ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ ನಿಧನ

Published 11 ಡಿಸೆಂಬರ್ 2023, 15:43 IST
Last Updated 11 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳ ವಲಯದಲ್ಲಿ ‘ಆಜಾತಶತ್ರು’ ಎಂದೇ ಹೆಸರು ಪಡೆದಿದ್ದ ಮತ್ತು 16 ವರ್ಷಗಳ ಕಾಲದ ತಮ್ಮ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಲ್ಲಿ ಎಂದೂ ಆರೋಪಕ್ಕೆ ಒಳಗಾಗದೆ ‘ಸಜ್ಜನ ನ್ಯಾಯಮೂರ್ತಿ’ ಎಂದೇ ಹೆಸರಾಗಿದ್ದ ನಾಗನಾಥ ಕಂಟೆಪ್ಪ ಪಾಟೀಲ (70) ಸೋಮವಾರ ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಪುತ್ರ ನಿಶಾಂತ್‌ ಪಾಟೀಲ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಡೆಬಾನ್‌ ಗ್ರಾಮದಲ್ಲಿ 1954ರ ಮೇ 2ರಂದು ಜನಿಸಿದ್ದ ಪಾಟೀಲರು ಬೆಂಗಳೂರಿನ ಶ್ರೀ ರೇಣುಕಾಚಾರ್ಯ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. 1982ರ ಏಪ್ರಿಲ್‌ 8ರಂದು ಸನ್ನದು ನೋಂದಣಿ ಮಾಡಿಸಿ 18 ವರ್ಷಗಳ ಕಾಲ ವಿವಿಧ ಸ್ತರಗಳ ನ್ಯಾಯಾಲಯದಲ್ಲಿ ವಕೀಲಿಕೆ ನಡೆಸಿದ್ದರು. 2000ರ ಡಿಸೆಂಬರ್‌ 11ರಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

‘ಕಲಬುರಗಿ ಮತ್ತು ಧಾರವಾಡ ಹೈಕೋರ್ಟ್‌ ಪೀಠಗಳ ಕಟ್ಟಡ ನಿರ್ಮಾಣ ಮತ್ತು ಆ ಕೋರ್ಟ್‌ಗಳ ಕಾರ್ಯಾರಂಭದಲ್ಲಿ ಪಾಟೀಲರ ಕೊಡುಗೆ ಅವಿಸ್ಮರಣೀಯ. ಕಲಬುರಗಿಯ ಕೋರ್ಟ್‌ ಮಾರ್ಗಕ್ಕೆ ಅವರ ಹೆಸರನ್ನಿಟ್ಟಿರುವುದೇ ಇದಕ್ಕೆ ಸಾಕ್ಷಿ‘ ಎಂದು ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಎನ್‌.ಕೆ.ಪಾಟೀಲರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. 

‘ಪಾಟೀಲರು, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ದಾಖಲಾರ್ಹ ಪ್ರಕರಣಗಳ ವಿಲೇವಾರಿಗೆ ಕಾರಣವಾಗಿದ್ದರು. ವಿಚಾರಣಾ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಸ್ತುವಾರಿ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕದಲ್ಲಿ ಅಪೌಷ್ಟಿಕತೆ ನಿರ್ಮೂಲನೆಗಾಗಿ ಸಮಗ್ರ ಯೋಜನೆ ರೂಪಿಸಲು ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಸಾಕಷ್ಟು ಉತ್ತಮ ಹೆಸರು ಗಳಿಸಿದ್ದರು. 2017ರ ಸೆಪ್ಟೆಂಬರ್ 22ರಿಂದ ವಿದ್ಯುತ್‌ ಮೇಲ್ಮನವಿ ನ್ಯಾಯಮಂಡಳಿಯ (ಎಪಿಟಿಇಎಲ್‌) ನ್ಯಾಯಾಂಗ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು‘ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಸ್ಮರಿಸಿದ್ದಾರೆ.

‘ಅಂತ್ಯ ಸಂಸ್ಕಾರ ಮಂಗಳವಾರ (ಡಿ.12) ಸಂಜೆ 4 ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಹೆಬ್ಬಾಳದ ಸ್ಮಶಾನದಲ್ಲಿ ನಡೆಯಲಿದೆ. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು, ನ್ಯಾಯಾಂಗ ಬಡಾವಣೆಯ 14ನೇ ಮುಖ್ಯ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ‘ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರ ಕುಟುಂಬದವರನ್ನು ಬಾಲಾಜಿ ಅವರ ಫೋನ್‌ ನಂಬರ್‌ 98804–78173ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT