ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದ ಪಿಯು ಕಾಲೇಜುಗಳಲ್ಲಿ ದಾಖಲಾತಿ ಚುರುಕು

ಅರ್ಜಿಗಾಗಿ ವಿದ್ಯಾರ್ಥಿಗಳ ಸರದಿ ಸಾಲು * ಡಿಪ್ಲೊಮಾ, ಐಟಿಐ ಪ್ರವೇಶಕ್ಕೂ ಪೈಪೋಟಿ
Last Updated 10 ಆಗಸ್ಟ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರದ ಪದವಿಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಅರ್ಜಿ ಪಡೆಯಲು ರಾಜ್ಯದ ಎಲ್ಲೆಡೆ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳ ಉದ್ದನೆಯ ಸಾಲು ಸಾಮಾನ್ಯವಾಗಿದೆ.

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಕೆಲವು ಕಾಲೇಜುಗಳಲ್ಲಿ ಈಗಾಗಲೇ ಪ್ರಥಮ ಪಿಯು ತರಗತಿಯ ದಾಖಲಾತಿ ಪೂರ್ಣಗೊಂಡಿದ್ದು, ತರಗತಿಗಳೂ ಪ್ರಾರಂಭವಾಗಿವೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಅರ್ಜಿ ವಿತರಣೆ ನಡೆಯುತ್ತಿದೆ.

ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗ ಮಾತ್ರವಲ್ಲದೆ, ಡಿಪ್ಲೊಮಾ, ಐಟಿಐನಂತಹ ವೃತ್ತಿಪರ ಕೋರ್ಸ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕೆಲವು ಪ್ರತಿಷ್ಠಿತ ಖಾಸಗಿ ಕಾಲೇಜುಗಳು, ಪಿಯು ಮತ್ತು ಪದವಿ ದಾಖಲಾತಿಗೆ ಪ್ರವೇಶ ಪರೀಕ್ಷೆಯನ್ನೂ ನಡೆಸುತ್ತಿವೆ. ಹೊಸ ವಿಭಾಗ, ಹೊಸ ಕೋರ್ಸ್‌ಗಳೂ ಪ್ರಾರಂಭವಾಗಿವೆ. ಕಲಾ ವಿಭಾಗಕ್ಕೆ ದಾಖಲಾಗಲು ಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.

ಕಲಾ ವಿಭಾಗಕ್ಕೂ ಬೇಡಿಕೆ:

‘ಕಲಾ ವಿಭಾಗ ಆಯ್ಕೆಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಕಳೆದ ಬಾರಿಗಿಂತ ಈ ಸಲ ಹೆಚ್ಚಾಗಿದೆ. ಪದವಿ ನಂತರ ಕೇಂದ್ರ ಮತ್ತು ರಾಜ್ಯಲೋಕಸೇವಾ ಆಯೋಗಗಳನ್ನು ನಡೆಸುವ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ವಿಭಾಗವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಟಿ. ಶಶಿಕಲಾ ಹೇಳಿದರು.

‘ವಿಜ್ಞಾನ ಮತ್ತು ಗಣಿತದಲ್ಲಿ ಹೆಚ್ಚು ಅಂಕಗಳು ಬಂದಿದ್ದರೂ, ಕಲಾ ವಿಭಾಗದಲ್ಲಿ ನನಗೆ ಆಸಕ್ತಿ ಇದೆ. ಇದೇ ವಿಭಾಗದಲ್ಲಿನ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿ ರಮೇಶ್‌ಕುಮಾರ್‌ ಹೇಳಿದರು.

‘ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಅಂಕಗಳು ಬಂದಿವೆ. ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೇನೆ’ ಎಂದು ನಗರದ ಖಾಸಗಿ ಕಾಲೇಜಿಗೆ ಅರ್ಜಿ ತೆಗೆದುಕೊಳ್ಳಲು ಬಂದಿದ್ದ ವಿದ್ಯಾರ್ಥಿನಿಯೊಬ್ಬರು ಹೇಳಿದರು.

ದುಪ್ಪಟ್ಟು ಅರ್ಜಿ ವಿತರಣೆ:

‘ನಿರೀಕ್ಷೆಗಿಂತ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಅರ್ಜಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮದು ಸರ್ಕಾರಿ ಕಾಲೇಜು ಆಗಿರುವುದರಿಂದ ಎಲ್ಲರಿಗೂ ಪ್ರವೇಶಾವಕಾಶ ನೀಡಲೇಬೇಕು. ಆದರೆ, ಗರಿಷ್ಠ 1,300 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಈಗಾಗಲೇ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ತೆಗೆದುಕೊಂಡು ಹೋಗಿದ್ದಾರೆ. ಸರ್ಕಾರ ಮುಂದೆ ಯಾವ ರೀತಿ ವ್ಯವಸ್ಥೆ ಮಾಡುತ್ತದೆಯೋ ಕಾದುನೋಡಬೇಕು’ ಎಂದು ನಗರದ ರಾಮ್‌ನಾರಾಯಣ ಚೆಲ್ಲಂ ವಾಣಿಜ್ಯ ಕಾಲೇಜಿನ ವ್ಯವಸ್ಥಾಪಕಿ ತಹಸಿಲ್ ಸುಲ್ತಾನಾ ಹೇಳಿದರು.

ಉಪನ್ಯಾಸಕರ ನೇಮಕ ಅವಶ್ಯ:

‘ಈ ಬಾರಿ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದು, ಬೇರೆ ಬೇರೆ ಕೋರ್ಸ್‌ಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿದರೆ ಶೇ 70ರಷ್ಟು ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಕ್ಕೆ ಸೇರಬಹುದು. ಸುಮಾರು 20ರಿಂದ 25 ದಿನಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಯಾವ ವಿಭಾಗಕ್ಕೆ ಎಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂಬುದರ ಆಧಾರದ ಮೇಲೆ ಮುಂದಿನ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ತಿಳಿಸಿದರು.

‘ರಾಜ್ಯದಲ್ಲಿ 1,253 ಹಾಗೂ ಬೆಂಗಳೂರಿನಲ್ಲಿ 23 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಎಲ್ಲ ಕಡೆಗೂ ದಾಖಲಾತಿಗಾಗಿ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆ. 1,320 ಅತಿಥಿ ಉಪನ್ಯಾಸಕರನ್ನೂ ಸರ್ಕಾರ ನಿಯೋಜನೆ ಮಾಡಿಕೊಂಡಿದ್ದು, ಅಗತ್ಯಬಿದ್ದರೆ ಮತ್ತಷ್ಟು ಉಪನ್ಯಾಸಕರನ್ನು ತೆಗೆದುಕೊಳ್ಳಬಹುದು’ ಎಂದು ಹೇಳಿದರು.

ಅಂಕಿ–ಅಂಶ

18 ಲಕ್ಷ

ಈ ವರ್ಷ ಎಸ್ಸೆಸ್ಸೆಲ್ಸಿ– ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು

12 ಲಕ್ಷ

ರಾಜ್ಯದ ಪಿಯು–ಪದವಿ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು

6 ಲಕ್ಷ

ಪಿಯು–ಪದವಿ ಕಾಲೇಜುಗಳಲ್ಲಿ ಕೊರತೆಯಾಗಲಿರುವ ಸೀಟುಗಳು

1.25 ಲಕ್ಷ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೆಚ್ಚಿಸಿರುವ ಸೀಟುಗಳು

‘ಕೇಂದ್ರೀಕೃತ ವ್ಯವಸ್ಥೆ ರೂಪಿಸಿ’

‘ಈ ಬಾರಿ ಪಿಯು ಹಾಗೂ ಪದವಿಯ ಕಾಲೇಜುಗಳಲ್ಲಿ ಸುಮಾರು 6 ಲಕ್ಷದಷ್ಟು ಸೀಟುಗಳ ಕೊರತೆ ಉದ್ಭವಿಸುವುದರಿಂದ ಕೊನೆಯ ಕ್ಷಣದಲ್ಲಿ ವಿದ್ಯಾರ್ಥಿಗಳು ತೊಂದರೆ ಎದುರಿಸುವ ಸಾಧ್ಯತೆ ಇದೆ. ಇದಕ್ಕಾಗಿ, ಕೇಂದ್ರೀಕೃತ ದಾಖಲಾತಿ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ’ ಎಂದು ಉಲ್ಲಾಳು ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್. ಸುಪ್ರೀತ್‌ ಸಲಹೆ ನೀಡಿದರು.

‘ಖಾಸಗಿ ಕಾಲೇಜುಗಳಲ್ಲದೆ, ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಸಿಗುವುದೂ ಕಷ್ಟವಾಗುತ್ತದೆ. ಹೆಚ್ಚು ದುಡ್ಡು ಕೊಟ್ಟವರಿಗೆ ಮಾತ್ರ ಪ್ರವೇಶ ಸಿಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

‘ಪಿಯು ಕಾಲೇಜುಗಳಲ್ಲಿ ಪದವಿಪೂರ್ವ ಶಿಕ್ಷಣ ಮಂಡಳಿಯೇ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಬೇಕು. ಆಯಾ ಪಿನ್‌ಕೋಡ್‌ಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸೀಟು ಹಂಚಿಕೆ ಮಾಡುವ ವ್ಯವಸ್ಥೆ ರೂಪಿಸಿದರೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತದೆ. ಸಾಮಾಜಿಕ ನ್ಯಾಯವನ್ನೂ ಪಾಲಿಸಿದಂತಾಗುತ್ತದೆ’ ಎಂದು ಹೇಳಿದರು.

‘ಸೀಟು ಸಾಮರ್ಥ್ಯ ಹೆಚ್ಚಳ’

‘ರಾಜ್ಯದ 435 ಸರ್ಕಾರಿ ಪದವಿ ಕಾಲೇಜುಗಳಲ್ಲಿ 2 ಲಕ್ಷದವರೆಗೆ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಅವಕಾಶವಿತ್ತು. ಈ ಬಾರಿ ಈ ಸಂಖ್ಯೆಯನ್ನು 3.25 ಲಕ್ಷಕ್ಕೆ ಏರಿಸಲಾಗಿದೆ’ ಎಂದು ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ ಹೇಳಿದರು.

‘ಪ್ರತಿ ಕಾಲೇಜಿನಲ್ಲಿ 60 ಸೀಟುಗಳಿದ್ದ ಕಡೆಗೆ, 80 ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಈ ಬಾರಿ ಬಹುಶಿಸ್ತೀಯ ಕೋರ್ಸ್‌ಗಳ ಆಯ್ಕೆಗೂ ಅವಕಾಶ ಇರುವುದರಿಂದ ಹೊಸ ಕೋರ್ಸ್‌ಗಳೂ ಪ್ರಾರಂಭವಾಗುತ್ತಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT