ಭಾನುವಾರ, ಮೇ 22, 2022
26 °C

ಬೆಂಗಳೂರು: ಶನಿವಾರ ಸಂಜೆಯ ನಂತರ ಸುರಿದ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಯುಭಾರ ಕುಸಿತದಿಂದಾಗಿ ನಗರದ ಹಲವೆಡೆ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಮುಂಜಾನೆಯಿಂದಲೇ ಆಗಸದಲ್ಲಿ ಕಾರ್ಮೋಡಗಳು ದಟ್ಟೈಸಿದ್ದವು. ಹೀಗಾಗಿ ಚಳಿಯ ವಾತಾವರಣವೂ ನಿರ್ಮಾಣವಾಗಿತ್ತು.

ಸಂಜೆಯವರೆಗೂ ಮೋಡ ಕವಿದ ವಾತಾವರಣವೇ ಇತ್ತು. ರಾತ್ರಿ 7 ಗಂಟೆಯ ನಂತರ ಅಲ್ಲಲ್ಲಿ ಜೋರು ಮಳೆ ಶುರುವಾಯಿತು. ಅದು ಮಧ್ಯರಾತ್ರಿಯವರೆಗೂ ಮುಂದುವರಿದಿತ್ತು.  ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಯಲ್ಲೇ ಬೈಕ್‌ಗಳನ್ನು ನಿಲ್ಲಿಸಿ ಅಂಗಡಿ ಹಾಗೂ ಮಳಿಗೆಗಳ ಬಳಿ ಆಶ್ರಯ ಪಡೆದುಕೊಳ್ಳುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ವಾರಾಂತ್ಯದ ದಿನವಾಗಿದ್ದರಿಂದ ಸಂಜೆಯಿಂದಲೇ ಯುವಕ ಯುವತಿಯರು ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಕಮರ್ಷಿಯಲ್‌ ಸ್ಟ್ರೀಟ್‌ನತ್ತ ಧಾವಿಸುತ್ತಿದ್ದರು. ಕೆಲವರು ಅಗತ್ಯ ವಸ್ತುಗಳ ಖರೀದಿಗಾಗಿ ಬಂದಿದ್ದರು. ಅವರೆಲ್ಲಾ ಮಳೆಯಲ್ಲಿ ಸಿಲುಕಿಕೊಂಡರು. ಸಾಕಷ್ಟು ಹೊತ್ತು ಕಾದರೂ ‘ವರುಣನ ಆಟ’ ನಿಲ್ಲುವ ಲಕ್ಷಣ ಗೋಚರಿಸದ್ದರಿಂದ ಹಲವರು ಮಳೆಯ ನಡುವೆಯೇ ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಿದ್ದುದೂ ಕಂಡುಬಂತು. ಕೆಲವರು ಕೊಡೆಗಳನ್ನು ಹಿಡಿದು ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದರು.

ಗಿರಿನಗರ, ಹೊಸಕೆರೆಹಳ್ಳಿ, ಶ್ರೀನಿವಾಸನಗರ, ಕತ್ರಿಗುಪ್ಪೆ, ಹನುಮಂತನಗರ ಸೇರಿದಂತೆ ದಕ್ಷಿಣ ವಲಯದ ಕೆಲವೆಡೆ ತುಂತುರು ಮಳೆ ಇತ್ತು. ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಲ್ಲೇಶ್ವರಂ, ಕೆಂಗೇರಿ, ಮಹಾಲಕ್ಷ್ಮಿ ಬಡಾವಣೆ, ಮೆಜೆಸ್ಟಿಕ್‌, ಕೃಷ್ಣರಾಜ ಮಾರುಕಟ್ಟೆ, ಜೆ.ಸಿ.ನಗರ, ಸಂಜಯನಗರ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಸಂಜೆಯ ಹೊತ್ತಿನಲ್ಲಿ ಮಳೆ ಸುರಿಯಿತು.

ಎಂ.ಜಿ.ರಸ್ತೆ, ಇಂದಿರಾನಗರ, ಬ್ರಿಗೇಡ್‌ ರಸ್ತೆ, ಹಲಸೂರು, ಜೀವನ್‌ಬಿಮಾ ನಗರ, ಕಸ್ತೂರಿನಗರ, ಬಾಣಸವಾಡಿ, ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ, ಬೊಮ್ಮನಹಳ್ಳಿ, ಕೆ.ಆರ್‌.ಪುರ, ರಾಮಮೂರ್ತಿನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಯಿತು. ಹೀಗಾಗಿ ರಸ್ತೆಯಲ್ಲಿ ನೀರು ಹರಿಯಿತು. ಅಲ್ಲಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಸಂಚಾರ ದಟ್ಟಣೆಯೂ ಏರ್ಪಟ್ಟಿತ್ತು.

ಗುಂಡಿ ಬಿದ್ದಿದ್ದ ರಸ್ತೆಗಳು ಮಳೆನೀರಿನಿಂದ ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರಿಸಿದರು.  ನಗರದ ಹಲವೆಡೆ ನೆಲದಡಿಯಲ್ಲಿ ವಿದ್ಯುತ್‌ ಕೇಬಲ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ಅಗೆಯಲಾಗಿದ್ದ ಗುಂಡಿಗಳಲ್ಲೂ ಮಳೆ ನೀರು ಸಂಗ್ರಹವಾಗಿತ್ತು. ಅಲ್ಲಲ್ಲಿ ರಾಶಿ ಹಾಕಿದ್ದ ಮಣ್ಣು ಮಳೆಗೆ ಕೊಚ್ಚಿಕೊಂಡು ರಸ್ತೆ ಮೇಲೆ ಹರಡಿಕೊಂಡಿತ್ತು. ಆ ಮಾರ್ಗದಲ್ಲಿ ಸಾಗುವವರಿಗೆ ಕೆಸರಿನ ಸಿಂಚನವಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು