ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತೀಯತೆಯಿಂದ ಸಂಗೀತ ಮಲಿನ: ರಹಮತ್ ತರಿಕೆರೆ

ಪಂಡಿತ್ ರಾಜೀವ್ ತಾರಾನಾಥ್ ನುಡಿನಮನ: ರಹಮತ್ ತರಿಕೆರೆ ಕಳವಳ
Published 30 ಜೂನ್ 2024, 16:10 IST
Last Updated 30 ಜೂನ್ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಹುಟ್ಟುತ್ತಿರುವ ಮತೀಯ ರಾಜಕಾರಣವನ್ನು ಪಂಡಿತ್ ರಾಜೀವ್ ತಾರಾನಾಥ್ ಅವರು ಕಟುವಾಗಿ ವಿರೋಧಿಸುತ್ತಿದ್ದರು’ ಎಂದು ವಿಮರ್ಶಕ ರಹಮತ್ ತರೀಕೆರೆ ಅವರು ಹೇಳಿದರು.

‘ಅಭಿನಯ ತರಂಗ’ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪಂಡಿತ್ ರಾಜೀವ್ ತಾರಾನಾಥ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಸಂಬಂಧಗಳನ್ನು ಒಡೆಯುವ ಕೃತ್ಯ ನಡೆದಾಗಲೆಲ್ಲಾ ಸಂಗೀತಗಾರರು ಅದನ್ನು ತಡೆಯುವ ಕೆಲಸ ಮಾಡಿದ್ದಾರೆ. 1992ರ ಗಲಭೆಯ ಸಂದರ್ಭದಲ್ಲಿ ರಾಜೀವ್‌ ಆದಿಯಾಗಿ ಹಲವು ಸಂಗೀತಗಾರರು, ಇವರದ್ದು ತಪ್ಪು... ಅವರದ್ದು ತಪ್ಪು ಎಂಬ ಚರ್ಚೆಗೇ ಹೋಗಲಿಲ್ಲ. ಬದಲಿಗೆ ಗೇಟ್‌ ವೇ ಆಫ್‌ ಇಂಡಿಯಾ ಬಳಿ ಸೇರಿ, ಹಾಡುತ್ತಿದ್ದರು. ಹೀಗೆ ಹಾಡುವ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು’ ಎಂದು ಅವರು ನೆನಪಿಸಿಕೊಂಡರು.

‘ಆದರೆ ಈಗ, ಧರ್ಮಾತೀತವಾಗಿ ಇರಬೇಕಿದ್ದ ರಂಗಭೂಮಿ ಮತ್ತು ಸಂಗೀತವು ಮತೀಯತೆಯಿಂದ ಮಲಿನವಾಗುತ್ತಿದೆ. ಈಗ, ಒಂದು ನಿರ್ದಿಷ್ಟ ಧರ್ಮದ ತಬಲ ವಾದಕರನ್ನು ದೂರವಿಡುವುದು ಹೇಗೆ ಎಂಬುದರ ಬಗೆ ಸದಾ ಯೋಚಿಸಲಾಗುತ್ತಿದೆ ಎಂದು ಹಲವು ಸಂಗೀತಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪಂಡಿತ್‌ ರಾಜೀವ್ ತಾರಾನಾಥರು ಇಂಥದ್ದನ್ನು ಕಟುವಾಗಿ ವಿರೋಧಿಸುತ್ತಿದ್ದರು’ ಎಂದು ಅವರು ಹೇಳಿದರು.

ರಾಜೀವ್ ತಾರಾನಾಥ್ ಅವರ ಜೀವನ ಚರಿತ್ರೆ ಬರೆಯುವ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಲೇಖಕಿ ಸುಮಂಗಲ ಅವರು ಹಂಚಿಕೊಂಡರು. ಗಾಯಕಿ ಎಂ.ಡಿ.ಪಲ್ಲವಿ ಮತ್ತು ಗಾಯಕ ರೂಮಿ ಹರೀಶ್ ಅವರು ಗೀತನಮನ ಸಲ್ಲಿಸಿದರು.

ರಿಯಾಜ್ ಇರುವುದು ತಮ್ಮ ಕೊರತೆಗಳನ್ನು ಮುಖಾಮುಖಿಯಾಗಲು ಎಂದು ರಾಜೀವ್ ಅವರು ಹೇಳುತ್ತಿದ್ದರು. ಕಛೇರಿಯಲ್ಲಿ ಸರೋದ್‌ ನುಡಿಸುವುದಕ್ಕೂ ರಿಯಾಜ್‌ ವೇಳೆ ಅವರ ಪ್ರಯೋಗಕ್ಕೂ ಬಹಳ ಅಂತರವಿತ್ತು.
ಸಿ.ಚಂದ್ರಶೇಖರ್, ನಿವೃತ್ತ ಐಪಿಎಸ್‌ ಅಧಿಕಾರಿ
ಲಿಂಗಪರಿವರ್ತನೆ ಕಾರಣಕ್ಕೆ ಸಂಗೀತ ಕ್ಷೇತ್ರ ನನ್ನನ್ನು ದೂರವಿರಿಸಿದಾಗ ರಾಜೀವ್ ಅವರು ಕರೆದು ಕಛೇರಿ ಕೊಟ್ಟರು. ರಿಯಾಜ್‌ನಲ್ಲಿ ಏನೆಲ್ಲಾ ಪ್ರಯೋಗ ನಡೆಸಬಹುದು ಎಂಬುದನ್ನು ಹೇಳಿಕೊಟ್ಟರು.
ರೂಮಿ ಹರೀಶ್, ಗಾಯಕ ಮತ್ತು ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT