ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಲಗ್ಗೆಯಿಟ್ಟ ‘ಹಸಿರು ಪಟಾಕಿ’; ಗುರುತಿಸಲು ಕ್ಯೂಆರ್ ಕೋಡ್

ಮಾರಾಟ ಪರವಾನಗಿಗೆ ಕಾಯುತ್ತಿರುವ ವರ್ತಕರು
Last Updated 9 ನವೆಂಬರ್ 2020, 20:47 IST
ಅಕ್ಷರ ಗಾತ್ರ

ಬೆಂಗಳೂರು: 'ದೀಪಾವಳಿಗೆ ಕಡಿಮೆ ಮಾಲಿನ್ಯ ಉಂಟು ಮಾಡುವ 'ಹಸಿರು ಪಟಾಕಿ'ಗಳನ್ನು ಬಳಸುವುದಕ್ಕೆ ಮಾತ್ರ ರಾಜ್ಯ ಸರ್ಕಾರ ಒಪ್ಪಿಗೆಯನ್ನೇನೋ ಸೂಚಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವುದು ಹಸಿರು ಪಟಾಕಿ ಹೌದೋ ಅಲ್ಲವೋ ಎಂಬುದನ್ನು ಗುರುತಿಸುವುದು ಹೇಗೆ?

ಪಟಾಕಿ ಖರೀದಿಸಲು ಮುಂದಾಗಿರುವ ಗ್ರಾಹಕರನ್ನು ಕಾಡುತ್ತಿರುವ ಗೊಂದಲವಿದು. ಈ ಗೊಂದಲ ಬಗೆಹರಿಸಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ ತಯಾರಕರು.

‘ಹಸಿರು ಪಟಾಕಿಗಳನ್ನು ಸುಲಭವಾಗಿ ಗುರುತಿಸಲು ಪಟಾಕಿಗಳ ಮೇಲೆ 'ಗ್ರೀನ್ ಫೈರ್‌ ವರ್ಕ್ಸ್‌' ಎಂಬ ಮುದ್ರೆ ಹಾಕಲಾಗಿದೆ. ಈ ಬಗ್ಗೆ ಅನುಮಾನವಿದ್ದವರು ಪಟಾಕಿ ಪೊಟ್ಟಣಗಳ ಮೇಲಿರುವ ‘ಕ್ಯೂ-ಆರ್ ಕೋಡ್' ಅನ್ನು ಸ್ಕ್ಯಾನ್ ಮಾಡಿ, ದೃಢಪಡಿಸಿಕೊಳ್ಳಬಹುದು’ ಎಂದು ತಮಿಳುನಾಡು ಪಟಾಕಿ ಮತ್ತು ಸಿಡಿಮದ್ದು ತಯಾರಕರ ಸಂಘದ ಅಧ್ಯಕ್ಷ ಪಿ.ಗಣೇಶನ್ 'ಪ್ರಜಾವಾಣಿ'ಗೆ ತಿಳಿಸಿದರು.

‘ಹಸಿರು ಪಟಾಕಿಯನ್ನು ಧೃಡಪಡಿಸಿಕೊಳ್ಳುವ ವ್ಯವಸ್ಥೆ ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಪರವಾನಗಿ ವಿಳಂಬ: ಪಟಾಕಿ ನಿಷೇಧದ ಕುರಿತು ರಾಜ್ಯ ಸರ್ಕಾರ ದಿಢೀರ್ ನಿರ್ಧಾರ ಕೈಗೊಂಡಿದ್ದು ಪಟಾಕಿ ವ್ಯಾಪಾರಿಗಳು ಕಂಗಾಲಾಗುವಂತೆ ಮಾಡಿತ್ತು. ಬಳಿಕ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿತು. ಇದು ವ್ಯಾಪಾರಿಗಳಲ್ಲಿ ಸ್ವಲ್ಪಮಟ್ಟಿಗೆ ನಿರಾಳ ಭಾವ ಮೂಡಿಸಿದೆ. ಹಸಿರು ಪಟಾಕಿ ಮಾರಾಟಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ, ಇವುಗಳ ಮಾರಾಟಕ್ಕೆ ವರ್ತಕರಿಗೆ ಪರವಾನಗಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ದೀಪಾವಳಿಗೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಉಳಿದಿವೆ. ಇನ್ನೂ ಪರವಾನಗಿ ವರ್ತಕರ ಕೈಸೇರಿಲ್ಲ. ಹಾಗಾಗಿ ವರ್ತಕರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

‘ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಿಕೊಂಡಿದ್ದೇವೆ. ಮಳಿಗೆ ತೆರೆಯಲು ಪರವಾನಗಿ ನೀಡುವ ಪ್ರಕ್ರಿಯೆ ವಿಳಂಬದಿಂದ ಇನ್ನೂ ವ್ಯಾಪಾರ ಆರಂಭಿಸಿಲ್ಲ' ಎಂದು ಪಟಾಕಿ ವ್ಯಾಪಾರಿಗಳು ತಿಳಿಸಿದರು.

'ಪಟಾಕಿ ಮಳಿಗೆಯನ್ನು ತೆರೆದ ಜಾಗ ಅಥವಾ ಮೈದಾನಗಳಲ್ಲಿ ಮಾತ್ರ ಸ್ಥಾಪಿಸಬಹುದು ಎಂದು ಸರ್ಕಾರ ಹೇಳಿದೆ. ಪರವಾನಗಿ ಪಡೆದೇ ಮಳಿಗೆಗಳನ್ನು ತೆರೆಯುವಂತೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಪ್ರತಿ ವರ್ಷವೂ ಹಬ್ಬಕ್ಕೆ ಎರಡು ವಾರ ಮುಂಚೆಯೇ ಪರವಾನಗಿ ಪ್ರಕ್ರಿಯೆ ಮುಗಿದು, ವ್ಯಾಪಾರ ಆರಂಭಗೊಳ್ಳುತ್ತಿತ್ತು. ಆದರೆ, ಈ ಬಾರಿ ಪ್ರಕ್ರಿಯೆ ವಿಳಂಬವಾಗಿದ್ದು, ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ' ಎನ್ನುತ್ತಾರೆ ರಾಜಾಜಿನಗರದ ಪಟಾಕಿ ವರ್ತಕ ಎಸ್.ಯೋಗೀಶ್.

ವ್ಯಾಪಾರ ಕುಸಿತದ ಆತಂಕ: 'ಮಳಿಗೆ ಆರಂಭಿಸಲು ಪೊಲೀಸ್, ಅಗ್ನಿಶಾಮಕ ದಳ, ಬಿಬಿಎಂಪಿ, ಆರೋಗ್ಯ ಇಲಾಖೆಗಳಿಂದ ಪರವಾನಗಿ ಪಡೆಯಬೇಕು. ಇದರೊಂದಿಗೆ ಭದ್ರತಾ ಠೇವಣಿಯನ್ನೂ ಪಾವತಿಸಬೇಕು. ಈ ಕಟ್ಟುನಿಟ್ಟಿನ ನಿಯಮಗಳು ಪಟಾಕಿ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನೆರಡು ದಿನಗಳಲ್ಲಿ ನಗರದಾದ್ಯಂತ ಹಸಿರು ಪಟಾಕಿ ಮಳಿಗೆಗಳು ವ್ಯಾಪಾರ ಆರಂಭಿಸಲಿವೆ. ಈ ಬಾರಿಯ ಗೊಂದಲಗಳಿಂದ ನಗರದಲ್ಲಿ ಪಟಾಕಿ ವ್ಯಾಪಾರ ಶೇ 40ರಷ್ಟು ಕುಸಿಯುವ ಸಾಧ್ಯತೆ ಇದೆ' ಎಂದು ಬೆಂಗಳೂರು ಚಿಲ್ಲರೆ ಪಟಾಕಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್.ಚಂದ್ರಶೇಖರ್ ಆತಂಕ ತೋಡಿಕೊಂಡರು.

'ಹಸಿರು ಪಟಾಕಿ'ಗೆ ವ್ಯಂಗ್ಯ: ಹಸಿರು ಪಟಾಕಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ವ್ಯಂಗ್ಗಳು ಹರಿದಾಡುತ್ತಿವೆ. ಹಸಿರು ಬಣ್ಣದ ದಾರದಲ್ಲಿ ತಯಾರಿಸಿರುವ 'ಆಟಂ ಬಾಂಬ್' ಪಟಾಕಿಯ ಚಿತ್ರಗಳನ್ನು ಫೇಸ್‌ಬುಕ್‌ ಖಾತೆಗಳಲ್ಲಿ, ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಂಡಿರುವ ಕೆಲವರು, ‘ಸರ್ಕಾರದ ಸೂಚನೆಯಂತೆ ಈ ಹಸಿರು ಪಟಾಕಿಯನ್ನೇ ಹಚ್ಚುತ್ತೇವೆ’ ಎಂದು ಹಾಸ್ಯ ಮಾಡಿದ್ದಾರೆ. ಕರ್ಕಶ ಶಬ್ಧವನ್ನುಂಟು ಮಾಡುವ ಪಟಾಕಿಗಳಲ್ಲಿ ಇದೂ ಒಂದು.

ಇನ್ನು ಕೆಲವರು 'ಪಟಾಕಿಗೆ ಹಸಿರು ಬಣ್ಣ ಹಚ್ಚಿ ಸಿಡಿಸುತ್ತೇವೆ. ಅದೇ ಹಸಿರು ಪಟಾಕಿ' ಎಂದು ಬರೆದುಕೊಂಡಿದ್ದಾರೆ.

‘ಶೇ 80ರಷ್ಟು ಹಸಿರು ಪಟಾಕಿ ಲಭ್ಯ’

'ತಮಿಳುನಾಡಿನ ಶಿವಕಾಶಿಯಲ್ಲಿರುವ ಪಟಾಕಿ ತಯಾರಕರು ಎನ್‌ಇಇಆರ್‌ಐ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. 2019ರಲ್ಲೇ ಹಸಿರು ಪಟಾಕಿಗಳನ್ನು ತಯಾರಿಸಲು ಪ್ರಾರಂಭಿಸಿದ್ದೇವೆ. ಈ ವರ್ಷ ಮಾರುಕಟ್ಟೆಯಲ್ಲಿ ಶೇ 80ರಷ್ಟು ಹಸಿರು ಪಟಾಕಿಗಳು ಲಭ್ಯ' ಎಂದು ಪಿ.ಗಣೇಶನ್ 'ಪ್ರಜಾವಾಣಿ'ಗೆ ತಿಳಿಸಿದರು.

'ಕಡಿಮೆ ಉತ್ಪಾದನೆಯಿಂದಾಗಿ, ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಅಷ್ಟೇನೂ ಜನಪ್ರಿಯವಾಗಲಿಲ್ಲ. ಆದರೆ ಈ ಸಲ ದೇಶದಾದ್ಯಂತ ಪಟಾಕಿ ವರ್ತಕರಿಗೆ ಈಗಾಗಲೇ ಹಸಿರು ಪಟಾಕಿ ಹಂಚಿಕೆಯಾಗಿದೆ. ಈ ದೀಪಾವಳಿಗೆ ಗ್ರಾಹಕರ ಕೈಯಲ್ಲಿ ಹಸಿರು ಪಟಾಕಿ ಇರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT