ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ: ಡಿಜಿಟಲ್ ಪಾವತಿಗೆ ಕ್ಯೂಆರ್‌ ಕೋಡ್‌ ಕಡ್ಡಾಯ

ವೋಲ್ವೊ ಬಸ್‌ಗಳಲ್ಲಿ ಬಳಕೆಯಲ್ಲಿರುವ ಡಿಜಿಟಲ್ ಪಾವತಿ ಪದ್ಧತಿ * ಉಳಿದವರ ನಿರಾಸಕ್ತಿ
Published 23 ಫೆಬ್ರುವರಿ 2024, 20:27 IST
Last Updated 23 ಫೆಬ್ರುವರಿ 2024, 20:27 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ಖರೀದಿಗಾಗಿ ಎಲ್ಲ ನಿರ್ವಾಹಕರಿಗೆ ಡಿಜಿಟಲ್‌ ಪಾವತಿ ಮಾಡಿಸಿಕೊಳ್ಳಲು ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ನೀಡಿದ್ದರೂ, ಅದು ವೋಲ್ವೊ ಬಸ್‌ಗಳಲ್ಲಿ ಮಾತ್ರ ಬಳಕೆಯಾಗುತ್ತಿದೆ. ಎಲ್ಲ ನಿರ್ವಾಹಕರು ಈ ವ್ಯವಸ್ಥೆ ಬಳಸುವುದನ್ನು ಕಡ್ಡಾಯಗೊಳಿಸಲು ಬಿಎಂಟಿಸಿ ಮುಂದಾಗಿದೆ.

ಕೋವಿಡ್‌ ಕಾಲದಲ್ಲಿ ವ್ಯಕ್ತಿಗಳ ನಡುವೆ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದರಿಂದ, 2020ರಲ್ಲಿಯೇ ಬಿಎಂಟಿಸಿ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಕೋವಿಡ್‌ ನಂತರದಲ್ಲಿ ದೂರ ಪ್ರಯಾಣದ ಬಸ್‌ಗಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಕ್ಯೂಆರ್‌ ಕೋಡ್‌ ಬಳಕೆ ಕಡಿಮೆಯಾಯಿತು.

ನಗರದ ಒಳಗೆ ಬಸ್‌ ನಿಲ್ದಾಣಗಳ ಅಂತರ ಕಡಿಮೆ ಇರುವಲ್ಲಿ ಕ್ಯೂಆರ್‌ ಕೋಡ್‌ ಬಳಕೆಯೇ ಸಮಸ್ಯೆಗಳನ್ನು ಸೃಷ್ಟಿಸಿತು. ಒಂದು ನಿಲ್ದಾಣದಿಂದ ಪಕ್ಕದ ನಿಲ್ದಾಣಕ್ಕೆ ತೆರಳುವವರು ಟಿಕೆಟ್‌ ತೆಗೆದುಕೊಳ್ಳಲು ಸ್ಕ್ಯಾನ್‌ ಮಾಡುವಾಗ ನೆಟ್‌ವರ್ಕ್‌ ಇನ್ನಿತರ ಕಾರಣದಿಂದ  ವಿಳಂಬವಾದರೆ, ಅವರು ಇಳಿಯಬೇಕಿದ್ದ ಸ್ಥಳ ಬಂದು ಬಿಡುತ್ತಿತ್ತು. ಇದರಿಂದ ಬಹುತೇಕ ನಿರ್ವಾಹಕರು ‍ಡಿಜಿಟಲ್‌ ಪಾವತಿ ಇರುವುದನ್ನೇ ಮರೆಮಾಚಿ ನಗದು ಪಡೆದು ಟಿಕೆಟ್‌ ನೀಡುವುದನ್ನು ಮುಂದುವರಿಸಿದ್ದರು.

‘ಕೆಲವು ಮಾರ್ಗಗಳಲ್ಲಿ ಒಂದೇ ಬಾರಿ ಹತ್ತಿಪ್ಪತ್ತು ಪ್ರಯಾಣಿಕರು ಬಸ್‌ ಹತ್ತುತ್ತಾರೆ. ಅವರಲ್ಲಿ ಕೆಲವರು ಮುಂದಿನ ಅಥವಾ ಎರಡನೇ ನಿಲ್ದಾಣದಲ್ಲಿ ಇಳಿಯುವವರಾಗಿರುತ್ತಾರೆ. ಅಷ್ಟು ಮಂದಿ ಒಬ್ಬೊಬ್ಬರೇ ಸ್ಕ್ಯಾನ್‌ ಮಾಡಲು ಹೆಚ್ಚು ಅವಧಿ ಬೇಕಾಗುತ್ತದೆ. ಅದಕ್ಕೆ ಸ್ಕ್ಯಾನರ್‌ ಇಟ್ಟುಕೊಂಡಿಲ್ಲ’ ಎಂದು ಬಸ್‌ ನಿರ್ವಾಹಕರೊಬ್ಬರು ಪ್ರತಿಕ್ರಿಯಿಸಿದರು.

‘₹5, ₹10 ಮೊತ್ತವನ್ನು ಸ್ಕ್ಯಾನಿಂಗ್‌ ಮಾಡುತ್ತಾ ಕುಳಿತರೆ ಎಲ್ಲರಿಗೂ ಟಿಕೆಟ್‌ ಕೊಡುವುದು ಯಾವಾಗ ಎಂದು ಕೆಲವು ನಿರ್ವಾಹಕರು ಪ್ರಶ್ನಿಸುತ್ತಾರೆ. ಇನ್ನು ಕೆಲವರು, ನಮ್ಮಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆಯೇ ಇಲ್ಲ ಎಂದು ತಪ್ಪು ಮಾಹಿತಿ ನೀಡುತ್ತಾರೆ. ನಮ್ಮಲ್ಲಿ ಹಣವಿಲ್ಲ ಎಂದಲ್ಲ. ಆದರೆ ಚಿಲ್ಲರೆ ಇರುವುದಿಲ್ಲ. ಅದಕ್ಕೂ ನಿರ್ವಾಹಕರಿಂದ ಬೈಗುಳ ಕೇಳಬೇಕು’ ಎಂದು ಬಸ್‌ ಪ್ರಯಾಣಿಕ ರಾಜಾಜಿನಗರದ ಎಚ್‌.ಸಿ. ರಮೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸ್ಸಲ್ಲಿ ಪ್ರಯಾಣಿಸುವ ಕೆಲವರಷ್ಟೇ ಯುಪಿಐ ಮೂಲಕ ಹಣ ಪಾವತಿಸುತ್ತಾರೆ. ಎಲ್ಲ ಬಸ್‌ಗಳಲ್ಲೂ ಡಿಜಿಟಲ್‌ ಪಾವತಿ ವ್ಯವಸ್ಥೆ ಇದ್ದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಶೇ 7 ಆದಾಯ: ಸಾರಿಗೆಯ ನಾಲ್ಕು ನಿಗಮಗಳಲ್ಲಿ ಮೊದಲ ಬಾರಿಗೆ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಪದ್ಧತಿಯನ್ನು ಜಾರಿಗೊಳಿಸಿದ್ದೇ ಬಿಎಂಟಿಸಿ. ಈಗ ಬಿಎಂಟಿಸಿಗೆ ಪ್ರಯಾಣಿಕರಿಂದ ಬರುವ ಆದಾಯದಲ್ಲಿ ಶೇ 7ರಷ್ಟು ಕ್ಯೂಆರ್‌ ಕೋಡ್‌ ಮೂಲಕ ಬರುತ್ತಿದೆ ಎಂದು ಬಿಎಂಟಿಸಿ ಅಧಿಕಾರಿ ಮಾಹಿತಿ ನೀಡಿದರು.

‘ಎಲ್ಲ ನಿರ್ವಾಹಕರಿಗೆ ಸೂಚನೆ ನೀಡಲಾಗುವುದು’

‘ಪ್ರಯಾಣದರವನ್ನು ಯುಪಿಐ ಆಧಾರಿತ ಪಾವತಿ ಮಾಡಲು ನಾಲ್ಕು ವರ್ಷಗಳ ಹಿಂದೆಯೇ ಬಿಎಂಟಿಸಿಯ ಎಲ್ಲ ನಿರ್ವಾಹಕರಿಗೆ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ನೀಡಲಾಗಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳೂ ಒಳಗೊಂಡಂತೆ ಎಲ್ಲ ಹವಾನಿಯಂತ್ರಿತ ಬಸ್‌ಗಳಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಕೆಯಾಗುತ್ತಿದೆ. ವಿವಿಧ ಕಾರಣಗಳಿಂದ ಕೆಲವು ಮಾರ್ಗಗಳಲ್ಲಿ ನಿರ್ವಾಹಕರು ಬಳಸುತ್ತಿಲ್ಲ. ಎಲ್ಲ ನಿರ್ವಾಹಕರು ಬಳಸುವಂತೆ ಸೂಚನೆ ನೀಡಲಾಗುವುದು‘ ಎಂದು ಬಿಎಂಟಿಸಿ ನಿರ್ದೇಶಕ ರಾಮಚಂದ್ರನ್ ಆರ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT