ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಕ್ತರೇ, ನೀವೂ ಇಲ್ಲಿ ಟ್ರೀಟ್‌ಮೆಂಟ್‌ ತಗೋತೀರಾ?

Last Updated 27 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಗುಡ್ಡದಹಳ್ಳಿಯ60ರ ಇಳಿವಯಸ್ಸಿನ ಸುಬ್ಬಮ್ಮ ಅವರಿಗೆ ಅಧಿಕ ರಕ್ತದ ಒತ್ತಡ, ಸಕ್ಕರೆ ಕಾಯಿಲೆ. ಮಾತ್ರೆಗಳನ್ನು ಪಡೆಯಲು ದಟ್ಟಣೆಯಿಂದ ಕೂಡಿದ ಮೈಸೂರು ರಸ್ತೆಯನ್ನು ಕಷ್ಟಪಟ್ಟು ದಾಟಿಕೊಂಡು ಆಜಾದ್‌ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 9 ಗಂಟೆಗೆ ಬಂದರು. ವೈದ್ಯಕೀಯ ಸಿಬ್ಬಂದಿಗಾಗಿ ಕಾದರು...ಕಾದರು...ಕಾದರು... ‘ಮಾತ್ರೆಗಳು ಖಾಲಿಯಾಗಿವೆ’ ಎಂಬ ಉತ್ತರವನ್ನು ಸಿಬ್ಬಂದಿ ಮಟ–ಮಟ ಮಧ್ಯಾಹ್ನದ 12.30ಕ್ಕೆ ಉಸುರಿದರು.

ಬಂದ ದಾರಿಗೆ ಸುಂಕವಿಲ್ಲ ಎಂಬ ಭಾವದಿಂದ ₹ 400 ಕೊಟ್ಟು ಮಾತ್ರೆಗಳನ್ನು ಖರೀದಿಸಲು ಔಷಧಿ ಅಂಗಡಿಯತ್ತ (ಮೆಡಿಕಲ್) ಭಾರವಾದ ಹೆಜ್ಜೆಗಳನ್ನು ಇಡುತ್ತ ಸುಬ್ಬಮ್ಮ ನಡೆದುಹೋದರು.

ಸಬೀನಾ ಬಾನು ಮೊದಲ ಹೆರಿಗೆಗೂ ಮುನ್ನ ‘ತಾಯಿ ಕಾರ್ಡ್‌’ ಪಡೆಯಲೆಂದು ಅಮ್ಮನೊಂದಿಗೆ ಕಾಡಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಗಡಿಯಾರದ ಮುಳ್ಳು ಮಧ್ಯಾಹ್ನದ ಮೂರು ಗಂಟೆ ದಾಟುತ್ತಿತ್ತು. ವೈದ್ಯರಾಗಲೇ ಕೇಂದ್ರದಿಂದ ಹೊರಟು ಹೋಗಿದ್ದರು. ಸಿಬ್ಬಂದಿ ಹೊರಡಲು ಸಿದ್ಧರಾಗುತ್ತಿದ್ದರು.

‘ಇಷ್ಟುಹೊತ್ತಿಗೆ ಬಂದರೆ, ಕಾರ್ಡ್‌ ಕೊಡಲು ಆಗಲ್ಲಮ್ಮ. ಆ ಕಾರ್ಡ್‌ ಮಾಡಲು, ಕಂಪ್ಯೂಟರ್‌ನಲ್ಲಿ ನಿನ್ನ ಎಲ್ಲಾ ಮಾಹಿತಿ ಹಾಕಬೇಕು. ಅದಕ್ಕೆ ಅರ್ಧಗಂಟೆ ಟೈಮು ಬೇಕು. ನಾಳೆ ಬಾರಮ್ಮ’ ಎಂದು ಸಿಬ್ಬಂದಿ ಸಬೂಬು ಹೇಳಿ ಸಾಗಹಾಕಿದರು.

ಉದರದೊಳಗಿನ ಪುಟ್ಟಜೀವದ ಭಾರಹೊತ್ತು, ಹೆಜ್ಜೆಗಳನ್ನು ಕಿತ್ತಿಡುತ್ತಸಬೀನಾ ರಸ್ತೆಗೆ ಬಂದರು. ‘ಖರ್ಚಿಟ್ಟುಕೊಂಡು ಮತ್ತೊಮ್ಮೆ ಬರುವಂತಾಯಿತಲ್ಲ’ ಎಂದು ಗೊಣಗುತ್ತ ಆಟೊ ಹತ್ತಿ ಹೊರಟರು.

ನಾಯಿಕಡಿತಕ್ಕೆ ಚುಚ್ಚುಮದ್ದು ಹಾಕಿಸಲು ಭುವನೇಶ್ವರಿ ನಗರದ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 9.45ಕ್ಕೆ ವಸಂತಪ್ಪ ಬಂದಿದ್ದರು. ವೈದ್ಯಕೀಯ ಸಿಬ್ಬಂದಿ ಕೇಂದ್ರಕ್ಕೆ ಇನ್ನೂ ಕಾಲಿಟ್ಟಿರಲಿಲ್ಲ. ‘ಕೆಲಸಕ್ಕೆ ತಡವಾಗುತ್ತದೆ’ ಎನ್ನುತ್ತ ವಸಂತಪ್ಪ ಹಿಂದಿರುಗಿ ಹೋದರು.

ಆರೋಗ್ಯ ಸೇವೆಗಳಿಗೆಂದು ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಬರುವ ಜನರಿಗೆ ಇಂತಹ ಅನುಭವಗಳು ಈಗ ಸಾಮಾನ್ಯವಾಗಿಬಿಟ್ಟಿವೆ.

ಖಾಸಗಿ ಆಸ್ಪತ್ರೆಗಳಲ್ಲಿನ ದುಬಾರಿ ಶುಲ್ಕಗಳನ್ನು ಭರಿಸಲು ಶಕ್ತರಿಲ್ಲದ ಜನಸಾಮಾನ್ಯರು, ಸಾರ್ವಜನಿಕ ದೊಡ್ಡಾಸ್ಪತ್ರೆಗಳಲ್ಲಿನ ಜನದಟ್ಟಣೆಯಿಂದ ತಪ್ಪಿಸಿಕೊಂಡು ತ್ವರಿತ ಸೇವೆ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರಗಳತ್ತ ಮುಖ ಮಾಡುತ್ತಾರೆ. ಆದರೆ ಈ ಕೇಂದ್ರಗಳಲ್ಲಿ ಪ್ರಾಥಮಿಕ ಆದ್ಯತೆಗಳಾದ ಸಿಬ್ಬಂದಿ, ಸೌಕರ್ಯಗಳ ಕೊರತೆಯಿಂದ ಜನರು ಆರೋಗ್ಯ ಭಾಗ್ಯದಿಂದ ವಂಚಿತರಾಗುತ್ತಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ನೂರಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ಕಾಯಂ ವೈದ್ಯಕೀಯ ಸಿಬ್ಬಂದಿಯಿಲ್ಲ. ಇಳಿವಯಸ್ಸಿನ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ತಂದು ಕೂರಿಸಿ, ನಿವೃತ್ತ ಸರ್ಜನ್‌ಗಳನ್ನು ಕರೆಸಿ, ಆಯುಷ್‌ ವೈದ್ಯರಿಗೊಂದು ಕೆಲಸ ಕೊಟ್ಟು ಆರೋಗ್ಯ ಕೇಂದ್ರಗಳನ್ನು ಮುನ್ನಡೆಸುವ ಜವಾಬ್ದಾರಿ ಹೊರೆಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ವೈದ್ಯರು ಬಂದವರಿಗೆ ಬಣ್ಣ–ಬಣ್ಣದ ಮಾತ್ರೆಗಳನ್ನು ಹಂಚುತ್ತ ತಿಂಗಳ ಸಂಬಳ ಎಣಿಸುತ್ತಿದ್ದಾರೆ. ಕಾಯಿಲೆ ವಾಸಿಯಾಗದೆ ಜನರು ಖಾಸಗಿ ಆಸ್ಪತ್ರೆಗಳನ್ನು ಸೇರುತ್ತಿದ್ದಾರೆ.

ಇನ್ನು ಕೆಲವು ಕಡೆ ಒಬ್ಬ ವೈದ್ಯಾಧಿಕಾರಿಗೆ ಎರಡು ಆರೋಗ್ಯ ಕೇಂದ್ರಗಳನ್ನು ನಿಭಾಯಿಸುವ ಹೊಣೆ ಹೆಗಲ ಮೇಲಿದೆ. ‘ವಾರದಲ್ಲಿ ಮೂರುದಿನ ಒಂದೆಡೆ, ಉಳಿದ ಮೂರು ದಿನ ಮತ್ತೊಂದೆಡೆ ಕಾರ್ಯನಿರ್ವಹಿಸುತ್ತಾ ಸೇವೆ ಮಾಡುತ್ತಿದ್ದೇವೆ’ ಎಂದು ವೈದ್ಯರು ಹೇಳುತ್ತಾರೆ. ‘ಈ ಎರಡೂ ಕೇಂದ್ರಗಳಲ್ಲಿ ಏಕಕಾಲಕ್ಕೆ ವಿಚಾರಿಸಿ, ವೈದ್ಯರು ಎರಡೂ ಕೇಂದ್ರಗಳಿಂದ ನಾಪತ್ತೆಯಾಗುವ ವಿಷಯ ಗೊತ್ತಾಗುತ್ತದೆ’ ಎಂದು ಸ್ಥಳೀಯರು ದೂರುತ್ತಾರೆ.

ಸೇವಾ ಸಮಯಕ್ಕೆ ಅನುಗುಣವಾಗಿ ಕೇಂದ್ರದಲ್ಲಿ ಇರದ ಸಿಬ್ಬಂದಿಯ ಕರ್ತವ್ಯ ಲೋಪ, ಒರಟಾದ ವರ್ತನೆ, ಬೇಕಾದ ಮಾತ್ರೆಗಳು, ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳಿಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯಿಂದಾಗಿ ಜನರು ಸರ್ಕಾರಿ ಆರೋಗ್ಯ ಸೇವೆಯ ‘ಸಹವಾಸವೇ ಬೇಡಪ್ಪ’ ಎಂಬ ಮನಸ್ಥಿತಿಗೆ ಬಂದು ತಲುಪಿದ್ದಾರೆ.

ಎಲ್ಲ ಆರೋಗ್ಯ ಕೇಂದ್ರಗಳ ಕಾರ್ಯಾವಧಿ ಬೆಳಿಗ್ಗೆ 9ರಿಂದ ಸಂಜೆ 4. ಈ ಸಮಯದಲ್ಲಿ ಶ್ರಮಿಕ ವರ್ಗದ ಜನರೆಲ್ಲ ಹೊಟ್ಟೆಹೊರೆಯುವ ದುಡಿಮೆಯಲ್ಲಿ ಇರುತ್ತಾರೆ. ಕೇಂದ್ರಕ್ಕೆ ಬಂದು ಸಣ್ಣಪುಟ್ಟ ಕಾಯಿಲೆ–ಕಸಾಲೆಗಳಿಗೆ ಚಿಕಿತ್ಸೆ ಪಡೆಯಲು ಅವರಿಗೆ ಪುರುಸೊತ್ತು ಇರುವುದಿಲ್ಲ. ದಿನದ ಶ್ರಮದಾನ ಬಳಿಕ ಕೇಂದ್ರಕ್ಕೆ ಬಂದರೆ, ವೈದ್ಯಕೀಯ ಸಿಬ್ಬಂದಿ ಮನೆ ಸೇರಿರುತ್ತಾರೆ.

ಈ ಸಮಯದ ಕಂದಕ ತುಂಬಲೆಂದೇ ‘ಕೇಂದ್ರಗಳಲ್ಲಿ ಸಂಜೆ ಕ್ಲಿನಿಕ್‌ಗಳನ್ನು ರೂಪಿಸಿ ಸಂಜೆ 4ರಿಂದ 7ರವರೆಗೆ ಸೇವೆ ನೀಡಲಾಗುತ್ತಿದೆ. ಕ್ಲಿನಿಕ್‌ಗಳಲ್ಲಿ ಜನರಲ್‌ ಸರ್ಜನ್‌, ಸ್ತ್ರೀರೋಗ, ಮಧುಮೇಹ, ಕಣ್ಣು, ಕಿವಿ, ಮೂಗು, ಗಂಟಲು ತಜ್ಞ ವೈದ್ಯರನ್ನು ನೇಮಿಸಲಾಗಿದೆ’ ಎಂದು ಪಾಲಿಕೆಯ ಆರೋಗ್ಯ ವಿಭಾಗ ಹೇಳುತ್ತದೆ. ಆದರೆ, ಸಂಜೆ ವೈದ್ಯಾಲಯಗಳಲ್ಲಿ ಆಯುರ್ವೇದ ಔಷಧಿ ನೀಡುವ ಆಯುಷ್‌ ವೈದ್ಯರೇ ತುಂಬಿರುವುದರಿಂದ ಆರೋಗ್ಯ ಹದಗೆಟ್ಟವರು ತಪಾಸಣೆ ಮಾಡಿಸಲು ಮನಸ್ಸು ಮಾಡುತ್ತಿಲ್ಲ. ತಪಾಸಣೆಗೆ ಜನ ಬರಲಿ, ಬರದಿರಲಿ ಈ ತಜ್ಞರು ತಮ್ಮ ಪ್ರತಿಗಂಟೆ ‘ಕುರ್ಚಿ ಮೇಲೆ ಕೂರುವ ಸೇವೆ’ಗೆ ₹ 500 ಗೌರವಧನ ಪಡೆಯುತ್ತಿದ್ದಾರೆ.

ಬಹುತೇಕ ಕಡೆ ಸಿಬ್ಬಂದಿ ಕೊರತೆಯಿಂದ ಕೆಲಸದ ಭಾರವು ಸೀಮಿತ ನೌಕರರ ಮೇಲೆ ಬಿದ್ದಿದೆ. ವೈದ್ಯರು ತರಬೇತಿ, ಇಲಾಖೆ ಸಭೆ, ರಜೆಗೆಂದು ಹೋದಾಗ ಶುಶ್ರೂಷಕಿ, ಔಷಧ ವಿತರಕ, ಪ್ರಯೋಗಾಲಯ ಸಿಬ್ಬಂದಿ, ಕಾರಕೂನರೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮುನ್ನಡೆಸುತ್ತಾರೆ. ಬಂದವರ ಆರೋಗ್ಯ ವಿಚಾರಿಸಿ, ತಿಳಿದಿರುವಷ್ಟು ಜ್ಞಾನದ ಮೇಲೆ ಇಂಜಕ್ಷನ್‌, ಮಾತ್ರೆಗಳನ್ನು ನೀಡುತ್ತ ಜನರನ್ನು ಸಾಗ ಹಾಕುತ್ತಿದ್ದಾರೆ.

ಭುವನೇಶ್ವರಿ ನಗರ ಮತ್ತು ಹಳೆ ಬೈಯಪ್ಪನಹಳ್ಳಿಯ ಪಿಎಚ್‌ಸಿಗಳನ್ನು ಒಬ್ಬರು, ಕೊನೇನ ಅಗ್ರಹಾರದ ಮತ್ತು ಚಾಮರಾಜಪೇಟೆಯ ಪಿಎಚ್‌ಸಿಗಳನ್ನು ಮತ್ತೊಬ್ಬ ವೈದ್ಯರು ನಿಭಾಯಿಸುತ್ತಿರುವುದು ‘ಪ್ರಜಾವಾಣಿ’ ವರದಿಗಾರರು ಭೇಟಿ ನೀಡಿದಾಗ ಗೊತ್ತಾಯಿತು. ಜೀವನ್‌ ಬಿಮಾ ನಗರದ ವೈದ್ಯಾಧಿಕಾರಿಗೆ ರಾಜರಾಜೇಶ್ವರಿ ನಗರದಲ್ಲಿನ ‘ಆಹಾರ ಸುರಕ್ಷತಾ’ ಮೇಲ್ವಿಚಾರಕರಾಗಿ ಹೆಚ್ಚುವರಿ ಕೆಲಸ ವಹಿಸಿರುವುದು, ಆಜಾದ್‌ ನಗರದ ಹೆರಿಗೆ ಆಸ್ಪತ್ರೆಯೊಂದಿಗೆ ಅದಕ್ಕೆ ಅಂಟಿಕೊಂಡಿರುವ ಪಿಎಚ್‌ಸಿಯನ್ನೂ ವೈದ್ಯರೊಬ್ಬರೇ ನೋಡಿಕೊಳ್ಳುತ್ತಿರುವುದು ತಿಳಿಯಿತು. ‘ಈ ರೀತಿ ಎರಡೆರಡು ಕೆಲಸಗಳನ್ನು ಹೊರೆಸುವುದರಿಂದಾಗಿಯೇ ನಿರ್ದಿಷ್ಟ ಕೇಂದ್ರದಲ್ಲಿದ್ದು ಜನರ ಸೇವೆ ಮಾಡುವ ಅವಕಾಶ ಸಿಗುತ್ತಿಲ್ಲ’ ಎಂದು ವೈದ್ಯಾಧಿಕಾರಿಯೊಬ್ಬರು ಬೇಸರಿಸಿದರು.

‘ಪಾಲಿಕೆಯ ಪೂರ್ವ ವಲಯದಲ್ಲಿ ಕೊಳಗೇರಿಗಳು, ವಲಸೆ ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಆರೋಗ್ಯ ಕೇಂದ್ರಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದಲೇ ಬಹುತೇಕ ವೈದ್ಯರು ಕಡಿಮೆ ಸಂಖ್ಯೆಯಲ್ಲಿ ಜನರು ಬರುವ ಪಶ್ಚಿಮ ಮತ್ತು ದಕ್ಷಿಣ ವಲಯದ ಕೇಂದ್ರಗಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ವೈದ್ಯರು ವ್ಯವಸ್ಥೆಯ ಒಳಮಾತನ್ನು ಬಿಚ್ಚಿಟ್ಟರು.

ಪ್ರತಿ ಪಿಎಚ್‌ಸಿಯ ದೇಖಾರೇಕಿ ಮಾಡಲು ಆರೋಗ್ಯ ರಕ್ಷಾ ಸಮಿತಿಯೊಂದನ್ನು ರಚಿಸಲಾಗಿರುತ್ತದೆ. ಇದರಲ್ಲಿ ಪಾಲಿಕೆಯ ಸ್ಥಳೀಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತಿನಿಧಿ, ಸ್ತ್ರೀಶಕ್ತಿ ಸಂಘದ ಸದಸ್ಯೆ, ಸ್ಥಳೀಯ ನಿವಾಸಿಗಳ ಸಂಘದ ಪ್ರತಿನಿಧಿ ಸದಸ್ಯರಾಗಿರುತ್ತಾರೆ. ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಮತ್ತು ರಾಷ್ಟ್ರೀಯ, ರಾಜ್ಯದ ಆರೋಗ್ಯ ಯೋಜನೆ, ಅಭಿಯಾನಗಳನ್ನು ಯಶಸ್ವಿಗೊಳಿಸುವ ಗುರುತರ ಹೊಣೆ ಇವರ ಮೇಲೆ ಇರುತ್ತದೆ.

ಕಡತದ ಉಲ್ಲೇಖಕ್ಕಾಗಿ ರಚಿಸುವ ಈ ಸಮಿತಿಗಳ ಸದಸ್ಯರೇ ‘ಆರೋಗ್ಯ ಕೈಕೊಟ್ಟಾಗ ಈ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಬಂದರೆ, ಪಿಎಚ್‌ಸಿಗಳಿಗೆ ಈಗ ಅಂಟಿರುವ ಜಡತ್ವ ಒಂದಿಷ್ಟಾದರೂ ಕಳಚುತ್ತದೆ. ಇಲ್ಲಿನ ಕೊರತೆಗಳ ದರ್ಶನ ಸದಸ್ಯರಿಗೆ ಆಗುತ್ತದೆ. ಸಾರ್ವಜನಿಕರ ಅಳಲು ಕಿವಿಗೆ ಬೀಳುತ್ತದೆ’ ಎಂಬುದು ಜನರ ಅಭಿಮತ. ಸದ್ಯಕ್ಕಂತೂ ಹಾಗೆ ಆಗುತ್ತಿಲ್ಲ. ಬದಲಾವಣೆ ಆಗುವ ಲಕ್ಷಣಗಳು ಕೂಡ ಕಾಣುತ್ತಿಲ್ಲ.

ಮೂಲಸೌಕರ್ಯಗಳುಮರೀಚಿಕೆ

ನಗರದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯದ ಕೊರತೆ ಇದೆ.

ಕೇಂದ್ರದ ಸಿಬ್ಬಂದಿ ತಮ್ಮ ಬಳಕೆಗೆಂದೇ ಶೌಚಾಲಯಗಳಿಗೆ ಬೀಗ ಹಾಕುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಕೆಲವೆಡೆ ಶೌಚಾಲಯ ಯಾವ ಕಡೆ ಇದೆ ಎಂಬ ಫಲಕವೂ ಇಲ್ಲ. ಬಹುತೇಕ ಕಡೆಗಳಲ್ಲಿ ಶೌಚಾಲಯಗಳಿಂದ ಸ್ವಚ್ಛತೆ ಮಾಯವಾಗಿದೆ.

ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತರೂ ರಿಪೇರಿ ಮಾಡಿಸುವ ಮನಸ್ಸನ್ನು ಅಧಿಕಾರಿಗಳು ಮಾಡಿಲ್ಲ. ಆರೋಗ್ಯ ಸೇವೆಗಳಿಗಾಗಿ ಬಂದವರು ನೀರಿನ ಬಾಟಲ್‌ಗಳಿಗಾಗಿ ಅಂಗಡಿಗಳಿಗೆ ಅಲೆಯುವ ಪ್ರಮೇಯ ಇದೆ.

ರಾಷ್ಟ್ರೀಯ ಹಾಗೂ ರಾಜ್ಯ ಆರೋಗ್ಯ ಯೋಜನೆಗಳ ಮತ್ತು ಅಭಿಯಾನಗಳ ಮಾಹಿತಿ ಪ್ರಸಾರಕ್ಕೆಂದು ಅಂದಾಜು ₹ 35,000 ರೂಪಾಯಿ ವ್ಯಯಿಸಿ ಪ್ರತಿ ಕೇಂದ್ರದಲ್ಲಿನ ಗೋಡೆಗೆ ಟಿ.ವಿ.ಯೊಂದನ್ನು ಜೋಡಿಸಲಾಗಿದೆ. ಕೇಂದ್ರ ಕಚೇರಿಯಿಂದಲೇ ಇದರಲ್ಲಿ ಆರೋಗ್ಯದ ಅರಿವಿನ ಮಾಹಿತಿ ಬಿತ್ತರವಾಗಬೇಕಿತ್ತು. ಬಹುತೇಕ ಕಡೆ ಈ ಟಿ.ವಿ.ಗಳು ಕೆಟ್ಟು ಹೋಗಿರುವುದರಿಂದ ಜನರಿಗೆ ಮಾಹಿತಿ ಸಿಗುತ್ತಿಲ್ಲ.

‘ಇಚ್ಛಾಶಕ್ತಿಯಿಂದ ಸುಧಾರಣೆ ಸಾಧ್ಯ’

‘ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಧಾರಿಸಬೇಕೆಂಬ ಪ್ರಾಮಾಣಿಕ ಇಚ್ಛಾಶಕ್ತಿ ಆರೋಗ್ಯ ಇಲಾಖೆ ಮತ್ತು ಸಿಬ್ಬಂದಿಗೆ ಬಂದಾಗ ಮಾತ್ರ ಸಾರ್ವಜನಿಕ ಆರೋಗ್ಯ ಸೇವೆ ಸುಧಾರಿಸುತ್ತದೆ’ ಎಂದು ಕರ್ನಾಟಕ ಜನಾರೋಗ್ಯ ಚಳುವಳಿ ಸಂಚಾಲಕ ವಿಜಯಕುಮಾರ ಸೀತಪ್ಪ ಅಭಿಪ್ರಾಯಪಡುತ್ತಾರೆ.

‘ಕಾಯಿಲೆಗಳನ್ನು ವಾಸಿ ಮಾಡುವುದಕ್ಕಿಂತ ಕಾಯಿಲೆಗಳೇ ಬಾರದಂತೆ ತಡೆಯುವುದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆದ್ಯತೆಯಾಗಿದೆ. ಅದನ್ನು ಸರಿಯಾಗಿ ಮಾಡುತ್ತಿಲ್ಲ. ಹಾಗಾಗಿ ಜನರು ಆರೋಗ್ಯ ಸೇವೆಯ ಹಕ್ಕಿನಿಂದ ವಂಚಿತರಾಗಿದ್ದಾರೆ’ ಎಂದು ಹೇಳುತ್ತಾರೆ.

‘ಒಂದು ಆರೋಗ್ಯ ಕೇಂದ್ರದಲ್ಲಿ ಚೆನ್ನಾಗಿ ಚಿಕಿತ್ಸೆ ನೀಡುವ ವೈದ್ಯರೊಬ್ಬರು ಇದ್ದರೆ, ಅವರನ್ನು ವರ್ಗಾವಣೆ ಮಾಡಿಸುವ ಒತ್ತಡವನ್ನು ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಜನಪ್ರತಿನಿಧಿಗಳ ಮೂಲಕ ತರುತ್ತವೆ’ ಎಂದು ವ್ಯವಸ್ಥೆಯ ಕರಾಳತೆಯನ್ನು ಬಿಡಿಸಿಡುತ್ತಾರೆ.

‘ಸರ್ಕಾರವೇ ಆರೋಗ್ಯ ವಿಮೆಗಳಿಗೆಂದು ಪ್ರತಿವರ್ಷ ಅಂದಾಜು ₹ 17,000 ಕೋಟಿಯನ್ನು ಖಾಸಗಿ ಆಸ್ಪತ್ರೆಗಳಿಗೆ ಪಾವತಿಸುತ್ತದೆ. ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ ಸರ್ಕಾರಕ್ಕೇ ಬೇಕಾಗಿಲ್ಲ’ ಎಂದು ಅವರು ಬೇಸರಿಸುತ್ತಾರೆ.

*

ಪಿಎಚ್‌ಸಿವೊಂದಕ್ಕೆ ವೈದ್ಯರೊಬ್ಬರು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ಅವರಿಗೆ ಎರಡು ಕೇಂದ್ರ ನಿಭಾಯಿಸುವ ಜವಾಬ್ದಾರಿಯನ್ನು ವಹಿಸಲೇಬಾರದು. ಆರೋಗ್ಯ ತಪಾಸಣೆಗಾಗಿ ಬಹುತೇಕ ಜನರು ಕಷ್ಟಪಟ್ಟುಕೊಂಡು, ಆಟೊ ಖರ್ಚಿಟ್ಟು ಬರುತ್ತಾರೆ. ಸಕಾಲಕ್ಕೆ ವೈದ್ಯರಿಲ್ಲದಿದ್ದರೆ ಅವರ ಹಣ, ಸಮಯ ವ್ಯರ್ಥವಾಗುತ್ತೆ. ಬಂದು ಹೋಗಲು ಆಯಾಸವೂ ಆಗುತ್ತೆ.

– ಎ.ಮೀನಾಕ್ಷಿ, ಜೀವನ್‌ ಬಿಮಾ ನಗರ

*

ಮಗಳಿಗೆ ಹುಷಾರಿರಲಿಲ್ಲ. ಚೆಕ್‌ಅಪ್‌ ಮಾಡಿಸಿದ ಬಳಿಕ ಮಾತ್ರೆ ಪಡೆಯಲು ಒಂದು ತಾಸು ಕಾದೆ. ಔಷಧಿ ವಿತರಕರು ಖಾಲಿ ಆಗಿರುವ ಔಷಧಿಗಳನ್ನು ತರಲು ವಾಣಿವಿಲಾಸ ಆಸ್ಪತ್ರೆ ಬಳಿಯ ಉಗ್ರಾಣಕ್ಕೆ ಹೋಗಿದ್ದರಂತೆ. ಆ ಕೆಲಸಕ್ಕೆ ಬೇರೆ ಸಿಬ್ಬಂದಿಯನ್ನು ನೇಮಿಸಬಹುದಿತ್ತಲ್ಲವೇ?

– ದೇವರಾಜ್‌, ಆಜಾದ್‌ ನಗರ

*

ವೈದ್ಯಕೀಯ ಸಿಬ್ಬಂದಿ ಸೌಜನ್ಯಪೂರ್ವಕವಾಗಿ ವರ್ತಿಸಲ್ಲ. ಒರಟು ಭಾಷೆ ಬಳಸುತ್ತಾರೆ. ವೈದ್ಯರು ಕೇಂದ್ರದಲ್ಲಿ ಇಲ್ಲದಿದ್ದರೆ, ಹರಟೆ ಹೊಡೆದುಯುತ್ತ ಕೂರುತ್ತಾರೆ. ಬಂದ ಜನರ ಯೋಗಕ್ಷೇಮವನ್ನು ತಕ್ಷಣ ವಿಚಾರಿಸುವುದಿಲ್ಲ.

– ಮಂಜುನಾಥ, ಗೋವಿಂದರಾಜನಗರ

*

ಸಮಯಕ್ಕೆ ಸರಿಯಾಗಿ ಬಂದು ಸಿಬ್ಬಂದಿ ಆರೋಗ್ಯ ಕೇಂದ್ರದ ಬಾಗಿಲು ತೆರೆಯಲ್ಲ. ತಪಾಸಣೆ ಮಾಡುವಾಗ, ಪ್ರಯೋಗಾಲಯಗಳ ಪರೀಕ್ಷೆ ವೇಳೆ ಉದಾಸೀನವಾಗಿ ವರ್ತಿಸುತ್ತಾರೆ. ಮಾತ್ರೆ, ಇಂಜಕ್ಷನ್‌ಗಳಿದ್ದರೂ ಹೊರಗಿನಿಂದ ತರುವಂತೆ ಚೀಟಿ ಬರೆದು ಕೊಡುತ್ತಾರೆ.

– ರಮೇಶ್‌, ವಿಲ್ಸನ್‌ ಗಾರ್ಡನ್‌ ನಿವಾಸಿ

ಆರೋಗ್ಯ ಕೇಂದ್ರ, ಕಾಯಂ ಸಿಬ್ಬಂದಿ ಕೊರತೆ

ಪ್ರತಿ 50,000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕೆಂದು ಆರೋಗ್ಯ ಇಲಾಖೆಯ ನಿಯಮವೇ ಹೇಳುತ್ತದೆ. ಆದರೆ, ಈ ಮಿತಿಯನ್ನು ಮೀರಿದ ಜನರ ಪ್ರಮಾಣ ಬಹುತೇಕ ವಾರ್ಡ್‌ಗಳಲ್ಲಿ ಇದ್ದರೂ, ಅಗತ್ಯ ಕೇಂದ್ರಗಳಿಲ್ಲ. ಕೆಲವೊಂದು ಕಡೆ ಎರಡು ವಾರ್ಡ್‌ಗಳಿಗೆ ಒಂದು ಕೇಂದ್ರವಿದೆ.

ಕಾಕ್ಸ್‌ಟೌನ್‌ನಲ್ಲಿನ 93,000, ಪಿಳ್ಳಣ್ಣ ಗಾರ್ಡನ್‌ನಲ್ಲಿನ 1.28 ಲಕ್ಷ ಜನಸಂಖ್ಯೆಗೆ ಒಂದೊಂದೇ ಪಿಎಚ್‌ಸಿ ಇದೆ. ವಾರ್ಡ್‌ಗೊಂದು ಪಿಎಚ್‌ಸಿ ಸ್ಥಾಪಿಸಬೇಕು ಎಂಬ ಪಾಲಿಕೆಯ ನಿರ್ಧಾರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

‘ಪಿಎಚ್‌ಸಿಗಳಲ್ಲಿನ ಶೇ 90ರಷ್ಟು ಸಿಬ್ಬಂದಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ (ಎನ್‌ಯುಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉದ್ಯೋಗ ಭದ್ರತೆ ಇಲ್ಲ. ನಗರ ಜೀವನಾಗತ್ಯ ವೇತನ ಸಿಗುತ್ತಿಲ್ಲ. ಸಿಬ್ಬಂದಿಯನ್ನು ಕಾಯಂ ಮಾಡಿದರೆ ಸೇವಾ ಗುಣಮಟ್ಟ ಮತ್ತಷ್ಟು ಹೆಚ್ಚುತ್ತದೆ’ ಎಂದು ಬಹುತೇಕ ಸಿಬ್ಬಂದಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ನಗರ ಆರೋಗ್ಯದಲ್ಲಿನ ಬಹುತೇಕ ಅಭಿಯಾನಗಳನ್ನು ಯಶಸ್ವಿಗೊಳಿಸುವಲ್ಲಿ ಹಿರಿಯ ಮಹಿಳಾ ಸಹಾಯಕಿಯರ (ಎಎನ್‌ಎಂ) ಮಹತ್ವದ ಪಾತ್ರ ನಿಭಾಯಿಸುತ್ತಾರೆ. ತಿಂಗಳಿಗೆ ₹ 12,000 ಸಂಬಳ ನೀಡುತ್ತಿರುವ ಕಾರಣಕ್ಕಾಗಿ ಈ ಕೆಲಸ ಮಾಡಲು ಆಸಕ್ತರು ಮುಂದೆ ಬರುತ್ತಿಲ್ಲ. ಹಾಗಾಗಿ ಈ ಸ್ಥಾನಗಳು ಅರ್ಧದಷ್ಟು ಖಾಲಿಯಿವೆ. ಇದರಿಂದಾಗಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳ ತಡೆಗೆ ಅರಿವು ಮೂಡಿಸಬೇಕಾದ ಅಭಿಯಾನಗಳು ಸರಿಯಾಗಿ ನಡೆಯುತ್ತಿಲ್ಲ. ಆದರೆ, ‘ಎಲ್ಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಜನರಲ್ಲಿ ಅರಿವು ಮೂಡಿಸಲಾಗಿದೆ’ ಎಂಬ ವರದಿಗಳು ಪಿಎಚ್‌ಸಿಯಲ್ಲಿಯೇ ಸಿದ್ಧಗೊಂಡು ಕೇಂದ್ರ ಕಚೇರಿಗೆ ತಲುಪುತ್ತಿವೆ.

‘ಒಪಿಡಿ ಮಾತ್ರದಿಂದಾಗಿ ಜನ ಬರಲ್ಲ’

‘ಹತ್ತಿರವೇ ಖಾಸಗಿ ಕ್ಲಿನಿಕ್ ಇದೆಯಂದು ಜನರು ಅಲ್ಲಿಗೆ ಹೆಚ್ಚು ಹೋಗುತ್ತಾರೆ. ಪಿಎಚ್‌ಸಿಗಳಲ್ಲಿ ಹೊರರೋಗಿ ಸೇವೆ (ಒಪಿಡಿ) ದಿನದ ನಿಗದಿತ ಅವಧಿಯಲ್ಲಿ ಮಾತ್ರ ಸಿಗುತ್ತದೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಡಿಮೆ ಸಂಖ್ಯೆಯಲ್ಲಿ ಜನ ಬರುತ್ತಿರಬಹುದು’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಮನೋರಂಜನ್‌ ಹೆಗ್ಡೆ ತಿಳಿಸುತ್ತಾರೆ.

‘ಕೆಲವೊಂದು ಪ್ರದೇಶಗಳಲ್ಲಿನ ಕ್ಲಿನಿಕ್‌ಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಚಿಕಿತ್ಸೆ ನೀಡುವ ವೈದ್ಯರು ನಗರದಲ್ಲಿದ್ದಾರೆ. ಇದರಿಂದಲೂ ಜನರು ಪಿಎಚ್‌ಸಿಗಳ ಮೇಲೆ ಅವಲಂಬನೆ ಆಗುತ್ತಿಲ್ಲದಿರಬಹುದು’ ಎಂದು ಹೇಳುತ್ತಾರೆ.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಮೂಲಸೌಕರ್ಯಗಳ ನಿರ್ವಹಣೆಗೆ ‘ಎನ್‌ಯುಎಚ್‌ಎಂ’ನಡಿ ಅನುದಾನ ನೀಡಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು, ಕೇಂದ್ರಗಳನ್ನು ಸುಸ್ಥಿತಿಯಲ್ಲಿ ನಿರ್ವಹಿಸದ, ಉಚಿತ ಆರೋಗ್ಯ ಸೇವೆಗಳಿಗೆ ಅನಧಿಕೃತವಾಗಿ ಶುಲ್ಕ ಸಂಗ್ರಹಿಸುವ ವೈದ್ಯಾಧಿಕಾರಿಗಳ ವಿರುದ್ಧ ದೂರು ಬಂದರೆ, ಕ್ರಮ ಜರುಗಿಸುತ್ತೇವೆ’ ಎಂದು ವಿವರಿಸುತ್ತಾರೆ.

‘ನಮ್ಮ ಸೇವೆಗೆ ರಾಷ್ಟ್ರೀಯ ಪುರಸ್ಕಾರ ಸಂದಿದೆ’

‘ನಮ್ಮ ಪಿಎಚ್‌ಸಿಗಳಿಗೆ ತಪಾಸಣೆಗಾಗಿ ಬರುವವರ ಪ್ರಮಾಣ ಪ್ರತಿವರ್ಷ ಹೆಚ್ಚಳವಾಗುತ್ತಿದೆ. ನಮ್ಮ ಉತ್ತಮ ಸೇವೆಗೆ ಕೇಂದ್ರ ಸರ್ಕಾರದಿಂದಲೂ ಪುರಸ್ಕಾರ ಸಂದಿದೆ’ ಎಂದುರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅನುಷ್ಠಾನದ ಮುಖ್ಯ ಕಾರ್ಯಕ್ರಮ ಅಧಿಕಾರಿ ಡಾ.ಸುರೇಶ್‌ ತಿಳಿಸಿದರು.

‘ಕೆಲವು ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಅಗತ್ಯ ಔಷಧಗಳ ಖರೀದಿಗಾಗಿ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್‌ ವೇರ್‌ಹೌಸಿಂಗ್‌ ಸೊಸೈಟಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಒಂದಿಷ್ಟು ವಿಳಂಬ ಆಗುತ್ತಿದೆ’ ಎಂದು ಅವರು ತಿಳಿಸಿದರು.

‘ಅತ್ಯಗತ್ಯ ಔಷಧಿಗಳನ್ನುಆರೋಗ್ಯ ರಕ್ಷಾ ಸಮಿತಿ ಮತ್ತು ಕಚೇರಿ ನಿರ್ವಹಣೆಗೆ ನೀಡಲಾಗುವ ಅನುದಾನದಿಂದ ಖರೀದಿಸಿ ತಂದು, ಜನರಿಗೆ ವಿತರಿಸಲು ಸದ್ಯ ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT