ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web EXclusive: ರಾಜಕೀಯ ದಾಳವಾಯಿತು ಮೀಸಲಾತಿ

Last Updated 23 ಸೆಪ್ಟೆಂಬರ್ 2020, 11:33 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಈ ಹಿಂದಿನ ಚುನಾಯಿತ ಕೌನ್ಸಿಲ್‌ ಅವಧಿ ಪೂರ್ಣಗೊಂಡು ಈಗಾಗಲೇ ಎರಡು ವಾರಗಳು ಕಳೆದಿವೆ. ಹೊಸ ಕೌನ್ಸಿಲ್‌ ರಚನೆಗೆ ಇನ್ನೂ ಚುನಾವಣೆ ನಡೆದಿಲ್ಲ. ಸದ್ಯಕ್ಕೆ ನಡೆಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಆದರೆ, ಚುನಾವಣೆಯಲ್ಲಿ ಪಕ್ಷದೊಳಗಿನ ಹಾಗೂ ವಿರೋಧ ಪಕ್ಷದಲ್ಲಿರುವ ರಾಜಕೀಯ ಎದುರಾಳಿಗಳನ್ನು ಮಣಿಸುವ ತಂತ್ರ ಕುತಂತ್ರಗಳು ಈಗಾಗಲೇ ಶುರುವಾಗಿವೆ. ಈ ರಾಜಕೀಯ ಹಣಾಹಣಿಯಲ್ಲಿ ದಾಳವಾಗಿ ಬಳಕೆಯಾಗುತ್ತಿರುವುದು ವಾರ್ಡ್‌ವಾರು ಮೀಸಲಾತಿ.

‘ಬಿಬಿಎಂಪಿ ಚುನಾವಣೆಯಲ್ಲಿ ರಾಜಕೀಯ ನಾಯಕರರು ತಮಗೆ ಬೇಕಾದಂತೆ ಮೀಸಲಾತಿಯನ್ನು ನಿಗದಿಪಡಿಸಿಕೊಳ್ಳಲು ಸಾಧ್ಯವಾದರೆ ಅವರು ಅರ್ಧ ಚುನಾವಣೆಯನ್ನು ಗೆದ್ದಂತೆ’ ಎಂಬ ಮಾತಿದೆ. ಮೀಸಲಾತಿಯನ್ನು ನಿಗದಿ ಪಡಿಸುವುದು ನಗರಾಭಿವೃದ್ಧಿ ಇಲಾಖೆ. ಜನಗಣತಿಯ ಅಂಕಿ ಸಂಖ್ಯೆಗಳನ್ನು ಆಧರಿಸಿ ಯಾವ ಜಾತಿಯವರಿಗೆ, ಯಾವ ವರ್ಗಕ್ಕೆ ಎಷ್ಟು ಸ್ಥಾನಗಳನ್ನು ಹಂಚಿಕೆ ಮಾಡಬೇಕು ಎಂಬುದನ್ನು ನಗರಾಭಿವೃದ್ಧಿ ಇಲಾಖೆಯೇ ನಿರ್ಧರಿಸುತ್ತದೆ. ಪ್ರತಿ ಚುನಾವಣೆಯಲ್ಲೂ ಈ ಮೀಸಲಾತಿಯ ಒಟ್ಟು ಪ್ರಮಾಣ ಬದಲಾಗುವುದಿಲ್ಲ. ಆದರೆ, ಯಾವ ವಾರ್ಡ್‌ನಲ್ಲಿ ಯಾರಿಗೆ ಮೀಸಲಾತಿ ನಿಗದಿಪಡಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಮಾತ್ರ ಆಡಳಿತ ಪಕ್ಷದ ನಾಯಕರೇ. ಹಾಗಾಗಿ ಬಿಬಿಎಂಪಿಯ ರಾಜಕೀಯ ಮೇಲಾಟದಲ್ಲಿ ಪ್ರಮುಖವಾಗಿ ಬಳಕೆಯಾಗುವ ಅಸ್ತ್ರವೇ ವಾರ್ಡ್‌ವಾರು ಮೀಸಲಾತಿ.

ಬಿಬಿಎಂಪಿ ಚುನಾವಣೆಯ ಮೀಸಲಾತಿ ಪಟ್ಟಿ ಸಿದ್ಧಪಡಿಸುವಾಗ ವಿಳಂಬವಾದರೆ ದಿನಕ್ಕೆ ₹ 10ಲಕ್ಷಕ್ಕೆ ಕಡಿಮೆ ಆಗದಂತೆ ದಂಡ ವಿಧಿಸುವುದಾಗಿ ಹೈಕೋರ್ಟ್‌ 2020ರ ಫೆಬ್ರುವರಿಯಲ್ಲೇ ಎಚ್ಚರಿಕೆ ನೀಡಿತ್ತು. ಹಾಗಾಗಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಆಗಸ್ಟ್‌ ಮೂರನೇ ವಾರದಲ್ಲೇ ಮೀಸಲಾತಿಯ ಕರಡು ಪಟ್ಟಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಚೇರಿಗೆ ಸಲ್ಲಿಸಿದ್ದರು. ಆದರೆ, ಆ ಕರಡು ಪಟ್ಟಿಯ ಕುರಿತು ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು ಸೆ. 14ರಂದು. ಅಧಿಕಾರಿಗಳು ಸಿದ್ಧಪಡಿಸಿದ ಪಟ್ಟಿಗೂ ರಾಜ್ಯಪತ್ರದಲ್ಲಿ ಪ್ರಕಟವಾದ ಕರಡು ಪಟ್ಟಿಗೂ ಅಜಗಜಾಂತರವಿತ್ತು. ಇಲ್ಲಿ ಕಾಣದ ಕೈಗಳ ಕರಮತ್ತು ಕೆಲಸ ಮಾಡಿವೆ ಎಂಬುದು ಈಗ ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯ.

ಮೀಸಲಾತಿಯ ಕರಡು ಪಟ್ಟಿಯ ಪ್ರಕಾರ ಪಾಲಿಕೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅವಧಿಯಲ್ಲಿ ಮೇಯರ್‌ಗಳಾಗಿದ್ದ ಬಿ.ಎನ್‌.ಮಂಜುನಾಥ ರೆಡ್ಡಿ, ಜಿ.ಪದ್ಮಾವತಿ, ಗಂಗಾಂಬಿಕೆ ಹಾಗೂ ಆರ್‌.ಸಂಪತ್‌ ಕುಮಾರ್‌ ಅವರು ಯಾರೂ ಹಿಂದಿನ ಅವಧಿಯಲ್ಲಿ ಸ್ಫರ್ಧಿಸಿದ್ದ ವಾರ್ಡ್‌ನಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವಿಲ್ಲ. ಆದರೆ, ಆಡಳಿತ ಪಕ್ಷದವರೇ ಆದ ನಿಕಟಪೂರ್ವ ಮೇಯರ್‌ ಎಂ.ಗೌತಮ್‌ ಕುಮಾರ್‌ ಪ್ರತಿನಿಧಿಸಿದ್ದ ಜೋಗುಪಾಳ್ಯ ವಾರ್ಡ್‌ನಲ್ಲಿ ಮೀಸಲಾತಿ ಬದಲಾವಣೆ ಆಗಿಲ್ಲ! ಜಿ.ಪದ್ಮಾವತಿ ಪ್ರತಿನಿಧಿಸಿದ್ದ ಪ್ರಕಾಶನಗರ ಹಾಗೂ ಗಂಗಾಂಬಿಕೆ ಪ್ರತಿನಿಧಿಸಿದ್ದ ಜಯನಗರ (153) ವಾರ್ಡ್‌ಗಳು ಮರುವಿಂಗಡಣೆ ಬಳಿಕ ಅಸ್ತಿತ್ವದಲ್ಲೇ ಇಲ್ಲ. ಬಿ.ಎನ್‌.ಮಂಜುನಾಥ ರೆಡ್ಡಿ ಪ್ರತಿನಿಧಿಸಿದ್ದ ಮಡಿವಾಳ ವಾರ್ಡ್‌ನಲ್ಲಿ ಹಾಗೂ ಆರ್‌.ಸಂಪತ್‌ ಕುಮಾರ್‌ ಪ್ರತಿನಿಧಿಸಿದ್ದ ದೇವರ ಜೀವನಹಳ್ಳಿ ವಾರ್ಡ್‌ಗಳೆರಡರಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ.

ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್‌ ಸದಸ್ಯರೆಲ್ಲರೂ ಮಗದೊಮ್ಮೆ ಆಯ್ಕೆಯಾಗಿ ಬಾರದಂತೆ ತಡೆಯುವ ಪ್ರಯತ್ನ ಮೀಸಲಾತಿ ನಿಗದಿ ಹಂತದಲ್ಲೇ ನಡೆದಿದೆ. ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಅಬ್ದುಲ್ ವಾಜಿದ್‌ ಪ್ರತಿನಿಧಿಸಿದ್ದ ಮನೋರಾಯನಪಾಳ್ಯ ವಾರ್ಡ್‌ನಲ್ಲಿ (ಮರುವಿಂಗಡಣೆ ಬಳಿಕ ಈ ವಾರ್ಡ್‌ನ ಹೆಸರು ಚಾಮುಂಡಿನಗರ ಎಂದು ಬದಲಾಗಿದೆ) ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಆರ್.ಎಸ್‌.ಸತ್ಯನಾರಾಯಣ ಪ್ರತಿನಿಧಿಸಿದ್ದ ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆ ಎಂದು ಬದಲಾಯಿಸಲಾಗಿದೆ. ಆಡಳಿತ ಪಕ್ಷದ ನಾಯಕರಾಗಿದ್ದ ಎಂ.ಶಿವರಾಜು ಪ್ರತಿನಿಧಿಸಿದ್ದ ಶಂಕರಮಠ ವಾರ್ಡ್‌ನ ಮೀಸಲಾತಿಯನ್ನು ‘ಹಿಂದುಳಿದ ವರ್ಗ ಎ’ನಿಂದ ‘ಹಿಂದುಳಿದ ವರ್ಗ ಬಿ’ಗೆ ಬದಲಾಯಿಸಲಾಗಿದೆ.

ಇದು ಕಾಂಗ್ರೆಸ್‌ ಪ್ರಮುಖರ ಕತೆಯಾದರೆ, ಬಿಜೆಪಿಯವರಿಗೂ ಈ ಗೋಳು ತಪ್ಪಿಲ್ಲ. ಬಿಜೆಪಿಯಲ್ಲಿ ನಗರದ ಘಟಕವೊಂದರ ಅಧ್ಯಕ್ಷರ ಪತ್ನಿ ಪ್ರತಿನಿಧಿಸಿದ್ದ ವಾರ್ಡ್‌ನ ಮೀಸಲಾತಿಯನ್ನು ಬದಲಾಯಿಸಲಾಗಿತ್ತು. ಆದರೆ, ಈ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಅವರು ಪಕ್ಷದ ಮುಖಂಡರ ಜೊತೆ ಜಗಳವಾಡಿ ಮೀಸಲಾತಿ ಬದಲಾಯಿಸಿದ್ದರು. ಅವರ ಪತ್ನಿ ಪ್ರತಿನಿಧಿಸುವ ವಾರ್ಡ್‌ನಲ್ಲಿ ಈ ಬಾರಿ ಅವರೇ ಸ್ಪರ್ಧೆಗೆ ಇಳಿಯಲು ಅವಕಾಶವಾಗುವಂತೆ ಮೀಸಲಾತಿಯ ಕರಡಿನಲ್ಲಿ ಮಾರ್ಪಾಡು ಮಾಡಲಾಗಿದೆ. ಆದರೆ, ಇಲ್ಲೂ ಅವರ ಜೊತೆ ಅಷ್ಟೇನೂ ಉತ್ತಮ ಸಂಬಂಧ ಹೊಂದಿಲ್ಲದ ಸಚಿವರೊಬ್ಬರು ಸಣ್ಣ ತಂತ್ರಗಾರಿಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ನಗರದ ಘಟಕವೊಂದರ ಅಧ್ಯಕ್ಷರಾಗಿರುವ ವ್ಯಕ್ತಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೆ, ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಆ ಪಕ್ಷದ ಪ್ರಮುಖರೊಬ್ಬರು ಮೀಸಲಾತಿಯ ಒಳಮರ್ಮವನ್ನು ಬಿಚ್ಚಿಟ್ಟರು.

ರಾಜಕೀಯ ನಾಯಕರದ್ದು ಈ ಕತೆಯಾದರೆ, ರಾಜಕೀಯ ರಂಗದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಪರಿಶಿಷ್ಟ ಜಾತಿಯ ಪ್ರಮುಖರದ್ದು ಬೇರೇಯೇ ಕತೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಅವರ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನಿಗದಿಪಡಿಸಲಾಗುತ್ತದೆ. ಮೀಸಲಾತಿಯ ಆಶಯ ಈಡೇರಬೇಕಾದರೆ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ವಾರ್ಡ್‌ಗಳ ಮೀಸಲಾತಿಯನ್ನು ಈ ಜಾತಿಯವರಿಗೇ ಮೀಸಲಿಡಬೇಕು. ಆದರೆ, ಹಾಗಾಗುತ್ತಿಲ್ಲ. ‘ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಈ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ವಾರ್ಡ್‌ಗಳಿಗೆ ನಿಗದಿಪಡಿಸುತ್ತಿಲ್ಲ. ಅದರ ಬದಲು ಯಾವುದೋ ವಾರ್ಡ್‌ನಲ್ಲಿ ಯಾರಿಗೋ ಸೀಟು ಸಿಗುವುದನ್ನು ತಪ್ಪಿಸುವುದಕ್ಕೇ ಅಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಪಡಿಸಲಾಗುತ್ತಿದೆ’ ಎಂದು ನೋವು ತೋಡಿಕೊಳ್ಳುತ್ತಾರೆ ರಾಜ್ಯ ಮಾದಿಗ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಕೋಗಿಲು.

‘ಯಲಹಂಕ ವಿಧಾನಸಭಾ ಕ್ಷೇತ್ರವು ಈ ಹಿಂದೆ ಮೀಸಲು ಕ್ಷೇತ್ರವಾಗಿತ್ತು. ಈ ಕ್ಷೇತ್ರದ ನಾಲ್ಕು ವಾರ್ಡ್‌ಗಳಲ್ಲೂ ಪರಿಶಿಷ್ಟ ಜಾತಿಯವರ ಸಂಖ್ಯೆ 5 ಸಾವಿರಕ್ಕೂ ಅಧಿಕ ಇದೆ. ಆದರೂ ಇಲ್ಲಿನ ಯಾವುದೇ ವಾರ್ಡ್‌ನಲ್ಲೂ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನಿಗದಿಪಡಿಸಿಲ್ಲ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ನಾಗರಾಜ್‌ ಕೊಡಿಗೆಹಳ್ಳಿ ವಸ್ತುಸ್ಥಿತಿ ಬಿಚ್ಚಿಟ್ಟರು.

ಬಿಬಿಎಂಪಿ ವಾರ್ಡ್‌ಗಳ ಮೀಸಲಾತಿಯ ಕರಡುಪಟ್ಟಿಗೆ ಆಕ್ಷೇಪ ಸಲ್ಲಿಸಲು ಸರ್ಕಾರ ಕೇವಲ ಒಂದು ವಾರದ ಕಾಲಾವಕಾಶ ನೀಡಿತ್ತು. ಮೀಸಲಾತಿಯುರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವುದರಿಂದಲೇ ಈ ಕರಡು ಪಟ್ಟಿಗೆ ಒಂದೇ ವಾರದಲ್ಲಿ 900ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಅಂತಿಮ ಪಟ್ಟಿಯನ್ನು ಪ್ರಕಟಿಸುವಾಗಲಾದರೂ ಸರ್ಕಾರ ರಾಜಕೀಯ ಮೇಲಾಟಗಳನ್ನು ಬದಿಗಿಟ್ಟು ನಿರ್ದಿಷ್ಟ ವಾರ್ಡ್‌ನಲ್ಲಿ ಅರ್ಹ ಜಾತಿ ಮತ್ತು ಸಮುದಾಯದವರು ಸ್ಪರ್ಧಿಸಲು ಅವಕಾಶ ಸಿಗುವಂತೆ ನೋಡಿಕೊಳ್ಳುತ್ತದೆಯೇ ಕಾದು ನೋಡಬೇಕು.

ಬಿಬಿಎಂಪಿ ಮೀಸಲಾತಿ: ಯಾವ ವರ್ಗಕ್ಕೆ ಎಷ್ಟು ಸ್ಥಾನ?

ವರ್ಗ; ಸ್ಥಾನಗಳು

ಸಾಮಾನ್ಯ; 53

ಸಾಮಾನ್ಯ ಮಹಿಳೆ; 53

ಪರಿಶಿಷ್ಟ ಪಂಗಡ; 2

ಪ.ಪಂಗಡ ಮಹಿಳೆ; 2

ಪರಿಶಿಷ್ಟ ಜಾತಿ; 11

ಪ.ಜಾತಿ ಮಹಿಳೆ; 11

ಹಿಂದುಳಿದ ವರ್ಗ ಬಿ; 7

ಹಿಂ. ವರ್ಗ ಬಿ ಮಹಿಳೆ; 6

ಹಿಂದುಳಿದ ವರ್ಗ ಎ; 27

ಹಿ.ವರ್ಗ ಎ ಮಹಿಳೆ; 26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT