ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಬಂದ ಹಾದಿಗಷ್ಟೇ ಹೊಳಪೇಕೆ?

ಡಾಂಬರಿನಿಂದ ಹೊಳೆಯುತ್ತಿರುವ ಕೊಮ್ಮಘಟ್ಟ ಸುತ್ತಮುತ್ತಲ ರಸ್ತೆಗಳು
Last Updated 20 ಜೂನ್ 2022, 20:04 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಬೆಂಗಳೂರಿನ ಹಾದಿಗಳೆಲ್ಲವೂ ಫಳ ಫಳನೆ ಹೊಳೆ ಯುತ್ತಿವೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಬಣ್ಣ ಬಳಿದು ಸಿಂಗರಿಸುವ ಕಾರ್ಯವನ್ನು ವೇಗವಾಗಿ ಮಾಡಲು ಸಾಧ್ಯವಿದೆ ಎಂಬುದನ್ನು ಸರ್ಕಾರ ಅದರಲ್ಲೂ ಬಿಡಿಎ ಸಾಬೀತುಪಡಿಸಿದೆ. ಈ ರೀತಿಯ ಅಭಿವೃದ್ಧಿ ಪ್ರಧಾನಿ ಮೆಚ್ಚಿಸಲಷ್ಟೇ ಸೀಮಿತ ಆಗದೆ, ಇದನ್ನೇ ಮಾದರಿಯಾಗಿ ಪರಿಗಣಿಸುವುದು ಸೂಕ್ತ ಎಂಬ ಅಭಿಪ್ರಾಯ ಬೆಂಗಳೂರಿನ ನಾಗರಿಕರಲ್ಲಿ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಹಾದು ಹೋದ ರಸ್ತೆಗಳನ್ನು ಕಂಡು ಸ್ಥಳೀಯರೇ ಬೆಕ್ಕಸ ಬೆರಗಾಗಿದ್ದಾರೆ. ಬೆಂಗಳೂರಿನ ಹಲವು ಬಡಾವಣೆಗಳ ಕಸ ಸುರಿಯುವ ತಾಣವಾಗಿದ್ದ ರಸ್ತೆಯ ವಾತಾವರಣ ದಿಢೀರ್ ಬದಲಾಗಿದೆ.

ಜಲ್ಲಿ, ಮರಳು, ಡಾಂಬರ್, ಸಿಮೆಂಟ್‌ ಹೊತ್ತ ಟಿಪ್ಪರ್‌ಗಳು, ಅವುಗಳನ್ನು ಹರಡಿ ಅರೆಯಲು ಜೆಸಿಬಿ ಮತ್ತು ರೋಲರ್‌ಗಳು ಬಂದು ಏಕಾಏಕಿ ಕಾಮಗಾರಿ ಆರಂಭಿಸಿದವು. ಕಾರ್ಯಕ್ರಮ ನಡೆಯುವ ಜಾಗಕ್ಕೆ ತೆರಳುವ ರಸ್ತೆ, ಅಲ್ಲಿಂದ ಹೆಲಿಪ್ಯಾಡ್‌ಗೆ ಪ್ರಧಾನಿ
ಸಾಗುವ ರಸ್ತೆಗಳೆಲ್ಲವೂ ಡಾಂಬರ್ ಕಂಡು, ಬಣ್ಣ ಬಳಿಸಿಕೊಂಡವು. ‌ಅಕ್ಕ– ಪಕ್ಕದಲ್ಲಿ ಪೊದೆಗಳು ಮಾಯವಾಗಿ ಪಾದಚಾರಿ ಮಾರ್ಗಗಳು ಸುಂದರವಾದವು.

ಕಳೆದ ವಾರ ಈ ರಸ್ತೆಯಲ್ಲಿ ಸಾಗಿದವರು ಅದೇ ರಸ್ತೆಯಲ್ಲಿ ಈಗ ಮತ್ತೆ ಹೋದರೆ ಗುರುತಿಸುವುದೇ ಕಷ್ಟವಾಗುವಷ್ಟರ ಮಟ್ಟಿಗೆ ಅಭಿವೃದ್ಧಿ ಕಂಡಿವೆ. ಈ ರೀತಿ ಅಭಿವೃದ್ಧಿಯ ವೇಗವನ್ನು ಕಂಡು ಬೆರಗಾಗಿರುವ ನಗರದ ಜನ, ‘ನಮ್ಮ ಬಡಾವಣೆ ಕಡೆಗೂ ಪ್ರಧಾನಿ ಬರಬಾರದಿತ್ತೆ’ ಎಂದು ವ್ಯಂಗ್ಯವಾಡುತ್ತಾರೆ.

ರಸ್ತೆ ಅಭಿವೃದ್ಧಿಯನ್ನು ಇಷ್ಟೊಂದು ವೇಗವಾಗಿ ಮಾಡುವ ಸಾಮರ್ಥ್ಯ ಸರ್ಕಾರಕ್ಕೆ ಇದೆ ಎಂಬುದು ಜನರಿಗೆ ಗೊತ್ತಾದಂತೆ ಆಗಿದೆ. ‘ರಸ್ತೆ ಗುಂಡಿಗಳ ನಡುವೆ ನರಳುವ ಜನರ ಕಷ್ಟ ದೂರ ಮಾಡಲು ಇದೇ ರೀತಿಯಲ್ಲಿ ವೇಗವಾಗಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬಾರದೇಕೆ’ ಎಂದು ಪ್ರಶ್ನಿಸುತ್ತಿದ್ದಾರೆ. ‘ಬೆಂಗಳೂರನ್ನು ‘ಬ್ರ್ಯಾಂಡ್‌’ ಆಗಿ ಬದಲಿಸುವ ಶಪಥವನ್ನು ಪ್ರಧಾನಿ ಬಂದು ಹೋದ ದಿನವೇ ಸರ್ಕಾರ ಕೈಗೊಳ್ಳಲಿ. ಕೊಮ್ಮಘಟ್ಟ ಸುತ್ತಮುತ್ತಲ ರಸ್ತೆ ಅಭಿವೃದ್ಧಿ ಇಡೀ ಬೆಂಗಳೂರಿಗೆ ಮಾದರಿಯಾಗಲಿ’ ಎಂದು ಒತ್ತಾಯಿಸಿದ್ದಾರೆ.

‘ಜನರ ಸಮಸ್ಯೆಗಳು ಸರ್ಕಾರಕ್ಕೆ ಕಾಣಿಸುವುದೇ ಇಲ್ಲ’

ದೇಶದ ಪ್ರಧಾನಿ ಬಂದಾಗ ರಸ್ತೆಗಳನ್ನು ಅಭಿವೃದ್ಧಿಪಡಿಸಿರುವುದು ಸಂತಸದ ವಿಷಯ. ಅದೇ ರೀತಿಯ ಬೇರೆ ರಸ್ತೆಗಳಿಗೂ ಆದ್ಯತೆ ಸಿಗಬೇಕಲ್ಲವೇ? ಮಳೆ ಬಂದಾಗಲೆಲ್ಲಾ ಪ್ರವಾಹ ನೀರು ಸಾವಿರಾರು ಮನೆಗಳಿಗೆ ನುಗ್ಗುತ್ತಿವೆ. ಪೀಣ್ಯ ಕೈಗಾರಿಕಾ ಪ್ರದೇಶ ಇದೆ. ಹತ್ತಾರು ಅಪಾರ್ಟ್‌ಮೆಂಟ್‌ಗಳು, ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು ತಲೆ ಎತ್ತುತ್ತಿವೆ. ಅತ್ತ ಯಾರೂ ನೋಡುವುದೇ ಇಲ್ಲ. ರಸ್ತೆ ಗುಂಡಿ ಸಂಪೂರ್ಣ ಮುಚ್ಚಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಗುಂಡಿಗಳಲ್ಲಿ ಜನ ಪರದಾಡುತ್ತಿದ್ದಾರೆ. ಬಂಡಿ ಜಾಡಿನ ರೀತಿಯ ರಸ್ತೆಗಳು ನಮ್ಮ ಕ್ಷೇತ್ರದಲ್ಲಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ನಾಲ್ಕು ವರ್ಷಗಳಿಂದ ಹೇಳುತ್ತಿದ್ದೇನೆ. ವಿಧಾನಸಭೆಯಲ್ಲೂ ಪ್ರಸ್ತಾಪಿಸಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇನೆ. ಪೀಣ್ಯ ಬಳಿಯ ಶಿವಕುಮಾರಸ್ವಾಮಿ ಮೇಲ್ಸೇತುವೆ 6 ತಿಂಗಳಿಂದ ದುರಸ್ತಿಯಾಗಿಲ್ಲ. ಕೊಮ್ಮಘಟ್ಟ ಸುತ್ತಮುತ್ತ ಎರಡೇ ದಿನಗಳಲ್ಲಿ ರಸ್ತೆ ದುರಸ್ತಿಯಾಗಿವೆ. ಅದಕ್ಕೆ ಬೇಸರವಿಲ್ಲ, ಬೇರೆ ಪ್ರದೇಶದ ಸಮಸ್ಯೆಗಳ ಪರಿಹಾರವೂ ಇಷ್ಟೇ ವೇಗದಲ್ಲಿ ಆಗಬಾರದೇಕೆ?

- ಆರ್.ಮಂಜುನಾಥ್,ದಾಸರಹಳ್ಳಿ ಶಾಸಕ (ಜೆಡಿಎಸ್‌)

---

‘ನಿಜವಾದ ಅಭಿವೃದ್ಧಿ ಬೇಕಿಲ್ಲ’

ಪ್ರಧಾನಿ ಅವರು ಬಂದು ಹೋದ ರಸ್ತೆಗಳು ಅಭಿವೃದ್ಧಿ ಕಂಡಿವೆ. ಬೇರೆ ರಸ್ತೆಗಳ ಅಭಿವೃದ್ಧಿ ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ. ಏಕೆಂದರೆ ಅಭಿವೃದ್ಧಿ ಕಾಮಗಾರಿ ನಡೆಸಿ ಜನರಿಂದ ಮತ ಪಡೆಯಬೇಕು ಎಂಬ ಮನಃಸ್ಥಿತಿ ಬಿಜೆಪಿಗೆ ಇಲ್ಲ. ಮತ ಪಡೆಯಲು ಬೇರೆ ದಾರಿಗಳನ್ನು ಹುಡುಕಿಕೊಳ್ಳುತ್ತಿದೆ. ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆಣಕಿ ಮತ ಹಾಕಿಸಿಕೊಳ್ಳಬೇಕು ಎಂದುಕೊಂಡಿದ್ದಾರೆ. ನಿಜವಾದ ಅಭಿವೃದ್ಧಿ ಬೇಕು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರಿನ ಅಭಿವೃದ್ಧಿಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಮಾಡಿ ತೋರಿಸಿದೆ. ಹಲವು ಗ್ರೇಡ್‌ ಸಪರೇಟರ್‌ಗಳನ್ನು ನಿರ್ಮಿಸಲಾಯಿತು. ಅದಕ್ಕೆ ಬೇಕಿರುವ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಹಣಕಾಸಿನ ತೊಂದರೆ ಆಗದಂತೆ ಪ್ರತ್ಯೇಕ ಖಾತೆಗಳನ್ನು ತೆರೆದು ಅಭಿವೃದ್ಧಿಪಡಿಸಿದೆವು. ಈ ರೀತಿಯ ಅಭಿವೃದ್ಧಿಪರ ಆಶಯ ಬಿಜೆಪಿಗೆ ಇಲ್ಲ. ಪ್ರಧಾನಿ ಅವರು ಬಂದು ಹೋಗಿರುವ ದಾರಿಗಷ್ಟೇ ಅವರ ಅಭಿವೃದ್ಧಿ ಸೀಮಿತ.

ರಾಮಲಿಂಗಾರೆಡ್ಡಿ,ಬಿಟಿಎಂ ಲೇಔಟ್ ಶಾಸಕ(ಕಾಂಗ್ರೆಸ್)

---

‘ಹಲವು ಬಾರಿ ಮನವಿ ಸಲ್ಲಿಸಿದ್ದೆವು’

ಕೊಮ್ಮಘಟ್ಟ ರಸ್ತೆ ಅಭಿವೃದ್ಧಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೆವು. ಬಿಡಿಎ ಆಡಳಿತ ಮಂಡಳಿ ತಲೆ ಕೆಡಿಸಿಕೊಂಡೇ ಇರಲಿಲ್ಲ.ಕಾವೇರಿ 5ನೇ ಹಂತದ ಯೋಜನೆಗಾಗಿ ಅಗೆದು, ರಸ್ತೆಗಳಿಗೆ ಪೈಪ್‌ಲೈನ್ ಅಳವಡಿಸಿದ ಬಳಿಕ ಅಭಿವೃದ್ಧಿಪಡಿಸಿಯೇ ಇರಲಿಲ್ಲ. ಪಕ್ಕದಲ್ಲೇ ಇರುವ ವಿಶ್ವೇಶ್ವರಯ್ಯ ಲೇಔಟ್‌ನ 4ನೇ ಹಂತದಲ್ಲಿ ರಸ್ತೆ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆ ರಸ್ತೆ ಈಗಲೂ ಅಭಿವೃದ್ಧಿ ಕಂಡಿಲ್ಲ. ನರೇಂದ್ರ ಮೋದಿಯವರು ಬಂದು ಹೋದ ಕಾರಣಕ್ಕೆ ಎರಡೇ ದಿನಗಳಲ್ಲಿ ರಸ್ತೆಯ ಸ್ಥಿತಿ ಬದಲಾಗಿದೆ. ಇದೇ ರೀತಿ ಸುತ್ತಮುತ್ತಲ ರಸ್ತೆಗಳೂ ಅಭಿವೃದ್ಧಿಯಾದರೆ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ದೊರೆತಂತೆ ಆಗಲಿದೆ.

ಸೂರ್ಯಕಿರಣ್,ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ವಕ್ತಾರ

---

ನಿಮ್ಮ ಪ್ರದೇಶದ ಸಮಸ್ಯೆ ತಿಳಿಸಿ

40 ವರ್ಷಗಳಿಂದ ಆಗದ ಅಭಿವೃದ್ಧಿಯನ್ನು 40 ತಿಂಗಳಲ್ಲಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ನಿಮ್ಮ ಪ್ರದೇಶದ ಏನೆಲ್ಲಾ ಅಭಿವೃದ್ಧಿ ಬಾಕಿ ಇವೆ, ಜ್ವಲಂತ ಸಮಸ್ಯೆಗಳು ಏನೇನಿವೆ ಎಂಬುದನ್ನು ಸಾರ್ವಜನಿಕರು ‘ಪ್ರಜಾವಾಣಿ’ ಜತೆ ಹಂಚಿಕೊಳ್ಳಿ. 9606038256–ಈ ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಸಂಕ್ಷಿಪ್ತವಾಗಿ ವಿವರ ಕಳುಹಿಸಿ. ಸಮಸ್ಯೆ ಬರೆಯುವುದರ ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್‌ ಅಳತೆಯ ಫೋಟೊ ಕೂಡ ’ಅಟ್ಯಾಚ್‌‘ ಮಾಡಿ ಕಳುಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT