ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನೈಸ್‌ ರಸ್ತೆಯಲ್ಲಿದ್ದ ಇರ್ತಲೆ ಹಾವಿನ ರಕ್ಷಣೆ

Last Updated 1 ಜುಲೈ 2021, 12:53 IST
ಅಕ್ಷರ ಗಾತ್ರ

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಪತ್ತೆಯಾದ ಇರ್ತಲೆ ಹಾವನ್ನು (ರೆಡ್ ಸ್ಯಾಂಡ್‌ ಬೋವ) ವನ್ಯಜೀವಿ ಕಾರ್ಯಕರ್ತರು ಸಂರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಮಾಗಡಿ ರಸ್ತೆ ಬಳಿ ನೈಸ್‌ ‌ರಸ್ತೆ ದಾಟಲು ಇರ್ತಲೆ ಹಾವು ಯತ್ನಿಸುತ್ತಿತ್ತು. ಇದನ್ನು ನೋಡಿದ ಕೆಲವು ಸಾರ್ವಜನಿಕರು ಈ ಬಗ್ಗೆ ಸಮೀಪದಲ್ಲೇ ಇದ್ದ ನೈಸ್‌ ರಸ್ತೆಯ ಸುಂಕ ವಸೂಲಾತಿ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ಕೇಂದ್ರದ ಸಿಬ್ಬಂದಿ ವನ್ಯಜೀವಿ ಕಾರ್ಯಕರ್ತರಿಗೆ ಮಾಹಿತಿ ತಲುಪಿಸಿದ್ದರು.

‘ಕರೆ ಬಂದ ತಕ್ಷಣ ನಾನು ಮತ್ತು ವನ್ಯಜೀವಿ ಕಾರ್ಯಕರ್ತ ಎಚ್.ಎನ್‌.ಸೊಮು ಮಂಗಳವಾರ ರಾತ್ರಿ ಸ್ಥಳಕ್ಕೆ ಧಾವಿಸಿದೆವು. ಅತ್ಯಂತ ಅಪರೂಪದ ಇರ್ತಲೆ ಹಾವು ಅಲ್ಲಿತ್ತು. ಈ ಬಗ್ಗೆ ಸ್ಥಳೀಯ ವಲಯ ಅರಣ್ಯಾಧಿಕಾರಿ ಗಣೇಶ್‌ ಅವರಿಗೆ ಮಾಹಿತಿ ನೀಡಿ, ಹಾವನ್ನು ರಕ್ಷಣೆ ಮಾಡಿದೆವು. ನಂತರ ಅರಣ್ಯಾಧಿಕಾರಿ ನೆರವಿನಿಂದ ಹಾವನ್ನು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟುಬಂದೆವು’ ಎಂದು ವನ್ಯಜೀವಿ ಸಂರಕ್ಷರಾದ ವಲ್ಲೀಶ್‌ ವಿ.ಕೌಶಿಕ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಹಾವು ಸುಮಾರು 3 ಕೆ.ಜಿ. ತೂಕವಿತ್ತು. 167 ಸೆಂಟಿ ಮೀಟರ್‌ ಉದ್ದವಿತ್ತು. ಇದೊಂದು ಬಲಿತ ಹಾವು. ಸಾಮಾನ್ಯವಾಗಿ ಈ ಜಾತಿಯ ಹಾವು ರಸ್ತೆ ಬದಿಯಲ್ಲೆಲ್ಲ ಈ ರೀತಿ ಪತ್ತೆಯಾಗುವುದು ಅಪರೂಪ. ಕೆಲವು ಮೂಢನಂಬಿಕೆಗಳ ಕಾರಣಕ್ಕೆ ಈ ಹಾವಿನ ಕಳ್ಳಸಾಗಣೆ ನಡೆಯುತ್ತದೆ. ಯಾರೋ ಹಾವನ್ನು ತಂದು ಇಲ್ಲಿ ಬಿಟ್ಟುಹೋಗಿರಬಹುದು. ಅಥವಾ ಕಳ್ಳ ಸಾಗಣೆ ವೇಳೆ ತಪ್ಪಿಸಿಕೊಂಡಿರಬಹುದು’ ಎಂದು ಅವರು ಸಂದೇಹ ವ್ಯಕ್ತಪಡಿಸಿದರು.

ಪಕ್ಕನೇ ನೋಡಿದಾಗ, ಈ ಜಾತಿಯ ಹಾವುಗಳ ತಲೆ ಹಾಗೂ ಒಂದೇ ರೀತಿ ಕಾಣಿಸುತ್ತವೆ. ಹಾಗಾಗಿ ಇವುಗಳನ್ನು ಇರ್ತಲೆ ಹಾವು, ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವುಗಳೆಂದು ಕರೆಯುತ್ತಾರೆ. ಆದರೆ ವಾಸ್ತವದಲ್ಲಿ ಇವುಗಳಿಗೆ ಇರುವುದು ಒಂದೇ ತಲೆ. ಈ ಹಾವುಗಳ ಕುರಿತು ಅನೇಕ ಕಟ್ಟುಕಥೆಗಳು ಚಾಲ್ತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT