ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಮಂಗಲದಲ್ಲಿ ಆಸ್ತಿ ಬಲು ದುಬಾರಿ! ದರ ಎಷ್ಟಿದೆ ಗೊತ್ತಾ?

ಆಸ್ತಿ ಖರೀದಿ–ಮಾರಾಟಕ್ಕೆ ಸಂಬಂಧಿಸಿ, ರಾಜಧಾನಿ ಬೆಂಗಳೂರಿನ ಕೋರಮಂಗಲ ಅತ್ಯಂತ ದುಬಾರಿ ಪ್ರದೇಶವೆನಿಸಿದೆ.
Published 17 ಏಪ್ರಿಲ್ 2024, 21:06 IST
Last Updated 17 ಏಪ್ರಿಲ್ 2024, 21:06 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ಖರೀದಿ–ಮಾರಾಟಕ್ಕೆ ಸಂಬಂಧಿಸಿ, ರಾಜಧಾನಿ ಬೆಂಗಳೂರಿನ ಕೋರಮಂಗಲ ಅತ್ಯಂತ ದುಬಾರಿ ಪ್ರದೇಶವೆನಿಸಿದೆ.

ಕ್ವೆಸ್‌ ಕಾರ್ಪ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅಜಿತ್‌ ಐಸಾಕ್‌ ಅವರು, ಪ್ರತಿ ಚದರ ಅಡಿಗೆ ₹70,300ರಂತೆ ಒಟ್ಟು ₹67.5 ಕೋಟಿಗೆ 10 ಸಾವಿರ ಚದರಡಿ ನಿವೇಶನವನ್ನು ಖರೀದಿಸಿದ್ದು, ಇದು ಇಲ್ಲಿಯವರೆಗಿನ ಅತ್ಯಂತ ದುಬಾರಿ ಖರೀದಿಯಾಗಿದೆ ಎಂದು ಹೇಳಲಾಗುತ್ತಿದೆ.

ಕೋರಮಂಗಲ 3ನೇ ಬ್ಲಾಕ್‌ನಲ್ಲಿ, ಅರವಿಂದ ಹಾಗೂ ಗೀತಾ ರೆಡ್ಡಿ ದಂಪತಿ ಅವರಿಂದ ಅಜಿತ್‌ ಈ ನಿವೇಶನ ಖರೀದಿ ಮಾಡಿದ್ದಾರೆ. ಈ ದಂಪತಿ ಈ ಮೊದಲು ಇಲ್ಲಿ ತಮ್ಮ ಕುಟುಂಬದ ವ್ಯವಹಾರ ನಡೆಸುತ್ತಿದ್ದರು.

‘ಕಳೆದ ವಾರ ಈ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ನಿವೇಶನದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ವ್ಯವಹಾರ ಕುದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಲಿಯರ್ಸ್‌ ಎಂಬ ಕನ್ಸಲ್ಟನ್ಸಿ ಸಂಸ್ಥೆಯು ಈ ಖರೀದಿ ಪ್ರಕ್ರಿಯೆ ಕುರಿತು ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿತು.

ಈ ಹಿಂದೆಯೂ ಬಹಳ ದುಬಾರಿ ಬೆಲೆಗೆ ಇಲ್ಲಿ ಆಸ್ತಿಗಳು ಮಾರಾಟವಾದ ನಿದರ್ಶನಗಳಿವೆ. ಕೋರಮಂಗಲದ ಇದೇ ಬ್ಲಾಕ್‌ನಲ್ಲಿ ಈ ಹಿಂದೆ 9,488 ಚದರ ಅಡಿ ವಿಸ್ತೀರ್ಣದ ನಿವೇಶನವೊಂದನ್ನು ಟಿವಿಎಸ್‌ ಮೋಟಾರ್ಸ್‌ಗೆ ಪ್ರತಿ ಚದರ ಅಡಿಗೆ ₹68,597ರಂತೆ ಮಾರಾಟ ಮಾಡಲಾಗಿತ್ತು. ಇದು, ಬೆಂಗಳೂರಿನಲ್ಲಿ ಇದುವರೆಗಿನ ಅತ್ಯಂತ ದುಬಾರಿ ಆಸ್ತಿ ವ್ಯವಹಾರ ಎನಿಸಿತ್ತು.

ಸಿರಿವಂತರೇ ಹೆಚ್ಚಾಗಿ ವಾಸಿಸುತ್ತಿರುವ ಕೋರಮಂಗಲ ‘ಬಿಲಿಯನೇರ್ಸ್‌ ಸ್ಟ್ರೀಟ್‌’ ಎಂದೂ ಖ್ಯಾತಿ ಪಡೆದಿದೆ. ಫ್ಲಿಪ್‌ಕಾರ್ಟ್‌ ಸಹಸಂಸ್ಥಾಪಕ ಸಚಿನ್‌ ಬನ್ಸಾಲ್‌, ಇನ್ಫೊಸಿಸ್‌ ಸಹಸಂಸ್ಥಾಪಕರಾದ ನಂದನ್‌ ನಿಲೇಕಣಿ ಮತ್ತು ಕ್ರಿಸ್‌ ಗೋಪಾಲಕೃಷ್ಣನ್‌, ಬಾಗ್ಮನೆ ಡೆವಲಪರ್ಸ್‌ನ ರಾಜಾ ಬಾಗ್ಮನೆ, ನಾರಾಯಣ ಹೆಲ್ತ್‌ನ ಡಾ.ದೇವಿ ಪ್ರಸಾದ್‌ ಶೆಟ್ಟಿ, ರಾಜಕಾರಣಿ ರಾಜೀವ್‌ ಚಂದ್ರಶೇಖರ್‌ ಇಲ್ಲಿ ವಾಸಿಸುತ್ತಿದ್ದಾರೆ.

‘ರಿಯಾಲ್ಟಿ ಮಾರುಕಟ್ಟೆಯಲ್ಲಿ ಆಸ್ತಿಗಳ ಮೌಲ್ಯದಲ್ಲಿ ಏರಿಳಿತ ಇದ್ದಿದ್ದೇ. ಹೀಗಾಗಿ, ಇಂತಹ ವ್ಯವಹಾರಗಳನ್ನು ಹೋಲಿಕೆ ಮಾಡಲು ಆಗುವುದಿಲ್ಲ’ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾ ಎಂಬ ಕನ್ಸಲ್ಟನ್ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಂತನು ಮಜುಂದಾರ್‌ ಹೇಳುತ್ತಾರೆ.

‘ಕೆಲ ಪ್ರತಿಷ್ಠಿತ ಪ್ರದೇಶಗಳಲ್ಲಿ ಬೇಡಿಕೆಗೆ ತಕ್ಕಂತೆ ನಿವೇಶನಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ, ಸುಂದರ ಪರಿಸರವುಳ್ಳ ಮತ್ತು ಅಧಿಕ ಮೌಲ್ಯದ ಆಸ್ತಿಗಳನ್ನು ಖರೀದಿಸಲು ಭಾರತೀಯರಲ್ಲಿ ಒಲವು ಹೆಚ್ಚುತ್ತಿದೆ. ಇವು ಇಂತಹ ದುಬಾರಿ ಬೆಲೆಗೆ ಆಸ್ತಿಗಳ ಮಾರಾಟ/ಖರೀದಿಗೆ ಪ್ರಮುಖ ಕಾರಣಗಳು’ ಎಂದೂ ಅವರು ವಿಶ್ಲೇಷಿಸುತ್ತಾರೆ.

ಬೆಂಗಳೂರಿನಲ್ಲಿ ರಿಯಾಲ್ಟಿ ಕ್ಷೇತ್ರ ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ಆಸ್ತಿಗಳ ಮೌಲ್ಯದಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿದೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT