ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ

ಹೊರಮಾವು ಲೇಔಟ್‌ನ ಕನಕಗಿರಿ ನಿವಾಸಿಗಳ ಕಾರ್ಯ
Last Updated 13 ಸೆಪ್ಟೆಂಬರ್ 2020, 16:02 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಬೇಸತ್ತ ಸ್ಥಳೀಯರು, ಕೊನೆಗೆ ತಾವೇ ತಮ್ಮ ಕೈಯಿಂದ ಹಣ ಖರ್ಚು ಮಾಡಿ ರಸ್ತೆ ದುರಸ್ತಿ ಮಾಡುತ್ತಿದ್ದಾರೆ.

ರಾಮಮೂರ್ತಿನಗರ ವಾರ್ಡ್‌ ಸಂಖ್ಯೆ 26ರ ಹೊರಮಾವು ಲೇಔಟ್‌ನಲ್ಲಿ ಕನಕಗಿರಿ ಮುಖ್ಯರಸ್ತೆಯನ್ನು ಸ್ಥಳೀಯರೇ ದುರಸ್ತಿ ಮಾಡಿಸುತ್ತಿದ್ದಾರೆ. ಮೊದಲು ಮುಖ್ಯರಸ್ತೆ ಸರಿ ಮಾಡಿ, ನಂತರ ಅಡ್ಡರಸ್ತೆಗಳನ್ನು ದುರಸ್ತಿ ಮಾಡಲು ನಿವಾಸಿಗಳು ಮುಂದಾಗಿದ್ದಾರೆ.

‘ಬಿಬಿಎಂಪಿಯಿಂದ ಕೆಲಸ ಮಾಡುವಾಗ ದುರಸ್ತಿ ಸರಿ ಮಾಡಿರುವುದಿಲ್ಲ. ಗುಂಡಿಗಳನ್ನೂ ಸರಿಯಾಗಿ ಮುಚ್ಚುವುದಿಲ್ಲ. ರಸ್ತೆ ಹಳ್ಳದಂತಾಗಿತ್ತು. ಮಳೆ ಬಂದಾಗ ವಾಹನಗಳು ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತಿದ್ದವು. ಬಿಬಿಎಂಪಿ ಎಂಜಿನಿಯರ್‌ಗಳು ಸ್ಪಂದಿಸಿದರೂ, ಕೆಲಸ ಮಾತ್ರ ಬೇಗ ಪ್ರಾರಂಭವಾಗಲಿಲ್ಲ. ಅದಕ್ಕೆ ನಾವೇ ದುರಸ್ತಿ ಮಾಡುವ ನಿರ್ಧಾರ ಮಾಡಿದೆವು’ ಎಂದು ಶ್ರೀ ಕನಕಗಿರಿ ನಿವಾಸಿಗಳ ಸಂಘದ ಅಧ್ಯಕ್ಷ ಸತೀಶ್‌ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಂತಾ ಕೃಷ್ಣಮೂರ್ತಿ ಫೌಂಡೇಷನ್‌ ಸಹಯೋಗದೊಂದಿಗೆ ಈ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ನಮ್ಮ ಸಂಘದ ಸದಸ್ಯರೆಲ್ಲ ಸೇರಿ ಹಣ ಸೇರಿಸಿದ್ದೇವೆ. ಸುಮಾರು ಒಂದೂವರೆ ಕಿ.ಮೀ. ಉದ್ದದ ರಸ್ತೆ ದುರಸ್ತಿಗೆ ₹1.25 ಲಕ್ಷ ಖರ್ಚು ಬಂದಿದೆ’ ಎಂದು ಅವರು ಹೇಳಿದರು.

‘ವಾಹನಗಳನ್ನು ಓಡಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಈಗ ಪಾಲಿಕೆ ಸದಸ್ಯರ ಅಧಿಕಾರಾವಧಿ ಬೇರೆ ಮುಗಿದಿದೆ. ಅಧಿಕಾರಿಗಳನ್ನು ಕಾಯುತ್ತಾ ಕುಳಿತರೆ ಕೆಲಸ ಆಗುವುದಿಲ್ಲ ಎಂಬ ಕಾರಣದಿಂದ ನಾವೇ ಈ ನಿರ್ಧಾರ ಮಾಡಿದೆವು’ ಎಂದು ಅವರು ಹೇಳಿದರು.

ಹಿರಿಯ ನಾಗರಿಕರೂ ಸೇರಿದಂತೆ ಸಂಘದ ಎಲ್ಲ ಸದಸ್ಯರೂ ದುರಸ್ತಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರಸ್ತೆಯಲ್ಲಿನ ಕೆಸರನ್ನು ತೆರವುಗೊಳಿಸುವ, ಅದನ್ನು ಸಾಗಿಸುವ, ಜಲ್ಲಿ ಕಲ್ಲುಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT