ಸೋಮವಾರ, ಮೇ 23, 2022
24 °C
ಐದು ತಿಂಗಳಿಂದ ಪರದಾಡುತ್ತಿರುವ ನಿವಾಸಿಗಳು

ರಾಜಕಾಲುವೆ ದಾಟಲು ನಿತ್ಯ ಸರ್ಕಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಲೇಶ್ವರದಿಂದ ಗುಟ್ಟಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಲು ಹಳೇ ಸೇತುವೆ ಒಡೆದು ಐದು ತಿಂಗಳಾದರೂ ಕಾಮಗಾರಿ ಆರಂಭಗೊಂಡಿಲ್ಲ. ಸಂಚಾರಕ್ಕೆ ರಸ್ತೆ ಸಂಪರ್ಕ ಕಡಿತಗೊಂಡು ನಿವಾಸಿಗಳು ಪರದಾಡುತ್ತಿದ್ದಾರೆ.

ಮಲ್ಲೇಶ್ವರದಿಂದ ವೈಯಾಲಿಕಾವಲ್, ಗುಟ್ಟಹಳ್ಳಿ ಮತ್ತು ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ದತ್ತಾತ್ರೇಯ ದೇವಸ್ಥಾನದ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆಗೆ ಅಡ್ಡಲಾಗಿ ಸೇತುವೆಯೊಂದು ಇತ್ತು. ಹೊಸ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಹಳೇ ಸೇತುವೆಯನ್ನು ಒಡೆದಿರುವ ಬಿಬಿಎಂಪಿ ಅಧಿಕಾರಿಗಳು, ಐದು ತಿಂಗಳಿಂದ ಕಾಮಗಾರಿಯನ್ನೇ ಆರಂಭಿಸಿರಲಿಲ್ಲ.

ಕಾಮಗಾರಿ ನಿರ್ವಹಿಸಲು ಹಾಕಿರುವ ಪೈಪ್‌ಗಳ ಮೇಲೆ ಸ್ಥಳೀಯರು ಕಸರತ್ತು ಮಾಡಿಕೊಂಡು ರಾಜಕಾಲುವೆ ದಾಟಬೇಕಾದ ಸ್ಥಿತಿ ಇದೆ. ಆಯತಪ್ಪಿ ಬಿದ್ದರೆ ರಾಜಕಾಲುವೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನಲ್ಲಿ ಬೀಳುವ ಅಪಾಯ ಇದೆ. ಬೇರೆ ದಾರಿ ಇಲ್ಲದೆ ಪೈಪ್‌ಗಳ ಮೇಲೆಯೇ ದಾಟುತ್ತಿದ್ದಾರೆ. ವಾಹನ ಸವಾರರಂತೂ ಕಿಲೋ ಮೀಟರ್‌ಗಟ್ಟಲೆ ಸುತ್ತಾಡಿ ಹೋಗಬೇಕಾದ ಅನಿವಾರ್ಯತೆ ಇದೆ. 

ಸೇತುವೆ ಒಡೆದು ಐದು ತಿಂಗಳಾಗಿದ್ದು, ಅದರ ಅಡಿಯಲ್ಲಿದ್ದ ಅಗತ್ಯ ಮೂಲ ಸೌಕರ್ಯದ ಕೊಳವೆಗಳನ್ನು ಸ್ಥಳಾಂತರ ಮಾಡುವ ಕೆಲಸವೇ ಇನ್ನೂ ಪೂರ್ಣಗೊಂಡಿಲ್ಲ. ಒಳಚರಂಡಿ ಕೊಳವೆಗಳು, ಬೆಸ್ಕಾಂ ಮತ್ತು ಬಿಎಸ್‌ಎನ್‌ಎಲ್‌ ಕೇಬಲ್‌ಗಳನ್ನು ಸ್ಥಳಾಂತರ ಮಾಡಿಕೊಳ್ಳುವ ಕೆಲಸವೇ ಇನ್ನೂ ಪರಿಪೂರ್ಣಗೊಂಡಿಲ್ಲ. ಆದ್ದರಿಂದ ಸೇತುವೆ ಕಾಮಗಾರಿ ಆರಂಭಿಸುವುದು ವಿಳಂಬವಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

‘ಜಲಮಂಡಳಿಯ ಒಳಚರಂಡಿ ಕೊಳವೆಗಳ ಸ್ಥಳಾಂತರವೇ ದೊಡ್ಡ ತಲೆನೋವಾಗಿತ್ತು. ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ ಕೂಡಲೇ ಮಳೆ ಶುರುವಾಗಿದೆ. ಮಳೆ ಬಿಡುವು ನೀಡಿದರೆ ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸಿ 15 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ’ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಪಶ್ಚಿಮ ವಲಯದ ಕಾರ್ಯಪಾಲಕ ಎಂಜಿನಿಯರ್ ಎಸ್.ಜಗದೀಶ್‌ ‘‍ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು