ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಖಾಸಗಿ ಸಾರಿಗೆ ಬಂದ್‌: 4000 ಹೆಚ್ಚುವರಿ ಟ್ರಿಪ್ ನಡೆಸಲು ಬಿಎಂಟಿಸಿ ನಿರ್ಧಾರ

ಬಲವಂತದ ಬಂದ್‌ ಮಾಡಿದರೆ ಕ್ರಮ–ಪೊಲೀಸ್‌
Published 10 ಸೆಪ್ಟೆಂಬರ್ 2023, 16:28 IST
Last Updated 10 ಸೆಪ್ಟೆಂಬರ್ 2023, 16:28 IST
ಅಕ್ಷರ ಗಾತ್ರ

ಬೆಂಗಳೂರು: ‘ಶಕ್ತಿ’ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಅಥವಾ ರಸ್ತೆ ತೆರಿಗೆ ರದ್ದು ಮಾಡಬೇಕು. ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ನಿಷೇಧಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ  ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್‌ ನಡೆಸಲಿದೆ.

ಭಾನುವಾರ ರಾತ್ರಿ 12 ರಿಂದ ಸೋಮವಾರ ರಾತ್ರಿ 12 ರವರೆಗೆ ನಡೆಯಲಿರುವ ಈ ಖಾಸಗಿ ಸಾರಿಗೆ ಬಂದ್‌ನಿಂದಾಗಿ ಸಾರ್ವಜನಿಕರಿಗೆ ನಗರದಲ್ಲಿ ಓಡಾಟ ನಡೆಸಲು ತೊಂದರೆ ಆಗಲಿದೆ.

ರ‍್ಯಾಪಿಡೊ, ಓಲಾ, ಉಬರ್‌, ಇನ್ನಿತರ ಆನ್‌ಲೈನ್‌ ಕಂಪನಿಗಳಿಗೆ ಇ–ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು. ಬಿಳಿ ಫಲಕ ಹೊಂದಿರುವ ವಾಹನಗಳಲ್ಲಿ ಬಾಡಿಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಓಲಾ, ಉಬರ್‌, ರೆಡ್‌ಬಸ್‌ ನಂತಹ ಆನ್‌ಲೈನ್‌ ಕಂಪನಿಗಳು ನಿಗದಿಯಾಗಿರುವ ಶೇ 5ಕ್ಕಿಂತ ಹೆಚ್ಚು ಕಮಿಷನ್‌ ಪಡೆಯದಂತೆ ನಿರ್ಬಂಧಿಸಬೇಕು. ವಿಮಾನ ನಿಲ್ದಾಣಕ್ಕೆ ಏಕರೂಪ ದರ ನಿರ್ಧರಿಸಬೇಕು. ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಕೈಬಿಡಬೇಕು. ಚಾಲಕರಿಗೆ ₹ 10 ಸಾವಿರ ಮಾಸಿಕ ಪರಿಹಾರ ಧನಸಹಾಯ ನೀಡಬೇಕು. ಸರ್ಕಾರಿ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರನ್ನು ಒಯ್ಯಬಾರದು ಎಂಬುದು ಸೇರಿ ಒಟ್ಟು 30 ಬೇಡಿಕೆಗಳನ್ನು ಒಕ್ಕೂಟ ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿದೆ.

ಬೆಂಗಳೂರಿನ ಆಟೊ, ಟ್ಯಾಕ್ಸಿ, ಏರ್‌ಪೋರ್ಟ್‌ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌, ಕಾರ್ಪೊರೇಟ್‌ ವಾಹನಗಳು, ಸ್ಕೂಲ್‌ ಬಸ್‌, ಕೈಗಾರಿಕಾ ಬಸ್‌, ಸ್ಟೇಜ್‌ ಕ್ಯಾರೇಜ್‌ ಬಸ್‌ ಚಾಲಕರ ಸಂಘಗಳು ಒಟ್ಟು 32 ಸಂಘಟನೆಗಳು ಈ ಬಂದ್‌ ನಡೆಸಲಿವೆ ಎಂದು ಒಕ್ಕೂಟದ ಅಧ್ಯಕ್ಷ ಎಸ್‌. ನಟರಾಜ್‌ ಶರ್ಮ ತಿಳಿಸಿದ್ದಾರೆ.

ಬಿಎಂಟಿಸಿ ವ್ಯವಸ್ಥೆ: ಬಂದ್‌ ಸಂದರ್ಭದಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳು ಹೆಚ್ಚುವರಿಯಾಗಿ 4,000 ಟ್ರಿಪ್‌ ಸಂಚರಿಸಲಿವೆ.

ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ–ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ, ಒಳ ವರ್ತುಲ ರಸ್ತೆಗಳಲ್ಲಿ, ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ ಸಂಚಾರ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ಗಳು 100 ಟ್ರಿಪ್‌ ಹೆಚ್ಚುವರಿಯಾಗಿ ಸಂಚರಿಸಲಿವೆ. ಅಗತ್ಯ ಬಿದ್ದರೆ ಮತ್ತಷ್ಟು ಟ್ರಿಪ್‌ ಹೆಚ್ಚಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯ ಬಿದ್ದರೆ ಮೆಟ್ರೊ ಹೆಚ್ಚಳ: ‘ಪ್ರಯಾಣಿಕರ ದಟ್ಟಣೆ ಅವಧಿಯಲ್ಲಿ ಮೆಟ್ರೊ ರೈಲುಗಳ ಸಂಚಾರ ಹೆಚ್ಚಳ ಮಾಡುವುದು ಈಗಲೂ ಇದೆ. ಬಂದ್‌ ದಿನ ಜನದಟ್ಟಣೆ ಹೆಚ್ಚಿದ್ದರೆ ಆ ಸಂದರ್ಭದಲ್ಲಿ ಟ್ರಿಪ್‌ ಹೆಚ್ಚಿಸಲಾಗುವುದು’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗಳಿಗೆ ರಜೆ ಇಲ್ಲ ಶಾಲಾ ವಾಹನಗಳ ಮಾಲೀಕರ ಸಂಘವೂ ಬೆಂಬಲ ನೀಡಿರುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗಲಿದೆ. ಆದರೆ ಸರ್ಕಾರಿ ಶಾಲೆಗಳಿಗೆ ರಜೆ ನೀಡಿಲ್ಲ. ಬೆರಳೆಣಿಕೆಯ ಖಾಸಗಿ ಶಾಲೆಗಳನ್ನು ಹೊರತುಪಡಿಸಿ ಉಳಿದ ಖಾಸಗಿ ಶಾಲೆಗಳಿಗೂ ರಜೆ ಘೋಷಣೆಯಾಗಿಲ್ಲ. ‘ಬೆಂಗಳೂರಿನಲ್ಲಿ 6000 ಶಾಲೆಗಳಿವೆ. ಅದರಲ್ಲಿ ಬಹುತೇಕ ಶಾಲೆಗಳು ಖಾಸಗಿ ವಲಯದ ವಾಹನಗಳನ್ನು ಅವಲಂಬಿಸಿಲ್ಲ. ದೂರದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ಕೆಲವು ಶಾಲೆಗಳ ಆಡಳಿತ ಮಂಡಳಿಯವರು ರಜೆ ನೀಡಿರಬಹುದು. ನಮ್ಮ ಒಕ್ಕೂಟ ಅಂಥ ತೀರ್ಮಾನ ಕೈಗೊಂಡಿಲ್ಲ. ಪೋಷಕರೇ ಮಕ್ಕಳನ್ನು ಶಾಲೆಗೆ ಕರೆತರಬೇಕಾಗುತ್ತದೆ. ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲ ಇದೆ’ ಎಂದು ಕರ್ನಾಟಕ ಅಸೊಸಿಯೇಟೆಡ್‌ ಮ್ಯಾನೇಜ್‌ಮೆಂಟ್‌ ಆಫ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್ಸ್‌ (ಕಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ ತಿಳಿಸಿದ್ದಾರೆ.

‘ಬಲವಂತ ಮಾಡಿದರೆ ಕ್ರಮ’ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಬಲವಂತವಾಗಿ ಬಂದ್‌ಗೆ ಬೆಂಬಲ ನೀಡುವಂತೆ ಒತ್ತಾಯಿಸುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

‘ನಗರದೆಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿ ಠಾಣೆಯ ವ್ಯಾಪ್ತಿಯಲ್ಲೂ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಜೀವಕ್ಕೆ ಹಾಗೂ ಆಸ್ತಿಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT