ಭಾನುವಾರ, ಆಗಸ್ಟ್ 1, 2021
27 °C
ಶಾಸಕರು, ಸಚಿವರಿಗೆ ನಗರದ ಪತ್ರಿಕಾ ವಿತರಕರ ಮನವಿ

ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸಂದರ್ಭದಲ್ಲೂ ಮನೆ ಮನೆಗಳಿಗೆ ದಿನಪತ್ರಿಕೆ ತಲುಪಿಸುತ್ತಿರುವ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಹಾಗೂ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರು ಹಾಗೂ ಸಚಿವರಿಗೆ ನಗರದ ಪತ್ರಿಕಾ ವಿತರಕರು ಮನವಿ ಸಲ್ಲಿಸಿದರು.

‘ಪತ್ರಕರ್ತರಿಗೆ ಸರ್ಕಾರ ಈಗಾಗಲೇ ವಿಮಾ ಸೌಲಭ್ಯ ಕಲ್ಪಿಸಿದೆ. ಇದೇ ಮಾದರಿಯ ವಿಮಾ ಸೌಲಭ್ಯವನ್ನು ಪತ್ರಿಕಾ ವಿತರಕರು, ಪತ್ರಿಕೆ ಹಂಚುವವರು ಹಾಗೂ ಪತ್ರಿಕೆಗಳ ಮಾರಾಟ ಮಾಡುವವರಿಗೂ ಘೋಷಿಸಬೇಕು’ ಎಂದು ಬೆಂಗಳೂರು ನಗರ ಪತ್ರಿಕಾ ವಿತರಕರ ಬಳಗದ ಅಧ್ಯಕ್ಷ ಎನ್.ದೇವರಾಜ್ ಒತ್ತಾಯಿಸಿದರು.

‘ಕೊರೊನಾ ಸೋಂಕಿನ ನಡುವೆಯೂ ಪತ್ರಿಕಾ ವಿತಕರರು ಎದೆಗುಂದದೆ ಜನರಿಗೆ ಮಾಹಿತಿ ತಲುಪಿಸುವ ಸಲುವಾಗಿ ದಿನಪತ್ರಿಕೆಗಳನ್ನು ಹಂಚುತ್ತಿದ್ದಾರೆ. ನಗರದಲ್ಲಿರುವ 3 ಸಾವಿರಕ್ಕೂ ಹೆಚ್ಚಿನ ಪತ್ರಿಕಾ ವಿತರಕರ ಕೆಳಗೆ 15 ಸಾವಿರಕ್ಕೂ ಹೆಚ್ಚು ಪತ್ರಿಕೆ ಹಂಚುವ ಹುಡುಗರು ಕೆಲಸ ಮಾಡುತ್ತಿದ್ದಾರೆ. ಅಸಂಘಟಿತರಾಗಿರುವ ಇವರಿಗೆ ಬರುವ ಅಲ್ಪ ಸಂಬಳವೇ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುವ 1,500ಕ್ಕೂ ಹೆಚ್ಚು ಮಳಿಗೆಗಳಿವೆ. ಕೊರೊನಾ ಸೋಂಕಿನಿಂದ ಮಳಿಗೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸರ್ಕಾರವೇ ಇವರ ನೆರವಿಗೆ ಧಾವಿಸಬೇಕಿದೆ’ ಎಂದರು.

‘ಪತ್ರಿಕೆ ವಿತರಿಸುವ ಹುಡುಗರು ಕೊರೊನಾ ಕಾರಣಕ್ಕೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪತ್ರಿಕಾ ವಿತರಕರ ಕಷ್ಟ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ’ ಎಂದು ಯಲಹಂಕ ವಲಯದ ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಎಂ.ಸತೀಶ್ ಅಳಲು ತೋಡಿಕೊಂಡರು.

‘ಪತ್ರಿಕಾ ವಿತರಕರು ಹಾಗೂ ಕೆಲಸಗಾರರಿಗೆ ಕನಿಷ್ಠ ವೇತನ ಸೌಲಭ್ಯವಿಲ್ಲ. ಒಂದು ವೇಳೆ ಈ ವೃತ್ತಿಯಲ್ಲಿ ತೊಡಗಿರುವವರಿಗೆ ಸೋಂಕು ತಗುಲಿದರೆ, ಅದರ ಚಿಕಿತ್ಸಾ ವೆಚ್ಚ ಭರಿಸಲೂ ಅವರಿಂದ ಸಾಧ್ಯವಿಲ್ಲ. ಇವರನ್ನೇ ಆಶ್ರಯಿಸಿರುವ ಕುಟುಂಬಗಳು ಸಂಕಷ್ಟದಲ್ಲಿವೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಪತ್ರಿಕಾ ವಿತರಕರು ಕೆಲಸ ಮಾಡಬೇಕಿದೆ’ ಎಂದು ವಿವರಿಸಿದರು.

‘ವಿಮೆ ಸೌಲಭ್ಯದ ಜೊತೆಗೆ ಕೆಲಸಗಾರರಿಗೆ ಉಚಿತ ಚಿಕಿತ್ಸೆ ಸಿಗುವಂತಾಗಬೇಕು. ಆಟೊ, ಟ್ಯಾಕ್ಸಿ ಚಾಲಕರು ಸೇರಿ ವಿವಿಧ ಶ್ರಮಿಕ ವರ್ಗಗಳಿಗೆ ನೆರವು ಘೋಷಿಸುವಂತೆ ಕೊರೊನಾ ಮುಗಿಯುವವರೆಗೆ ಪತ್ರಿಕಾ ವಿತರಕರಿಗೆ ಸರ್ಕಾರ ನೆರವು ಘೋಷಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು