ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರದ ಮಳೆ; ಇಟ್ಟಿಗೆ ಬಿದ್ದು ಯುವತಿ ದುರ್ಮರಣ

* ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಮಳೆ * 20ಕ್ಕೂ ಹೆಚ್ಚು ಕಡೆ ನೆಲಕ್ಕುರುಳಿದ ಮರಗಳು
Last Updated 26 ಮೇ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಜೆಯಿಂದ ರಾತ್ರಿಯವರೆಗೆ ಜೋರು ಮಳೆ ಸುರಿದಿದ್ದು, ಇದೇ ವೇಳೆಯೇ ಸಿಮೆಂಟ್ ಇಟ್ಟಿಗೆಗಳು ತಲೆ ಮೇಲೆ ಬಿದ್ದು ಶಿಲ್ಪಾ (21) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

ನಂದಿನಿ ಲೇಔಟ್ ಬಳಿಯ ರಾಮಣ್ಣ ಬ್ಲಾಕ್‌ ನಿವಾಸಿ ಶಿಲ್ಪಾ, ಇತ್ತೀಚೆಗಷ್ಟೇ ಬಿ.ಎಸ್ಸಿ ಪದವಿ ಮುಗಿಸಿದ್ದರು. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಘಟನೆಯಲ್ಲಿ ಬಾಲಕ ಧನುಷ್ ಎಂಬಾತನಿಗೂ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಶಿಲ್ಪಾ ಅವರ ಮನೆ ಪಕ್ಕದ ಜಾಗದಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆದಿದೆ. ಸಿಮೆಂಟ್‌ ಇಟ್ಟಿಗೆಗಳಿಂದ ಗೋಡೆಗಳನ್ನು ಕಟ್ಟಲಾಗಿದೆ. ಮಳೆ ಬಂದ ಸಂದರ್ಭದಲ್ಲಿ ಗೋಡೆ ನೆನೆಯಬಾರದೆಂಬ ಕಾರಣಕ್ಕೆ ತಾಡಪತ್ರಿಗಳಿಂದ ಮುಚ್ಚಲಾಗಿದೆ. ತಾಡಪತ್ರಿ ಹಾರಿಹೋಗಬಾರದೆಂದು ಅದರ ಮೇಲೆಯೇ 10ಕ್ಕೂ ಹೆಚ್ಚು ಇಟ್ಟಿಗೆಗಳನ್ನು ಇರಿಸಲಾಗಿತ್ತು’ ಎಂದು ನಂದಿನಿ ಲೇಔಟ್ ಪೊಲೀಸರು ಹೇಳಿದರು.

‘ಮನೆ ಎದುರು ಬಟ್ಟೆ ಒಣಗಲು ಹಾಕಲಾಗಿತ್ತು. ಮಂಗಳವಾರ ಸಂಜೆ ಮಳೆ ಜೋರಾಗಿ ಸುರಿಯುತ್ತಿದ್ದ ವೇಳೆ ಮನೆಯಿಂದ ಹೊರ ಬಂದಿದ್ದ ಶಿಲ್ಪಾ, ಹಗ್ಗಕ್ಕೆ ಹಾಕಿದ್ದ ಬಟ್ಟೆ ತೆಗೆಯುತ್ತಿದ್ದರು. ಸಂಬಂಧಿ ಧನುಷ್ ಸಹ ಸಹಾಯಕ್ಕೆ ಬಂದಿದ್ದ. ಅದೇ ಸಂದರ್ಭದಲ್ಲೇ ಜೋರಾಗಿ ಗಾಳಿ ಬೀಸಿ ಇಟ್ಟಿಗೆಗಳು ಶಿಲ್ಪಾ ತಲೆ ಮೇಲೆ ಬಿದ್ದಿದ್ದವು’ ಎಂದೂ ತಿಳಿಸಿದರು.

‘ತೀವ್ರ ಗಾಯಗೊಂಡ ಶಿಲ್ಪಾ ಅವರನ್ನು ಕಣ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದರು. ಘಟನೆ ಬಗ್ಗೆ ಸಂಬಂಧಿಕರಿಂದ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದರು.

20ಕ್ಕೂ ಹೆಚ್ಚು ನೆಲಕ್ಕುರುಳಿದ ಮರಗಳು: ಆರ್‌.ಟಿ.ನಗರ, ವಿಜಯನಗರ, ಯಶವಂತಪುರ, ಪೀಣ್ಯ, ಬನಶಂಕರಿ, ಜಯನಗರ, ಯಶವಂತಪುರ, ಮೆಜೆಸ್ಟಿಕ್, ಸಂಜಯನಗರ, ಹೆಬ್ಬಾಳ, ಇಂದಿರಾನಗರ, ಮಡಿವಾಳ, ಯಲಹಂಕ, ಗಾಂಧಿನಗರ, ಕೋರಮಂಗಲ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಲಗ್ಗೆರೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಯಿತು.

ಮಳೆ ನೀರಿನಿಂದ ಹಲವೆಡೆ ಕಾಲುವೆಗಳು ತುಂಬಿ ಹರಿದವು. ರಸ್ತೆ ಮೇಲೆಯೂ ನೀರು ಹರಿಯಿತು. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ತ್ಯಾಜ್ಯವೂ ರಸ್ತೆ ಮೇಲೆಯೇ ಬಂದು ಬಿದ್ದಿತು.

‘ಬೆಂಗಳೂರು ಉತ್ತರ ಭಾಗದ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಗಾಳಿಯೂ ಜೋರಾಗಿ ಬೀಸಿದೆ.ಯಲಹಂಕ, ಇಂದಿರಾನಗರ, ಕೋರಮಂಗಲ, ಮಡಿವಾಳ, ರಾಜಾಜಿನಗರ, ಬಸವೇಶ್ವರ ನಗರ, ಯಶವಂತಪುರ ಹಾಗೂ ಹಲವೆಡೆ 20ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿವೆ. 30ಕ್ಕೂ ಹೆಚ್ಚು ಕಡೆ ಕೊಂಬೆಗಳು ಬಿದ್ದಿವೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ಮರಗಳು ಬಿದ್ದಿದ್ದರಿಂದ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ.ಈ ಬಗ್ಗೆ ಹಲವು ದೂರುಗಳು ಬಂದಿವೆ. ಬಿಬಿಎಂಪಿ, ಅಗ್ನಿಶಾಮಕ ದಳದ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾರೆ’ ಎಂದರು.

ವಿದ್ಯುತ್ ವ್ಯತ್ಯಯ: ವಿದ್ಯುತ್ ಕಂಬ, ತಂತಿಗಳ ಮೇಲೆಯೇ ಮರ ಹಾಗೂ ಮರದ ಕೊಂಬೆಗಳು ಬಿದ್ದಿದ್ದವು. ಇದರಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT