ಕೆ.ಆರ್.ಪುರ: ಬಿದರಹಳ್ಳಿ ಸಮೀಪವಿರುವ ಈಸ್ಟ್ ಪಾಯಿಂಟ್ ವಿದ್ಯಾಸಂಸ್ಥೆಗಳ ಸಮೂಹ ಸಂಸ್ಥೆಯು 20 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಆಗ್ರಹಿಸಿ ಬಿದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಕಾಲೇಜಿನ ಎದುರು ಗುರುವಾರ ತಮಟೆ ಚಳವಳಿ ನಡೆಸಿದರು.
ಬಿದರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಂಡಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಸ್ಟ್ ಪಾಯಿಂಟ್ ಸಮೂಹ ವಿದ್ಯಾಸಂಸ್ಥೆ, 2003ರಿಂದ ಈವರೆಗೆ ಸುಮಾರು ₹ 2.89 ಕೋಟಿ ಆಸ್ತಿ ತೆರಿಗೆ ಪಾವತಿಸದೆ ವಂಚನೆ ಮಾಡಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದರು.
‘ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಜವಾಬ್ದಾರಿಯುತ ಶಿಕ್ಷಣ ಸಂಸ್ಥೆ ಇಪ್ಪತ್ತು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. ಗ್ರಾಮ ಪಂಚಾಯತಿಯಿಂದ ನೀಡಿರುವ ಆಸ್ತಿ ತೆರಿಗೆಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದೆ ಬೇಜವ್ದಾರಿತನದಿಂದ ನಡೆದುಕೊಳ್ಳುತ್ತಿದೆ. ತೆರಿಗೆ ಪಾವತಿಸುವಂತೆ ತಿಳಿವಳಿಕೆ ಪತ್ರ ನೀಡಲು ಹೋದರೆ ಕಾಲೇಜಿನ ಆಡಳಿತ ಮಂಡಳಿ ಒಳಗೆ ಹೋಗಲು ಅವಕಾಶ ನೀಡದೆ ಉದ್ಧಟತನ ಪ್ರದರ್ಶಿಸಿದೆ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಕವಿತಾ ದೂರಿದರು.
‘ಮೂವತ್ತು ದಿನದೊಳಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೊತ್ತವನ್ನು ಪಾವತಿ ಮಾಡಬೇಕು. ತೆರಿಗೆ ಪಾವತಿ ಮಾಡದಿರುವ ಬಗ್ಗೆ ಸ್ಪಷ್ಟನೆ ನೀಡಲು ವಿಫಲವಾದರೆ ಗ್ರಾಮ ಪಂಚಾಯತಿಗೆ ಇರುವ ಕಾನೂನು ಬಳಸಿಕೊಂಡು ಖರ್ಚು ಸಹಿತ ಹಣ ವಸೂಲಿ ಮಾಡಲು ಜಪ್ತಿ ವಾರೆಂಟ್ ಆದೇಶ ಹೊರಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಈಸ್ಟ್ ಪಾಯಿಂಟ್ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯ ಅಧಿಕಾರಿ ಹೊನ್ನಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ‘ವಿದ್ಯಾಸಂಸ್ಥೆ ಟ್ರಸ್ಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಅಲ್ಲದೆ, ವಿದ್ಯಾರ್ಥಿ ವೇತನ ನೀಡಲಾಗಿದೆ. ಮಾಲೀಕರೊಂದಿಗೆ ಚರ್ಚಿಸಿ ನೋಟಿಸ್‌ಗೆ ಉತ್ತರಿಸಲಾಗುವುದು’ ಎಂದು ತಿಳಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಅಂಜಿನಮ್ಮ. ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೇಶ್, ವರುಣ್, ಜಿ.ಪಂ ಮಾಜಿ ಸದಸ್ಯ ಗಣೇಶ್, ಪಿಡಿಒ ಲೋಹಿತ್, ಕಾರ್ಯದರ್ಶಿ ಮುನಿರಾಜ್ ಹಾಗೂ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.