ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Published : 13 ಆಗಸ್ಟ್ 2024, 14:39 IST
Last Updated : 13 ಆಗಸ್ಟ್ 2024, 14:39 IST
ಫಾಲೋ ಮಾಡಿ
Comments

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿ, ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿದೆ’ ಎಂದು ಕೋರ್ಟ್ ಹೇಳಿದ್ದು, ತಕ್ಷಣವೇ ಆದೇಶವನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ  ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಮಾಡಿದ್ದ ಶಿಫಾರಸಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಶೇ 6, ಶೇ 5.5, ಶೇ 4.5 ಮತ್ತು ಶೇ 1ರಂತೆ ಕೂಡಲೇ ಜಾರಿಗೆ ತರಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ವರ್ಗ–4ರಲ್ಲಿರುವ ಹಲವು ಉಪ ಜಾತಿಗಳಗಳನ್ನು ವರ್ಗ–1, ವರ್ಗ–2ಕ್ಕೆ ವರ್ಗಾಯಿಸಬೇಕು ಎಂದು  ಹಕ್ಕೊತ್ತಾಯ ಮಂಡಿಸಿದರು.

ವರ್ಗ–1, ವರ್ಗ–2ರಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಉಪಜಾತಿಗಳ ಹೆಸರುಗಳು ಹಾಗೆಯೇ ಮುಂದುವರಿಯಬೇಕು ಎಂದು ಆಗ್ರಹಿಸಿದರು.

ಹೋರಾಟಗಾರರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ವಜಾ ಮಾಡಬೇಕು. ತ್ರಿಮತಸ್ಥರಿಗೆ (ಮೋಚಿ, ಡೋಹರ, ಸಮಗಾರ) ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

25 ಸಾವಿರ ಪೌರ ಕಾರ್ಮಿಕರು, ವಾಹನ ಚಾಲಕರ ಕೆಲಸವನ್ನು ಕಾಯಂಗೊಳಿಸಬೇಕು. ಪರಿಶಿಷ್ಟ ಜಾತಿ ಉಪ ಹಂಚಿಕೆ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶವಿರುವ ಕಲಂ 7(ಬಿ) ಮತ್ತು 7(ಸಿ) ಅನ್ನು ರದ್ದು ಪಡಿಸಬೇಕು. ಸರ್ಕಾರಿ ಹುದ್ದೆಗಳ ಹೊಸ ನೇಮಕಾತಿಯನ್ನು ತಡೆಹಿಡಿದು ಒಳಮೀಸಲಾತಿ ವರ್ಗೀಕರಣದ ನಂತರವೇ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿ ರಾಜ್ಯ ಸಂಚಾಲಕರಾದ ನಂದಕುಮಾರ್, ಶಿವರಾಯ ಅಕ್ಕಂಕಿ, ಬಿ.ಎ.ಕೇಶವಮೂರ್ತಿ, ಜೆ.ಬಿ.ರಾಜು, ಎಸ್‌.ಮಾರೆಪ್ಪ, ಕನಕೇನಹಳ್ಳಿ ಕೃಷ್ಣಪ್ಪ, ಸಿ.ಕೆ.ಮಹೇಶ್‌, ಎಂ.ಸಿ.ಶ್ರೀನಿವಾಸ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT