ಭಾನುವಾರ, ಮಾರ್ಚ್ 26, 2023
23 °C
5 ಹಳ್ಳಿಗಳಲ್ಲಿ ಅಂತಿಮ ಹಂತದ ಕಾಮಗಾರಿ: 2 ಹಳ್ಳಿಗಳಲ್ಲಿ ಇನ್ನೂ ಆರಂಭ ಇಲ್ಲ

ಯಲಹಂಕ ವಿಧಾನಸಭಾ ಕ್ಷೇತ್ರ: ಮರು ನಿರ್ಮಾಣಕ್ಕೆ ಕಾದಿವೆ ರಸ್ತೆಗಳು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಲವೆಡೆ ಒಳಚರಂಡಿ ಕಾಮಗಾರಿ ಮುಗಿದಿದ್ದರೆ, ಕೆಲವೆಡೆ ಆರಂಭವೇ ಆಗಿಲ್ಲ. ಕಾಮಗಾರಿ ನಿರ್ವಹಿಸಲು ಅಗೆದ ರಸ್ತೆಗಳಲ್ಲಿ ಸಂಚಾರಕ್ಕೆ ವಾಹನ ಸವಾರರ ಹರಸಾಹಸ ಪಡಬೇಕು. ಇದು ಯಲಹಂಕ ವಿಧಾನಸಭಾ ಕ್ಷೇತ್ರದ ಏಳು ಹಳ್ಳಿಗಳ ಸ್ಥಿತಿ ಇದು.

2007ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಈ ಕ್ಷೇತ್ರದ ಏಳು ಗ್ರಾಮಗಳು ಒಳಗೊಂಡಿವೆ. ಈ ಪೈಕಿ ಐದು ಹಳ್ಳಿಗಳಲ್ಲಿ ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಮುಕ್ತಾಯಗೊಂಡಿದ್ದರೆ, ಇನ್ನೂ ಹಲವೆಡೆ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ.

ಉಳಿದಂತೆ ನಾಗೇನಹಳ್ಳಿ ಮತ್ತು ಹಾರೋಹಳ್ಳಿಯಲ್ಲಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಮುಗಿದಿದೆ. ಆದರೆ, ಒಳಚರಂಡಿ ಕಾಮಗಾರಿ ಆರಂಭವೇ ಆಗಿಲ್ಲ. ಈ ಕಾಮಗಾರಿ ನಿರ್ವಹಿಸಲು ನೇಮಿಸಲಾಗಿದ್ದ ಏಜೆನ್ಸಿ ಕಾರ್ಯ ನಿರ್ವಹಸದೆ ಬಿಟ್ಟು ಹೋದ ಕಾರಣ ಬೇರೆ ಏಜೆನ್ಸಿ ನಿಗದಿ ಮಾಡಲಾಗಿದೆ. ಕಾಮಗಾರಿ ಇನ್ನಷ್ಟೇ ಆಗಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಅನಂತಪುರ, ಕೆಂಚೇನಹಳ್ಳಿ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿಯಲ್ಲಿ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗಿದೆ. ಇದ್ದ ರಸ್ತೆಗಳನ್ನು ಬಗೆದು ಒಳಚರಂಡಿ ಮತ್ತು ಕಾವೇರಿ ನೀರಿನ ಪೂರೈಕೆ ಕೊಳವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಎಲ್ಲಾ ರಸ್ತೆಗಳಲ್ಲೂ ಒಳಚರಂಡಿಯ ಹೊಸ ಮ್ಯಾನ್‌ಹೋಲ್‌ಗಳು ತಲೆ ಎತ್ತಿ ನಿಂತಿವೆ.

‘ಕೆಮ್ಮಣ್ಣಿನ ಗೂಡಿನಂತಾಗಿರುವ ರಸ್ತೆಗಳು ಮಳೆ ಬಂದರೆ ಕೆಸರು ಗದ್ದೆಗಳಂತೆ ಆಗುತ್ತವೆ. ಇವುಗಳ ನಡುವೆಯೇ ವಾಹನ ಚಾಲನೆ ಮಾಡಬೇಕಾದ ಅನಿವಾರ್ಯ ಇದೆ. ಕೆಲ ವರ್ಷಗಳಿಂದ ಇದೇ ಸಮಸ್ಯೆಯಲ್ಲಿ ಮುಳುಗಿ ರೋಸಿ ಹೋಗಿದ್ದೇವೆ’ ಎನ್ನುತ್ತಾರೆ ಸ್ಥಳೀಯರು.

ಯಲಹಂಕ ನ್ಯೂಟೌನ್‌ನಿಂದ ಎಂ.ಎಸ್. ಪಾಳ್ಯ ವೃತ್ತದ ಮೂಲಕ ಗಂಗಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಸಂದೀಪ್ ಉನ್ನಿ ಕೃಷ್ಣನ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಒಳಚರಂಡಿ ಕೊಳವೆಮಾರ್ಗ ಹಾದು ಹೋಗಿರುವ ಕಡೆ ಜಲ್ಲಿ ತುಂಬಿ ರಸ್ತೆಯನ್ನು ಗಟ್ಟಿಗೊಳಿಸಲಾಗುತ್ತಿದೆ. ಈ ಭಾಗದ ಪ್ರಮುಖ ರಸ್ತೆ ಇದಾಗಿರುವ ಕಾರಣ ವಾಹನಗಳ ಸಂಚಾರ ಹೆಚ್ಚಾಗಿಯೇ ಇರುತ್ತದೆ. ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ವಾಹನಗಳ ಸಂಚಾರಕ್ಕೆ ಬಿಟ್ಟುಕೊಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಆನಂದಪುರ ಮುಖ್ಯರಸ್ತೆಯ ನಿಸರ್ಗ ಬಡಾವಣೆಯ ರಸ್ತೆಯ ಕೆಲಸ ನಡೆಯುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಅನಂತಪುರ ಮುಖ್ಯ ರಸ್ತೆಯ ನಿಸರ್ಗ ಬಡಾವಣೆಯಲ್ಲಿ ಕಾಮಗಾರಿ ನಡೆಯುತ್ತಿರುವುದು

‘ರಸ್ತೆ ಮರುನಿರ್ಮಾಣ ಕಾಮಗಾರಿ ಆರಂಭವಾಗಿದೆ’
‘ಒಳಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿ ಮುಗಿಸಿ ಜಲಮಂಡಳಿ ಒಪ್ಪಿಗೆ ನೀಡಿದ ರಸ್ತೆಗಳನ್ನು ಮರು ನಿರ್ಮಾಣ ಮಾಡಿ ಡಾಂಬರ್ ಹಾಕುವ ಕೆಲಸ ಆರಂಭಿಸಲಾಗಿದೆ’ ಎಂದು ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

‘ಮನೆ–ಮನೆಗೆ ಒಳಚರಂಡಿ ಮತ್ತು ನೀರಿನ ಸಂಪರ್ಕ ಕಲ್ಪಿಸಿದ ಬಳಿಕ ರಸ್ತೆ ನಿರ್ಮಾಣಕ್ಕೆ ಜಲಮಂಡಳಿ ಅನುಮತಿ ನೀಡುತ್ತಿದೆ. ರಸ್ತೆ ಬದಿಯ ಚರಂಡಿ, ಕಲ್ವರ್ಟ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ’ ಎಂದು ಹೇಳಿದರು.

‘ನಮ್ಮ ಕ್ಷೇತ್ರದ ಏಳು ಹಳ್ಳಿಗಳಲ್ಲಿ ವ್ಯಾಪ್ತಿಯಲ್ಲಿ ಐದು ಹಳ್ಳಿಗಳಲ್ಲಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಎರಡು ಹಳ್ಳಿಗಳಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಬೇಕಿದೆ. ಕಾಮಗಾರಿ ಮುಗಿದಿರುವ ಕಡೆ ರಸ್ತೆ ಮರು ನಿರ್ಮಾಣವನ್ನು ಹಂತ–ಹಂತವಾಗಿ ಆರಂಭಿಸಲಾಗಿದೆ’ ಎಂದು ವಿವರಿಸಿದರು.

ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯ ಅನುದಾನದ ಜೊತೆಗೆ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ ಕೋರಿದ್ದ ₹160 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ. ಎರಡು ಹಳ್ಳಿ ಹೊರತುಪಡಿಸಿ ಉಳಿದ ಕಡೆ ರಸ್ತೆ ಅಭಿವೃದ್ಧಿಗೆ ಈ ಅನುದಾನ ಸಾಕಾಗಲಿದೆ ಎಂದು ಹೇಳಿದರು.

‘ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಸ್ವಲ್ಪ ಹೆಚ್ಚಿನ ಅನುದಾನ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಕ್ಕೆ ₹500 ಕೋಟಿ ನೀಡಿ, ನಮ್ಮ ಕ್ಷೇತ್ರಗಳಿಗೆ ₹20 ಕೋಟಿಯನ್ನಷ್ಟೇ ನೀಡಲಾಗಿತ್ತು. ಕೆಲವು ಕ್ಷೇತ್ರಗಳಿಗೆ ಈಗ ಕಡಿಮೆ ಅನುದಾನ ನೀಡಿದ್ದರೂ, ಮುಂದಿನ ದಿನಗಳಲ್ಲಿ ಸರಿಪಡಿಸಬೇಕು ಎಂಬ ಆಲೋಚನೆಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು.

*
ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ತುಂಬಾ ದಿನಗಳಿಂದ ತೊಂದರೆ ಅನುಭವಿಸುತ್ತಿದ್ದೇವೆ. ಆದಷ್ಟು ಬೇಗ ಡಾಂಬರು ಹಾಕಿ ಸಂಚಾರಕ್ಕೆ ಯೋಗ್ಯ ಮಾಡಬೇಕು.
-ನರಸಿಂಹಮೂರ್ತಿ, ಅನಂತಪುರ ನಿವಾಸಿ

**
ಕಾಮಗಾರಿ ನಡೆಯುತ್ತಿರುವ ಹಳ್ಳಿಗಳು

ಹಾರೋಹಳ್ಳಿ
ನಾಗೇನಹಳ್ಳಿ
ಕೆಂಚೇನಹಳ್ಳಿ
ಅನಂತಪುರ
ಅಟ್ಟೂರು
ದೊಡ್ಡಬೆಟ್ಟಹಳ್ಳಿ
ಚಿಕ್ಕಬೆಟ್ಟಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು