ಬುಧವಾರ, ಆಗಸ್ಟ್ 4, 2021
23 °C

ಶವ ಸಂಸ್ಕಾರದ ಬಳಿಕ ರಸ್ತೆ ಬದಿಗೆ ಎಸೆದ ಪಿಪಿಇ ಕಿಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸೋಂಕಿ ತರ ಚಿಕಿತ್ಸೆಗೆ ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳು (ಪಿಪಿಇ) ನಗರದ ಮೂರು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಬುಧವಾರ ಪತ್ತೆಯಾಗಿವೆ.

ಜೆ.ಸಿ.ನಗರ, ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಬಳಿ ಹಾಗೂ ಕೋರಮಂಗಲದಲ್ಲಿ ಪಿಪಿಇ ಕಿಟ್‌ ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದಿವೆ. ಜೆ.ಸಿ.ನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ನಡೆಸಲಾಗಿತ್ತು. ಆ ವ್ಯಕ್ತಿಗೆ ಹಾಕಿದ್ದ ಪಿಪಿಇ ಕಿಟ್‌ಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ ಹಾಗೂ ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ನೆರವಾಗುವ ಸಿಬ್ಬಂದಿ ಬಳಸುವ ಕಿಟ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಬಳಕೆಯಾದ ಪಿಪಿಇ ಕಿಟ್‌ ಗಳನ್ನು ವೈದ್ಯಕೀಯ ತ್ಯಾಜ್ಯ ವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವಂತೆಯೇ ನಾಶಪಡಿಸಬೇಕು. ಜೆ.ಸಿ.ನಗರ, ಕೋರಮಂಗಲ ಹಾಗೂ ಬೌರಿಂಗ್‌ ಆಸ್ಪತ್ರೆ ಬಳಿ ಸಾರ್ವಜನಿಕ ಸ್ಥಳಗಳಲ್ಲಿ ಪಿಪಿಇ ಕಿಟ್‌ಗಳು ಕಂಡುಬಂದ ಬಗ್ಗೆ ನನಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಅನಿಲ್‌ ಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಅಧಿಕಾರಿಗಳೇ ಹೊಣೆ: ‘ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸುವ ಪಿಪಿಇ ಕಿಟ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಕುತ್ತಿರುವುದು ಕಂಡುಬಂದರೆ, ಅಂಥವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಯಾರೋ ಕೆಲವರ ನಿರ್ಲಕ್ಷ್ಯ ಜನಸಾಮಾನ್ಯರ ಪ್ರಾಣಕ್ಕೆ ಕಂಟಕವಾಗಬಾರದು. ಸಂಬಂಧಿ ಸಿದ ಅಧಿಕಾರಿಗಳೇ ಇದಕ್ಕೆ ಹೊಣೆ ಗಾರರು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು