ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈಟ್‌ ಟಾಪಿಂಗ್‌: ಬೃಹತ್‌ ಮರಗಳ ಮೂಲ ಬೇರಿಗೆ ಪೆಟ್ಟು

Published : 26 ಸೆಪ್ಟೆಂಬರ್ 2024, 23:53 IST
Last Updated : 26 ಸೆಪ್ಟೆಂಬರ್ 2024, 23:53 IST
ಫಾಲೋ ಮಾಡಿ
Comments

ಬೆಂಗಳೂರು: ಎನ್‌.ಆರ್‌. ಕಾಲೊನಿ ವೃತ್ತದಿಂದ ನೆಟ್ಟಕಲ್ಲಪ್ಪ ವೃತ್ತದವರೆಗೆ ಹಲವು ವರ್ಷಗಳ ಬೃಹತ್‌ ಮರಗಳ ಮೂಲ ಬೇರುಗಳನ್ನು ಜಲಮಂಡಳಿ ಹಾಗೂ ಬಿಬಿಎಂಪಿ ಕತ್ತರಿಸುತ್ತಿವೆ. ಇದರಿಂದ ಬೃಹತ್‌ ಮರಗಳು ಬೀಳುವ ಆತಂಕ ಎದುರಾಗಿದೆ.

ಈ ರಸ್ತೆಯಲ್ಲಿ ಬಿಬಿಎಂಪಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಸುತ್ತಿದ್ದು, ಜಲಮಂಡಳಿಯು ಒಳಚರಂಡಿ ಕೊಳವೆ ಮಾರ್ಗವನ್ನು ಅಳವಡಿಸುತ್ತಿದೆ. ದೊಡ್ಡ ಪೈಪ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದಕ್ಕಾಗಿ ರಸ್ತೆ ಅಗೆಯಲಾಗುತ್ತಿದೆ. ಈ ಕಾಮಗಾರಿಯಲ್ಲಿ ರಸ್ತೆಯ ಬದಿಗಳಲ್ಲಿರುವ ಬೃಹತ್‌ ಮರಗಳ ಬೇರುಗಳನ್ನು ಕತ್ತರಿಸಲಾಗುತ್ತಿದೆ.

‘ಮಳೆ ಮರ ಸೇರಿದಂತೆ ಹಲವು ಬೃಹತ್‌ ಮರಗಳು ಈ ರಸ್ತೆಯಲ್ಲಿದ್ದು, ಅವುಗಳ ಬೇರುಗಳಿಗೆ ಹಾನಿ ಮಾಡಲಾಗಿದೆ. ಕೆಲವು ಕಡೆ ದೊಡ್ಡ ಬೇರುಗಳನ್ನು ಕಡಿದು ಹಾಕಲಾಗಿದೆ. ಇದರಿಂದ ಬೇರು ಸಡಿಲಗೊಂಡು, ಮರಗಳು ಬೀಳುವ ಆತಂಕ ಎದುರಾಗಿದೆ’ ಎಂದು ಸ್ಥಳೀಯ ವ್ಯಾಪಾರಿ ಸಂತೋಷ್‌ ದೂರಿದರು.

‘ಇಲ್ಲಿರುವ ಮರಗಳು ಹಲವು ವರ್ಷಗಳಿಂದ ತಂಪನೆಯ ವಾತಾವರಣ ನೀಡುತ್ತಿವೆ. ಬೇಸಿಗೆಯಲ್ಲೂ ಈ ರಸ್ತೆ ತಂಪಾಗಿಯೇ ಇರುತ್ತದೆ. ಆದರೆ, ವೈಟ್‌ ಟಾಪಿಂಗ್‌ ಕಾಮಗಾರಿಯಿಂದ ಕಾಂಕ್ರೀಟೀಕರಣವಾಗುತ್ತಿದೆ. ಪೈಪುಗಳನ್ನು ಅಳವಡಿಸಲು ಬೇರುಗಳನ್ನು ಕತ್ತರಿಸಿರುವುದರಿಂದ ಮರಗಳು ಒಣಗುವ ಸಾಧ್ಯತೆಯೂ ಇದೆ. ಇದನ್ನೆಲ್ಲ ಮೊದಲೇ ಗಮನಿಸಿಕೊಂಡು ಬಿಬಿಎಂಪಿ ಅಥವಾ ಜಲಮಂಡಳಿಯವರು ಕಾಮಗಾರಿ ನಡೆಸಬೇಕಿತ್ತು. ಆದರೆ, ಇವರಿಗೆಲ್ಲ ಮರಗಳು, ಪರಿಸರ ಎಂದರೆ ನಿರ್ಲಕ್ಷ್ಯ’ ಎಂದು ಸ್ಥಳೀಯರಾದ ಸತ್ಯನಾರಾಯಣ ಆರೋಪಿಸಿದರು.

‘ಎನ್‌.ಆರ್. ಕಾಲೊನಿಯಿಂದ ನೆಟ್ಟಕಲ್ಲಪ್ಪ ವೃತ್ತದವರೆಗೆ ವೈಟ್‌ ಟಾಪಿಂಗ್ ಕಾಮಗಾರಿ ಆರಂಭವಾದ ಸಂದರ್ಭದಲ್ಲೇ ಇಲ್ಲಿನ ಬೃಹತ್‌ ಮರಗಳ ಬಗ್ಗೆ ಕಾಳಜಿ ವಹಿಸುವಂತೆ ಎಂಜಿನಿಯರ್‌ಗಳಿಗೆ ಮನವಿ ಮಾಡಲಾಗಿತ್ತು. ಆದರೂ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದ ಮರಗಳ ಬೇರುಗಳಿಗೆ ಹಾನಿ ಮಾಡಲಾಗಿದೆ. ಇನ್ನುಳಿದ ಮರಗಳ ಬೇರುಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಸಬೇಕು’ ಎಂದು ತ್ಯಾಗರಾಜನಗರದ ಅಶೋಕ ಆಗ್ರಹಿಸಿದರು.

‘ಮರಗಳಿಗೆ ಹಾನಿಯಾಗದಂತೆ ಕ್ರಮ’

‘ಒಳಚರಂಡಿ ವ್ಯವಸ್ಥೆಗಾಗಿ ದೊಡ್ಡ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ಆಳವಾಗಿ ಅಗೆಯಲಾಗಿದೆ. ಅಡ್ಡಾದಿಡ್ಡಿ ಪೈಪ್‌ಗಳನ್ನು ಅಳವಡಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ಕಡೆ ಸಣ್ಣ ಬೇರುಗಳನ್ನು ಕತ್ತರಿಸಲಾಗಿದೆ. ದೊಡ್ಡ ಬೇರುಗಳಿಗೆ ಹಾನಿ ಮಾಡಿಲ್ಲ. ಬೇರುಗಳ ಕೆಳಗೆ ಅಥವಾ ಮಧ್ಯದಲ್ಲಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಗರಗಸ ಅಥವಾ ಕೊಡಲಿಯಿಂದ ಬೇರುಗಳನ್ನು ಕತ್ತರಿಸದೆ ಅನಿವಾರ್ಯವಿದ್ದ ಕಡೆ ಡ್ರಿಲ್‌ ಮಾಡಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಸುತ್ತಲೂ ಮಣ್ಣನ್ನು ಹಾಕಲಾಗಿದ್ದು ಮರಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದೇವೆ’ ಎಂದು ಕಾಮಗಾರಿಯ ಮೇಲ್ವಿಚಾರಣೆ ವಹಿಸಿರುವ ಎಂಜಿನಿಯರ್‌ಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT