೆ. ನಮ್ಮಲ್ಲಿಯೂ ಇಂಥ ಬಜಾರ್‌ ಆಗಬೇಕು ಎಂದು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವ ಇರಿಸಿದ್ದೆ. ಅವರು ಯೋಜನೆಗೆ ಅನುಮೋದನೆ ನೀಡಿ, ಅನುದಾನವನ್ನೂ ಒದಗಿಸಿದರು. ಸುಸಜ್ಜಿತವಾದ ಪಾಲಿಕೆ ಬಜಾರ್‌ ನಿರ್ಮಾಣವಾಗಿದೆ. ಈಗ ಬೀದಿ ವ್ಯಾಪಾರಿಗಳು ಬಜಾರ್‌ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಮುಂದೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಕಡೆ ಇದೇ ರೀತಿ ಪಾಲಿಕೆ ಬಜಾರ್‌ ಮಾಡುವ ಚಿಂತನೆ ಇದೆ.
–ಎಂ.ಕೃಷ್ಣಪ್ಪ, ಶಾಸಕ, ವಿಜಯನಗರ
ಜಾಗ ಇರುವಲ್ಲಿ ಪಾಲಿಕೆ ಬಜಾರ್‌
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪಾಲಕೆ ಬಜಾರ್‌ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಸೂಚನೆ ನೀಡಿದ್ದಾರೆ. ಕೆ.ಆರ್‌. ಮಾರುಕಟ್ಟೆಯಂಥ ದೊಡ್ಡ ಮಾರುಕಟ್ಟೆ ಇರುವಲ್ಲಿ ಪಾಲಿಕೆ ಬಜಾರ್‌ ಕಷ್ಟ. 50–60 ಬೀದಿ ವ್ಯಾಪಾರಿಗಳು ಒಂದೆಡೆ ವ್ಯಾಪಾರ ಮಾಡುತ್ತಿದ್ದರೆ, ಅಲ್ಲಿ ಸ್ಥಳಾವಕಾಶ ಇದ್ದರೆ ನೆಲದಡಿಯಲ್ಲಿ ಮಾರುಕಟ್ಟೆ ನಿರ್ಮಿಸಲಾಗುವುದು. ಬಿಬಿಎಂಪಿ ವತಿಯಿಂದ ಅಂಥ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ.
–ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ
ವ್ಯಾಪಾರಿಗಳು ಏನಾಂತಾರೆ?
ಪಾಲಿಕೆ ಬಜಾರ್‌ಗೆ ವ್ಯಾಪಾರಿಗಳು ಈಗಷ್ಟೇ ಸ್ಥಳಾಂತರಗೊಳ್ಳುತ್ತಿದ್ದಾರೆ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಗೊಂಡ ಬಳಿಕ ವಿಜಯನಗರ ಮೆಟ್ರೊ ನಿಲ್ದಾಣದ ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ಬೀದಿ ವ್ಯಾಪಾರ ಪೂರ್ಣ ನಿಷೇಧಗೊಳ್ಳಲಿದೆ. ಬೀದಿಯಲ್ಲಿ ವ್ಯಾಪಾರ ಇಲ್ಲದೇ ಇದ್ದಾಗ ಇಲ್ಲೇ ಇರುವ ಪಾಲಿಕೆ ಬಜಾರ್‌ಗೆ ಗ್ರಾಹಕರು ಬಂದೇ ಬರುತ್ತಾರೆ. ನಮ್ಮ ಶಾಸಕರ ಕನಸಿನ ಯೋಜನೆ ಯಶಸ್ವಿಗೊಳ್ಳಲಿದೆ.
–ಅಬ್ದುಲ್‌ ರಿಯಾಜ್‌, ವಿಜಯನಗರ ಹಣ್ಣು ಮತ್ತು ತರಕಾರಿ ಮಾರಾಟಗಾರರ ಸಂಘದ ಕಾರ್ಯದರ್ಶಿ
ಇಲ್ಲಿನ ಶಾಸಕರು ಒಳ್ಳೆಯ ಬಜಾರ್‌ ನಿರ್ಮಾಣ ಮಾಡಿದ್ದಾರೆ. ಬೀದಿ ವ್ಯಾಪಾರಿಗಳು ಇಲ್ಲಿಯೂ ಅಂಗಡಿ ಇಟ್ಟುಕೊಂಡು, ಹೊರಗೆಯೂ ಇನ್ನೊಂದು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುವುದನ್ನು ಬಿಡಬೇಕು. ಇಲ್ಲೇ ಎಲ್ಲರೂ ವ್ಯಾಪಾರ ಆರಂಭಿಸಿದರೆ ಗ್ರಾಹಕರು ಹೊರಗೆ ಖರೀದಿಸುವುದಿಲ್ಲ. ಇಲ್ಲಿ ಉತ್ತಮ ವ್ಯಾಪಾರ ನಡೆಯಲಿದೆ.
–ಕೆಂಪರಾಜು, ಪೂಜಾ ಸಾಮಗ್ರಿ ವ್ಯಾಪಾರಿ
ನಾನು 50 ವರ್ಷಗಳಿಂದ ಹೊರಗೆ ಮಳೆ, ಬಿಸಿಲು ಲೆಕ್ಕಿಸದೇ ವ್ಯಾಪಾರ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಮಗೆ ಈ ಬಜಾರ್‌ ಮೂಲಕ ರಕ್ಷಣೆ ಸಿಕ್ಕಿದೆ. ಹಳೇ ವ್ಯಾಪಾರಿಗಳನ್ನು ಗುರುತಿಸಿ ಅಂಗಡಿಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ವ್ಯಾಪಾರ ಆರಂಭಿಸಿರುವ ಕೆಲವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಮಳಿಗೆಗಳು ಸಿಕ್ಕಿವೆ.
–ರಾಮಣ್ಣ, ತೆಂಗಿನಕಾಯಿ ವ್ಯಾಪಾರಿ
ನಿನ್ನೆಯಷ್ಟೇ ಅಂಗಡಿ ತೆರೆದಿದ್ದೇವೆ. ಜನರು ಕುತೂಹಲದಿಂದ ಬಂದು ನೋಡಿ ಹೋಗಿದ್ದಾರೆ. ಮೇಲೆ ಬೀದಿ ವ್ಯಾಪಾರ ನಿಂತರೆ ಜನರು ಬಜಾರ್‌ ಒಳಗೆ ಬರಲಿದ್ದಾರೆ. ಇದೇ ರೀತಿ ನಗರದ ಬೇರೆ ಬೇರೆ ಪ್ರದೇಶದಲ್ಲಿ ಬಜಾರ್‌ ಮಾಡಿದರೆ ನಮ್ಮಂತೆ ದುಡಿದು ತಿನ್ನುವವರಿಗೆ ಅನುಕೂಲವಾಗಲಿದೆ.
–ವಲ್ಲಿ ಕೃಷ್ಣಮೂರ್ತಿ, ಹೂವಿನ ವ್ಯಾಪಾರಿ
ವ್ಯಾಪಾರ ಶುರುವಾಗಿದೆ. ಇನ್ನೊಂದೆರಡು ವಾರ ಹೋದರೆ ವ್ಯಾಪಾರ ಕುದುರಿಕೊಳ್ಳಬಹುದು. ಎಲ್ಲರೂ ಇಲ್ಲೇ ವ್ಯಾಪಾರ ಶುರು ಮಾಡಿದಾಗ ಜನರೂ ಇಲ್ಲೇ ಬರಲಿದ್ದಾರೆ. ಮಳೆ, ಬಿಸಿಲಿನ ಭಯ ಇಲ್ಲದೇ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.
–ಮಂಜುಳಾ, ತರಕಾರಿ ವ್ಯಾಪಾರಿ
ಪಾಲಿಕೆ ಬಜಾರ್ ಅಂಕಿ ಅಂಶ
  • ₹ 5 ಕೋಟಿ: 2017–18ರ ಸಾಲಿನಲ್ಲಿ ನಗರೋತ್ಥಾನದಲ್ಲಿ ನೀಡಿದ ಅನುದಾನ

  • ₹ 8 ಕೋಟಿ: 2021–22ರ ಸಾಲಿನಲ್ಲಿ ನಗರೋತ್ಥಾನದಲ್ಲಿ ನೀಡಿದ ಅನುದಾನ

  • 79: ಒಟ್ಟು ಮಳಿಗೆಗಳ ಸಂಖ್ಯೆ

  • 5: ಹೊರಾಂಗಣದಲ್ಲಿರುವ ಎ.ಸಿ. ಯುನಿಟ್‌ಗಳು

  • 26: ಒಳಾಂಗಣದಲ್ಲಿರುವ ಎ.ಸಿ. ಯುನಿಟ್‌ಗಳು

  • 1: ಲಿಫ್ಟ್‌

  • 2: ಎಸ್ಕಲೇಟರ್‌

  • 8: ಪ್ರವೇಶ ದ್ವಾರ

  • 145: ವಿದ್ಯುತ್‌ ದೀಪಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT