ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್‌ ಬಸ್‌ಗೆ ಚಾಲನೆ

ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 921 ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ: ಸಚಿವ ರಾಮಲಿಂಗಾರೆಡ್ಡಿ
Published 28 ಜುಲೈ 2023, 15:57 IST
Last Updated 28 ಜುಲೈ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿಗೆ ಸೇರ್ಪಡೆಯಾದ ಮಾಲಿನ್ಯ ರಹಿತ, ಹವಾನಿಯಂತ್ರಣ ರಹಿತ ಮತ್ತು ಕಡಿಮೆ ವೆಚ್ಚದ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ ಚಾಲನೆ ನೀಡಿದರು.

ಟಾಟಾ ಮೋಟರ್ಸ್‌ ಸ್ಮಾರ್ಟ್‌ ಮೊಬಿಲಿಟಿ ಸಿಟಿ ಲಿಮಿಟೆಡ್‌ ತಯಾರಿಸಿರುವ ಈ ಬಸ್‌ನಲ್ಲಿ ಚಾಲಕ ಟಾಟಾ ಮೋಟರ್ಸ್‌ನವರೇ ಇರುತ್ತಾರೆ. ನಿರ್ವಾಹಕ ಬಿಎಂಟಿಸಿ ನೌಕರರಾಗಿರುತ್ತಾರೆ. ಕೇಂದ್ರ ಸರ್ಕಾರ ಪ್ರತಿ ಬಸ್‌ಗೆ ₹ 39 ಲಕ್ಷ ಸಬ್ಸಿಡಿ ನೀಡುತ್ತಿದೆ. ಉಳಿದ ಮೊತ್ತವನ್ನು ಟಾಟಾದವರೇ ಭರಿಸುತ್ತಾರೆ. ಪ್ರತಿ ಕಿಲೋಮೀಟರ್‌ಗೆ ₹ 41ರಂತೆ ಟಾಟಾ ಮೋಟರ್ಸ್‌ಗೆ ಬಿಎಂಟಿಸಿ ನೀಡಬೇಕು. ಇದನ್ನು ಹೊರತುಪಡಿಸಿದರೆ ಯಾವುದೇ ಹೊರೆ ಬಿಎಂಟಿಸಿಗೆ ಇರುವುದಿಲ್ಲ. ಈಗ ಒಂದು ಬಸ್‌ಗೆ ಚಾಲನೆ ನೀಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ಒಳಗೆ ಒಟ್ಟು 921 ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸಲಿವೆ ಎಂದು ಸಚಿವರು ಭರವಸೆ ನೀಡಿದರು.

10 ವರ್ಷಗಳಿಂದ ಬಸ್‌ ಇದ್ದಷ್ಟೇ ಇವೆ. ಪ್ರಯಾಣಿಕರ ಸಂಖ್ಯೆ ಏರಿದೆ. ಅದಕ್ಕೆ ಅನುಗುಣವಾಗಿ ಬಸ್‌ ಖರೀದಿಸಲಾಗುವುದು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಈ ನಾಲ್ಕು ನಿಗಮಗಳಲ್ಲಿ 4,000 ಬಸ್‌ಗಳನ್ನು ಖರೀದಿಸುವ ಉದ್ದೇಶ ಇದೆ. ಅವಶ್ಯಕತೆ ಇರುವಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲಾಗುವುದು. ಚಾಲಕ, ನಿರ್ವಾಹಕ, ಮೆಕ್ಯಾನಿಕಲ್‌ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯು ಅನುಮೋದನೆ ಹಂತದಲ್ಲಿದೆ ಎಂದು ತಿಳಿಸಿದರು.

ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಟಿಎಂಎಲ್‌ ಸಿಇಒ ಅಸೀಮ್ ಮುಖ್ಯೋಪಾಧ್ಯಾಯ, ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ, ಅರವಿಂದ್‌ ಮೋಟಾರ್ಸ್‌ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ರಾವ್ ಅವರೊಂದಿಗೆ ಸಚಿವರು ಎಲೆಕ್ಟ್ರಿಕ್‌ ಬಸ್‌ನಲ್ಲಿ ಶಾಂತಿನಗರದಿಂದ ವಿಧಾನಸೌಧದವರೆಗೆ ಪ್ರಾಯೋಗಿಕ ಸಂಚಾರ ನಡೆಸಿದರು.

ಪ್ರಾಯೋಗಿಕವಾಗಿ ಈ ಬಸ್‌ಗಳ ಕಾರ್ಯಚರಣೆಯು 96-ಎ ಮಾರ್ಗದಲ್ಲಿ ಅಂದರೆ ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ  ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT