ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

Last Updated 21 ಮಾರ್ಚ್ 2019, 7:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಿನ್ನೆ ಸಂಭವಿಸಿದ ಯುದ್ಧವಿಮಾನ ಅಪಘಾತದಲ್ಲಿ ಹುತಾತ್ಮರಾದಇಬ್ಬರು ಪೈಲಟ್‌ಗಳು ಒಂದು ವೇಳೆ ಅರ್ಧ ಸೆಕೆಂಡ್ ತಮ್ಮ ಜೀವದ ಬಗ್ಗೆ ಯೋಚಿಸಿದ್ದರೆ,ನಗರದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು. ವಿಮಾನ ಸ್ಫೋಟಗೊಂಡ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೈಲಟ್‌ಗಳ ತ್ಯಾಗದ ಬೆಲೆ ಅರ್ಥವಾಗುತ್ತದೆ.

ವಿಮಾನ ನೆಲಬಿಟ್ಟು ಮೇಲೇರಿದ ನಂತರ (ಟೇಕಾಫ್) ಪೈಲಟ್‌ಗಳು ಹೊರಬಂದಿದ್ದರೆ (ಎಜೆಕ್ಟ್) ಅವರ ಜೀವ ಉಳಿಯುವ ಸಾಧ್ಯತೆ ಇತ್ತು. ಆದರೆ ವಿಮಾನ ಎಚ್‌ಎಎಲ್ ಕಾಪೌಂಡ್‌ನಿಂದ ಆಚೆ, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿಬೀಳುತ್ತಿತ್ತು. ಹೆಸರು ಹೇಳಲು ಇಚ್ಛಿಸದ ವಾಯುಪಡೆ ಅಧಿಕಾರಿ ಮತ್ತು ಅಪಘಾತ ಸ್ಥಳಕ್ಕೆ ಧಾವಿಸಿ ಬಂದ ಜನರು ಈ ಮಾಹಿತಿಯನ್ನು ದೃಢಪಡಿಸಿದರು.

‘ವಿಮಾನ ರನ್‌ವೇಯಲ್ಲಿ ಓಡುತ್ತಿರುವಾಗಲೇ ಟೈರ್ ನಡುಗುತ್ತಾ ಕಳಚಿಕೊಂಡಿತು. ಅದರ ಲೋಹದ ತುದಿ ಅತಿವೇಗದಲ್ಲಿ ರನ್‌ವೇ ಉಜ್ಜಿತು. ಈ ಘರ್ಷಣೆಯಿಂದ ಬೆಂಕಿಯ ಕಿಡಿಗಳು ಹಾರಿದವು.ಇನ್ನೇನು ಟೇಕಾಫ್ ಆಗಬೇಕು ಎನ್ನುವಾಗ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಸೆಕೆಂಡ್‌ಗಳಲ್ಲಿ ಇಷ್ಟೆಲ್ಲಾ ನಡೆದು ಹೋದಾಗಪೈಲಟ್‌ಗಳು ಅಷ್ಟೇ ತುರ್ತಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಯಿತು’ ಎಂದುಇಡೀ ಘಟನೆಯ ಪ್ರತ್ಯಕ್ಷದರ್ಶಿಯೂ ಆಗಿರುವ ವಾಯುಪಡೆಯ ಅಧಿಕಾರಿ ನೆನಪಿಸಿಕೊಳ್ಳುತ್ತಾರೆ.

‘ವೈಮಾನಿಕ ಸಂಚಾರ ನಿಯಂತ್ರಕರನ್ನು (ಎಟಿಸಿ) ಕೊನೆಯ ಬಾರಿಗೆ ಸಂಪರ್ಕಿಸಿ, ವಿಮಾನವನ್ನು ಹಾರಿಸುವ ನಿರ್ಧಾರ ಕೈಬಿಟ್ಟು ವಿಮಾನದಿಂದ ಎಜೆಕ್ಟ್ ಆದರು (ಹೊರಬಿದ್ದರು). ಸದ್ದು, ಬೆಂಕಿ, ಹೊಗೆ ತುಂಬಿದ್ದ ವಾತಾವರಣದಲ್ಲಿ ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದೇ ಯಾರಿಗೂ ಕೇಳಿಸಲಿಲ್ಲ. ಅವರನ್ನು ಕ್ಷೇಮವಾಗಿ ಇಳಿಸಬೇಕಿದ್ದ ಪ್ಯಾರಾಚೂಟ್‌ಗಳು ಸುಟ್ಟುಹೋದವು. ಓರ್ವ ಪೈಲಟ್ ಉರಿಯುತ್ತಿದ್ದ ವಿಮಾನದ ಸನಿಹವೇ ಇಳಿದ ಕಾರಣ ಜೀವಂತ ಸುಟ್ಟುಹೋದ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಹುತಾತ್ಮನಾದ’ ಎಂದು ಅವರು ವಿವರಿಸುತ್ತಾರೆ.

ವಿಮಾನವನ್ನುಟೇಕಾಫ್ ಮಾಡದಿರುವ ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದ ಪೂರ್ವ ದಿಕ್ಕಿನ ತುದಿಗೆ ತಾಗಿಕೊಂಡಂತೆ ಕರಿಯಮ್ಮನ ಅಗ್ರಹಾರ ಮುಖ್ಯರಸ್ತೆ ಇದೆ. ಟೆಕ್‌ಪಾರ್ಕ್‌ ಮತ್ತು ಯಮಲೂರ್‌ ಗ್ರಾಮಗಳಿಗೆ ಹೋಗುವ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಪೀಕ್ ಹವರ್ ಟ್ರಾಫಿಕ್ ಸದಾ ಗಿಜಿಬಿಜಿ. ಹಳೇ ಏರ್‌ಪೋರ್ಟ್‌ ರಸ್ತೆ, ಮಾರತ್ತಹಳ್ಳಿ ಪ್ರದೇಶಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಅಲ್ಲ.

ಜನನಿಬಿಡ ಮಂಜುನಾಥ ಲೇಔಟ್ವಿಮಾನ ಓಡುವ ಏರ್‌ಸ್ಟ್ರಿಪ್‌ ತುದಿಗೆ ಕೇವಲ 500 ಮೀಟರ್ ದೂರದಲ್ಲಿದೆ. ಟ್ರಿನಿಟಿ ಇಂಗ್ಲಿಷ್ ಹೈಸ್ಕೂಲ್, ಕಾವೇರಿ ಜ್ಞಾನಮಿತ್ರ ಶಾಲೆ ಮತ್ತು ಎಂವಿಜೆ ಇಂಟರ್‌ನ್ಯಾಷನಲ್ ಸ್ಕೂಲ್‌ಗಳು ವಿಮಾನ ಸ್ಫೋಟಗೊಂಡ ಸ್ಥಳಕ್ಕೆ ಕೂಗಳತೆ ದೂರದಲ್ಲಿದೆ. ಔಟರ್‌ ರಿಂಗ್‌ ಮುಂಭಾಗದಲ್ಲಿಯೇ ಚಂದ್ರ ಲೇಔಟ್ ಮತ್ತು ರಾಜಶ್ರೀ ಲೇಔಟ್‌ಗಳ ಸಾವಿರಾರು ಮನೆಗಳಿವೆ.

ವಿಮಾನ ನಿಲ್ದಾಣದ ಆವರಣದಲ್ಲಿ ಎಲ್ಲಿ ನೋಡಿದರು ವಿಮಾನ ಸ್ಫೋಟದ ಕುರುಹುಗಳೇ ಇದ್ದವು. ಸುಟ್ಟು ಕರಕಲಾದ ಪೊದೆಗಳು, ವಿಮಾನದ ಅವಶೇಷಗಳು ದುರಂತದ ಸಾಕ್ಷಿ ಹೇಳುತ್ತಿದ್ದವು. ‘ಒಂದು ವೇಳೆ ಬೆಂಕಿ ಹೊತ್ತಿಕೊಂಡ ವಿಮಾನ ಹಾರಿದ್ದರೆ ನಮ್ಮ ಕಥೆ ಏನಾಗುತ್ತಿತ್ತು?’ದುರಂತ ಸ್ಥಳಕ್ಕೆ ಓಡಿ ಬಂದಿದ್ದ ಸಮೀಪದ ಟೆಕ್‌ಪಾರ್ಕ್ ಉದ್ಯೋಗಿಗಳು ಮೊಬೈಲ್‌ನಲ್ಲಿ ವಿಮಾನದ ಬೆಂಕಿಯನ್ನು ರೆಕಾರ್ಡ್‌ ಮಾಡಿಕೊಳ್ಳುತ್ತಲೇ ಮಾತನಾಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT