ಬೆಂಗಳೂರು: ‘ದಲಿತ, ಶೋಷಿತ, ಹಿಂದುಳಿದ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರುವ ಶಾಸಕ ಮುನಿರತ್ನರನ್ನು ಸಾರ್ವಜನಿಕ ಜೀವನದಲ್ಲಿ ಮುಂದುವರಿ ಯಲು ಶೋಷಿತ ಸಮಾಜ ಯಾವುದೇ ಕಾರಣಕ್ಕೂ ಬಿಡು ವುದಿಲ್ಲ. ಜೈಲಿಗೆ ಹೋಗುವವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಿದೆ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸುಧಾಮ್ ದಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನಿರತ್ನ ವಿರುದ್ಧ ವಿಶೇಷ ಸರ್ಕಾರಿ ವಕೀಲರನ್ನು ನೇಮಿಸಿ, ಕಠಿಣ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಜನಪ್ರತಿನಿಧಿಯೊಬ್ಬ ಹೀಗೆ ಮಾತನಾಡುತ್ತಾನೆ ಎನ್ನುವುದು ಅಸಹ್ಯದ ಪರಮಾವಧಿ. ಹೊರ ರಾಜ್ಯದಿಂದ ಬಂದ ಈತ ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲೇ ಮುಳುಗಿರುವ ವ್ಯಕ್ತಿ’ ಎಂದರು.
ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ‘ಮುನಿರತ್ನ ಅತ್ಯಂತ ತುಚ್ಛವಾಗಿ ಎರಡು ಸಮುದಾಯಗಳ ಬಗ್ಗೆ ಮಾತನಾಡಿದ್ದಾನೆ. ಈತನ ವಿರುದ್ಧ ರಾಜ್ಯದ ಅನೇಕ ಕಡೆ ದಲಿತ ಸಮುದಾಯದವರು ಸಾಂಕೇತಿಕ ದೂರು ನೀಡಿದ್ದಾರೆ’ ಎಂದರು.
ಬಿ.ಗೋಪಾಲ್ ಮಾತನಾಡಿ, ‘ಮನುವಾದವನ್ನು ಪ್ರತಿನಿಧಿಸುವ ಬಿಜೆಪಿಯ ಆಂತರಿಕ ಮಾತುಗಳನ್ನೇ ಮುನಿರತ್ನ ಆಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಸಮುದಾಯದ ಬಗ್ಗೆ, ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ನಾವು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.