ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ಲೇಬಾಯ್’ ವಂಚನೆ ಜಾಲ: ಹೈ ಪ್ರೊಫೈಲ್ ಹುಡುಗಿಯರ ಜೊತೆ ದೈಹಿಕ ಸಂಪರ್ಕದ ಆಮಿಷ

ಗಂಟೆ ಲೆಕ್ಕದಲ್ಲಿ ಹಣ: ಜಾಹೀರಾತು ನಂಬಿ ಮೋಸ ಹೋಗುತ್ತಿರುವ ಯುವಕರು
Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೈ ಪ್ರೊಫೈಲ್ ಹುಡುಗಿಯರೊಂದಿಗೆ ದೈಹಿಕ ಸಂಪರ್ಕ ಹೊಂದಲು ಪ್ಲೇಬಾಯ್‌ಗಳು ಬೇಕಾಗಿದ್ದಾರೆ. ಗಂಟೆಗೆ ₹ 5 ಸಾವಿರದಿಂದ ₹ 10 ಸಾವಿರ ನೀಡಲಾಗುವುದು. ನಿಮ್ಮ ವಾಸಸ್ಥಳದ ಸುತ್ತಮುತ್ತಲಿನ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಠಡಿ ಕಾಯ್ದಿರಿಸಿ ಸಕಲ ವ್ಯವಸ್ಥೆ ಮಾಡಲಾಗುವುದು’....

ಇಂಥ ಜಾಹೀರಾತು, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಜಾಹೀರಾತು ನಂಬಿ ಪ್ಲೇಬಾಯ್ (ಪುರುಷ ವೇಶ್ಯಾವಾಟಿಕೆ) ಆಗಲು ಮುಂದಾಗುತ್ತಿರುವ ಯುವಕರು, ನೋಂದಣಿ ಹಾಗೂ ಭೇಟಿ ಶುಲ್ಕದ ಹೆಸರಿನಲ್ಲಿ ಲಕ್ಷ ಲಕ್ಷ ನೀಡಿ ವಂಚನೆಗೀಡಾಗುತ್ತಿದ್ದಾರೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ತುಮಕೂರು ಸೇರಿದಂತೆ ಹಲವು ನಗರಗಳ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ಲೇಬಾಯ್ ವಂಚನೆಗೆ ಸಂಬಂಧಪಟ್ಟಂತೆ ದೂರುಗಳು ದಾಖಲಾಗುತ್ತಿವೆ. ₹ 10 ಸಾವಿರದಿಂದ ₹ 5 ಲಕ್ಷದವರೆಗೂ ಯುವಕರು ಹಣ ಕಳೆದುಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಅವಿವಾಹಿತ ಹಾಗೂ ವಿವಾಹಿತರೂ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಹೊಂದಿರುವ ಯುವಕರನ್ನು ಗುರಿಯಾಗಿಸಿಕೊಂಡು ಪ್ಲೇಬಾಯ್ ಅಸ್ತ್ರ ಬಳಸುತ್ತಿರುವ ಸೈಬರ್ ವಂಚಕರು, ಹಣ ದೋಚುತ್ತಿದ್ದಾರೆ. ಈ ಜಾಲಕ್ಕೆ ಸಿಲುಕಿ ಹಲವು ಯುವಕರು ಹಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಸೈಬರ್ ಕ್ರೈಂ ಠಾಣೆಯೊಂದರ ಇನ್‌ಸ್ಪೆಕ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಕಲಿ ಖಾತೆ ಹಾಗೂ ಯಾರದ್ದೊ ದಾಖಲೆ ಬಳಸಿ ಖರೀದಿಸುವ ಸಿಮ್‌ ಕಾರ್ಡ್‌ಗಳನ್ನು ಸೈಬರ್ ವಂಚಕರು ಬಳಸುತ್ತಿದ್ದಾರೆ. ದೂರುಗಳು ದಾಖಲಾದರೂ ಆರೋಪಿಗಳ ಸುಳಿವು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಒಬ್ಬ ಯುವಕನನ್ನು ವಂಚನೆ ಮಾಡಿದ ನಂತರ ಸಿಮ್‌ಕಾರ್ಡ್‌ ಎಸೆಯುತ್ತಿದ್ದಾರೆ. ಆರೋಪಿಗಳು ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ’ ಎಂದು ಹೇಳಿದರು.

₹ 1.74 ಲಕ್ಷ ನೀಡಿ ಹೋಟೆಲ್‌ಗೂ ಹೋಗಿದ್ದ: ‘ಬೆಂಗಳೂರಿನ ಕೋಣನಕುಂಟೆಯ 35 ವರ್ಷ ವಯಸ್ಸಿನ ನಿವಾಸಿಯೊಬ್ಬರು ಪ್ಲೇಬಾಯ್ ವಂಚನೆ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಅವರ ವಾಟ್ಸ್‌ಆ್ಯಪ್‌ಗೆ ಅ. 17ರಂದು ರುಹಾನಿ ಶರ್ಮಾ ಹೆಸರಿನಲ್ಲಿ ಸಂದೇಶ ಬಂದಿತ್ತು. ‘ನೀವು ಹಣ ಗಳಿಸಲು ಬಯಸುತ್ತಿದ್ದೀರಾ? ಹಾಗಾದರೆ, ನಮ್ಮ ಬಳಿ ಹೈ ಪ್ರೊಫೈಲ್ ಹುಡುಗಿಯರು ಇದ್ದಾರೆ. ಅವರ ಜೊತೆ ದೈಹಿಕ ಸಂಪರ್ಕ ಹೊಂದಿದರೆ, ಗಂಟೆಗೆ ₹ 5 ಸಾವಿರದಿಂದ ₹ 10 ಸಾವಿರ ನೀಡುತ್ತೇವೆ’ ಎಂಬುದಾಗಿ ಸಂದೇಶದಲ್ಲಿ ಬರೆಯಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ದೂರುದಾರ, ಪ್ಲೇಬಾಯ್ ಆಗಲು ಮುಂದಾಗಿದ್ದರು. ಸಂದೇಶದಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದರು. ನೋಂದಣಿ ಶುಲ್ಕದ ಹೆಸರಿನಲ್ಲಿ ಆರೋಪಿಗಳು, ಆರಂಭದಲ್ಲಿ ₹ 1 ಸಾವಿರ ಪಡೆದಿದ್ದರು. ಹುಡುಗಿಯರ ಕೆಲ ಫೋಟೊ ಕಳುಹಿಸಿದ್ದ ಆರೋಪಿಗಳು, ಬೆಂಗಳೂರಿನ ಹೋಟೆಲೊಂದಕ್ಕೆ ಹೋಗುವಂತೆ ದೂರುದಾರರಿಗೆ ಹೇಳಿದ್ದರು. ಇದಕ್ಕೂ ಹಂತ ಹಂತವಾಗಿ ₹ 1.73 ಲಕ್ಷ ಪಡೆದಿದ್ದರು. ದೂರುದಾರ ಹೋಟೆಲ್‌ಗೆ ಹೋದಾಗ, ಯಾರೊಬ್ಬರೂ ಇರಲಿಲ್ಲ. ಆರೋಪಿಗಳ ಮೊಬೈಲ್ ನಂಬರ್ ಸಹ ಸ್ವಿಚ್ ಆಫ್ ಆಗಿತ್ತು. ಇದೇ ರೀತಿಯಲ್ಲಿ ಆರೋಪಿಗಳು, ತಿಂಗಳಿನಲ್ಲಿ 20ಕ್ಕೂ ಹೆಚ್ಚು ಯುವಕರನ್ನು ವಂಚಿಸುತ್ತಿದ್ದಾರೆ. ಕೆಲವರು ದೂರು ನೀಡುತ್ತಿದ್ದು, ಬಹುತೇಕರು ದೂರು ಕೊಡುತ್ತಿಲ್ಲ’ ಎಂದು ಹೇಳಿದರು.

ಪ್ರಚೋದನೆ: ‘ಹಲವು ಯುವಕರು, ನೀಲಿ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ನೀಲಿಚಿತ್ರಗಳ ಜಾಲತಾಣಗಳಲ್ಲಿಯೂ ಪ್ಲೇಬಾಯ್ ಜಾಹೀರಾತುಗಳು ಬರುತ್ತಿವೆ. ಪ್ರಚೋದನಗೆ ಒಳಗಾಗುವ ಯುವಕರು, ಜಾಹೀರಾತು ನಂಬಿ ಕರೆ ಮಾಡಿ ಹಣ ಕಳೆದುಕೊಳ್ಳುತ್ತಿದ್ದಾರೆ. ಯುವಕರು ಹೆಚ್ಚು ಜಾಗೃತಿಯಿಂದ ಇರಬೇಕಿದೆ’ ಎಂದು ತಿಳಿಸಿದರು.

‘ಪ್ಲೇಬಾಯ್‌ಗೂ ಸಂಘ; ಸದಸ್ಯತ್ವ ಹೆಸರಿನಲ್ಲಿ ವಸೂಲಿ’

‘ಡೇಟಿಂಗ್ ಆ್ಯಪ್, ಜಾಲತಾಣ, ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಆನ್‌ಲೈನ್ ವೇದಿಕೆಗಳಲ್ಲಿ ಆರೋಪಿಗಳು ಜಾಹೀರಾತು ನೀಡುತ್ತಿದ್ದಾರೆ. ಅದನ್ನು ನಂಬಿ ಯಾರಾದರೂ ಸಂಪರ್ಕಿಸಿದರೆ, ‘ಫ್ಯಾಬ್ಪಾಲ್ ಇಂಡಿಯಾ ಆನ್‌ಲೈನ್ ಡೇಟಿಂಗ್’ ಸಂಸ್ಥೆ ಹೆಸರಿನಲ್ಲಿ ಕರಪತ್ರಗಳು ಹಾಗೂ ಇತರೆ ದಾಖಲೆಗಳನ್ನು ಕಳುಹಿಸುತ್ತಿದ್ದಾರೆ’ ಎಂದು ಪೊಲೀಸ್
ಅಧಿಕಾರಿಯೊಬ್ಬರು ವಿವರಿಸಿದರು.

‘ಪ್ಲೇಬಾಯ್‌ ನೋಂದಣಿಗೂ ಸಂಘವಿರುವುದಾಗಿ ಹೇಳುವ ಆರೋಪಿಗಳು, ಅದರ ಸದಸ್ಯತ್ವದ ಹೆಸರಿನಲ್ಲಿ ಮೊದಲಿಗೆ ಹಣ ಪಡೆಯುತ್ತಾರೆ. ಸ್ಥಳೀಯ ಹಾಗೂ ವಿದೇಶಿ ಯುವತಿಯರ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಆರೋಪಿಗಳು ಡೌನ್‌ಲೋಡ್ ಮಾಡಿಟ್ಟು ಕೊಂಡಿರುತ್ತಾರೆ. ಅದೇ ಫೋಟೊಗಳನ್ನು ಯುವಕರಿಗೆ ಕಳುಹಿಸಿ ಮತ್ತಷ್ಟು ಹಣ ಪಡೆದು ನಾಪತ್ತೆಯಾಗುತ್ತಿದ್ದಾರೆ. ಯುವತಿಯರ ಫೋಟೊಗಳೂ ದುರ್ಬಳಕೆ ಆಗುತ್ತಿವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT