ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ: ಮೂರು ಹೊತ್ತು ಅನ್ನ ದಾಸೋಹ

ಹಸಿದವರ ನೋವಿಗೆ ಸ್ಪಂದಿಸಿದ ಮುನಿರತ್ನ * ಬಡವರ, ಮಧ್ಯಮವರ್ಗದವರ ಕಣ್ಣೀರು ಒರೆಸಲು ಪಣ
Last Updated 26 ಏಪ್ರಿಲ್ 2020, 22:43 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ತಿಂಗಳುಗಟ್ಟಲೆ ಕೆಲಸವಿಲ್ಲದೇ ಕೈಯಲ್ಲಿ ಕಾಸಿಲ್ಲದೆ ಅರೆ ಹೊಟ್ಟೆಯಲ್ಲಿರಬೇಕಾದ ಪರಿಸ್ಥಿತಿ ಎದುರಿಸುತ್ತಿರುವ ಕಾರ್ಮಿಕರು, ಟೈಲರ್‌ಗಳು, ಕ್ಯಾಬ್‌ ಚಾಲಕರು, ಗಾರ್ಮೆಂಟ್ಸ್‌ ಕಾರ್ಖಾನೆಗಳ ನೌಕರರು, ಮನೆ ಮಂದಿಗೆ ಊಟ ಬೇಯಿಸಿ ಹಾಕಲು ದಿನಸಿ ಇಲ್ಲವಲ್ಲಾ ಎಂದು ಚಡಪಡಿಸುವ ಮಹಿಳೆಯರು...

ಕೊರೊನಾ ನಿಯಂತ್ರಣ ಸಲುವಾಗಿ ಸರ್ಕಾರ ಹೇರಿರುವ ಲಾಕ್‌ಡೌನ್‌ ಬಡವರ, ಮಧ್ಯಮ ವರ್ಗದವರ ಪಾಲಿಗೆ ತಂದಿಟ್ಟ ಸಂಕಟಗಳು ಅಷ್ಟಿಷ್ಟಲ್ಲ. ಇಂತಹವರ ಅಳಲುಗಳನ್ನು ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಆಲಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಫೋನ್‌ಇನ್‌ ಕಾರ್ಯಕ್ರಮ ಈ ಕ್ಷೇತ್ರದ ಜನರು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಕಲ್ಪಿಸಿತು. ಪ್ರತಿಯೊಬ್ಬರ ಕಷ್ಟಗಳನ್ನು ತಾಳ್ಮೆಯಿಂದ ಆಲಿಸಿದ ಮುನಿರತ್ನ ಹಸಿದವರಿಗೆ ಆಹಾರ ಸಾಮಗ್ರಿಗಳ ಕಿಟ್‌ ತಲುಪಿಸುವ ವ್ಯವಸ್ಥೆ ಮಾಡಿದರು.

ಕ್ಷೇತ್ರದ ನೀರಿನ ಸಮಸ್ಯೆ, ಮೊನ್ನೆ ಸುರಿದ ಮಳೆಯಿಂದ ಸೃಷ್ಟಿಯಾದ ಸಮಸ್ಯೆಗಳು, ಅರ್ಧಕ್ಕೆ ನಿಂತ ಕಾಮಗಾರಿಗಳಿಂದ ಆಗಿರುವ ಸಮಸ್ಯೆಗಳನ್ನೂ ಕ್ಷೇತ್ರದ ಜನರು ಹೇಳಿಕೊಂಡರು. ಇವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಮುನಿರತ್ನ ಭರವಸೆ ನೀಡಿದರು.

ಸ್ನಾತಕೋತ್ತರ ಪದವಿವರೆಗೆ ಕಲಿತರೂ ಕೆಲಸ ಸಿಗದ ಕೆಲವರು ಉದ್ಯೋಗ ಕೊಡಿಸುವಂತೆ ಕೋರಿದರು. ಲಾಕ್‌ಡೌನ್‌ ಮುಗಿದು ಜನಜೀವನ ಸಹಜ ಸ್ಥಿತಿಗೆ ಬಂದ ಬಳಿಕ ತಮ್ಮನ್ನು ಖುದ್ದಾಗಿ ಭೇಟಿ ಮಾಡುವಂತೆ ಮುನಿರತ್ನ ಸಲಹೆ ನೀಡಿದರು.

ಬಿರುಬೇಸಿಗೆಯಲ್ಲಿ ಕಾಣಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆಯೂ ಕೆಲವರು ಗಮನ ಸೆಳೆದರು. ಈ ಸಮಸ್ಯೆಯನ್ನು ಸ್ಥಳೀಯ ಪಾಲಿಕೆ ಸದಸ್ಯರ ನೆರವಿನಿಂದ ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ಮುನಿರತ್ನ ಆಶ್ವಾಸನೆ ನೀಡಿದರು.

‘ರಾಜೀನಾಮೆ ಫಲದಿಂದ ಒಲಿದ ಮೂಲಸೌಕರ್ಯ’
ಆರ್.ಆರ್‌.ನಗರದ ನಂಜುಂಡಿ ಅವರ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ‘ಆರ್‌.ಆರ್‌.ನಗರದಲ್ಲಿ ಹಿರಿಯ ನಾಗರಿಕರ ಸಂಘಕ್ಕೆ ಕಟ್ಟಡ ಕಟ್ಟಿಸಿದ್ದು ಮಾತ್ರವಲ್ಲ, ಈ ಪ್ರದೇಶದಲ್ಲಿ ಇನ್ನೂ ಅನೇಕ ಮೂಲಸೌಕರ್ಯಗಳು ಬರಲಿವೆ. ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆ ಅಡಿ ₹ 80 ಕೋಟಿ ವೆಚ್ಚದಲ್ಲಿ ಆರ್‌.ಆರ್‌.ನಗರದ ಆರ್ಚ್‌ ಬಳಿ ಸಿಗ್ನಲ್‌ ಫ್ರೀ ಕಾರಿಡಾರ್‌ ಕಾಮಗಾರಿ ನಡೆಯಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಒಂದೂವರೆ ವರ್ಷದೊಳಗೆ ಈ ಆರ್ಚ್‌ ಬಳಿ ಸಂಚಾರ ದಟ್ಟಣೆ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ’ ಎಂದು ಮುನಿರತ್ನ ಹೇಳಿದರು.

‘ಈ ಕಾಮಗಾರಿ ಮಂಜೂರಾಗುವುದಕ್ಕೆ ಕಾರಣ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡಿದೆ. ಇಲ್ಲದೇ ಹೋಗಿದ್ದರೆ ಇಂತಹ ಅನೇಕ ಕಾಮಗಾರಿಗಳಿಗೆ ಅನುದಾನ ಮಂಜೂರು ಆಗುತ್ತಲೇ ಇರಲಿಲ್ಲ. ಕ್ಷೇತ್ರದ ಪ್ರಮುಖ ಕಾಮಗಾರಿಗಳಿಗೆ ಹೊಸ ಸರ್ಕಾರ ಅನುದಾನ ಒದಗಿಸಿತು’ ಎಂದು ಮುನಿರತ್ನ ಸ್ಪಷ್ಟಪಡಿಸಿದರು.

‘ಅನ್ನಪೂರ್ಣೇಶ್ವರಿ ದೇವಸ್ಥಾನ ಬಳಿ ಸಿಗ್ನಲ್‌ ಫ್ರೀ ಕಾರಿಡಾರ್‌’
ಜ್ಞಾನಭಾರತಿ ವಾರ್ಡ್‌ನಲ್ಲಿ ಡಿ–ಗುಂಪಿನ ಕಾಲೊನಿ ಅನ್ನಪೂರ್ಣೇಶ್ವರ ದೇವಸ್ಥಾನ ಬಳಿ ಬಳಿ ವರ್ತುಲ ರಸ್ತೆಯನ್ನು ದಾಟಲು ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮನಹಳ್ಳಿ– ಕೆಂಗೇರಿ ಕಡೆಗೆ ಹೋಗುವವರೂ ಇಲ್ಲಿ ಸುತ್ತಿ ಬಳಸಿ ಸಾಗಬೇಕಿದೆ ಎಂದು ಸ್ಥಳೀಯ ನಿವಾಸಿ ರೂಪೇಶ್‌ ಸಮಸ್ಯೆ ಹೇಳಿಕೊಂಡರು.

‘ಇಲ್ಲಿ ಸಿಗ್ನಲ್‌ ಫ್ರೀ ಕಾರಿಡಾರ್‌ಗೆ ₹ 35 ಕೋಟಿ ಅನುದಾನ ಮಂಜೂರಾಗಿದೆ. ಎರಡು ವರ್ಷದಲ್ಲಿ ಈ ಜಂಕ್ಷನ್‌ ಸಿಗ್ನಲ್‌ ಫ್ರೀ ಆಗಲಿದೆ’ ಎಂದು ಮುನಿರತ್ನ ಆಶ್ವಾಸನೆ ನೀಡಿದರು.

‘ಕೆಂಗೇರಿ– ಹೆಬ್ಬಾಳ–ವಿಮಾನ ನಿಲ್ದಾಣಕ್ಕೆ ಮೆಟ್ರೊ ನನ್ನ ಕನಸು’
‘ಕೆಂಗೇರಿಯಿಂದ ಅಂಬೇಡ್ಕರ್‌ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ, ಸುಮನಹಳ್ಳಿ, ರಾಜ್‌ಕುಮಾರ್‌ ಸಮಾಧಿ, ಗೊರಗುಂಟೆ ಪಾಳ್ಯ, ಎಂಇಎಸ್‌ ರಸ್ತೆ, ಹೆಬ್ಬಾಳ ಮೂಲಕ ವಿಮಾನನಿಲ್ದಾಣಕ್ಕೆ ‘ನಮ್ಮ ಮೆಟ್ರೊ’ ಯೋಜನೆ ಜಾರಿಗೆ ತರಬೇಕೆಂಬುದು ನನ್ನ ಬಲು ದೊಡ್ಡ ಕನಸು. ನಿಮ್ಮ ಆಶೀರ್ವಾದದಿಂದ ಮತ್ತೆ ಶಾಸಕನಾಗಿ ಗೆದ್ದುಬಂದರೆ ಖಂಡಿತಾ ಈ ಕನಸನ್ನು ಈಡೇರಿಸುತ್ತೇನೆ’ ಎಂದು ಮುನಿರತ್ನ ಹೇಳಿದರು. ಸುಮನಹಳ್ಳಿಯ ಹನುಮಯ್ಯ ಅವರ ಕರೆಗೆ ಉತ್ತರಿಸಿದ ಅವರು, ‘ಈ ಮೆಟ್ರೊ ಮಾರ್ಗ ನಿರ್ಮಾಣವಾದರೆ ಈ ಕ್ಷೇತ್ರದ ಬಹುತೇಕ ಸಂಚಾರ ಸಮಸ್ಯೆಗಳೆಲ್ಲವೂ ಬಗೆಹರಿಯಲಿವೆ. ಈ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇವೆ. ಈ ಕನಸನ್ನು ನನಸು ಮಾಡಿಯೇ ಮಾಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾಯಂಡಹಳ್ಳಿ ಜಂಕ್ಷನ್‌ ಸಮಸ್ಯೆ ನಿವಾರಣೆ’

‘ನಾಯಂಡಹಳ್ಳಿ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಕಡೆಗೆ ಹೋಗಲು ಸಮಸ್ಯೆ ಇದೆ. ಹೊಸಕೆರೆಹಳ್ಳಿ ಬಳಿ ಬಲ ತಿರುವು ಪಡೆವಾಗ ರಿಂಗ್‌ ರಸ್ತೆ ದಾಟಲು ಸರ್ವಿಸ್ ರಸ್ತೆ ಇಲ್ಲ. ಸೇತುವೆಯನ್ನು ಎಲ್ಲಿ ನಿರ್ಮಿಸಬೇಕಿತ್ತೋ ಅಲ್ಲಿಗಿಂತ ಸ್ವಲ್ಪ ಮುಂದಕ್ಕೆ ನಿರ್ಮಿಸಿದ್ದಾರೆ. ಇಲ್ಲಿ ನಾವು ಅನಗತ್ಯವಾಗಿ ಮೈಸೂರು ರಸ್ತೆಯ ಕೆಂಗೇರಿವರೆಗೆ ಸುತ್ತಿಕೊಂಡು ಹೋಗಬೇಕು. ನೈಸ್‌ ರಸ್ತೆಯಲ್ಲಿ ಹೋದರೆ ಟೋಲ್‌ ಕಟ್ಟಬೇಕು. ಈ ಸಮಸ್ಯೆಯಿಂದ ಮುಕ್ತಿ ನೀಡಿ’ ಎಂದು ಗೋಪಾಲ್‌ ಕೋರಿದರು.

‘ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಕಾಮಗಾರಿಗೆ ಟೆಂಡರ್‌ ಕರೆದು ಏಜೆನ್ಸಿ ನಿಗದಿಪಡಿಸಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದ ಕಡತಕ್ಕೆ ಸಚಿವ ಸಂಪುಟದ ಒಪ್ಪಿಗೆ ಅಗತ್ಯವಿದ್ದು, ಅದೂ ಶೀಘ್ರವೇ ಸಿಗಲಿದೆ. ಕಾಮಗಾರಿ ಶೀಘ್ರವೇ ಆರಂಭವಾಗಲಿದೆ’ ಎಂದು ಮುನಿರತ್ನ ಭರವಸೆ ನೀಡಿದರು. ‘ಉಳ್ಳಾಲು ಜಂಕ್ಷನ್‌ ಅನ್ನು ಕೂಡಾ ಸಿಗ್ನಲ್‌ ಫ್ರೀ ಆಗಲಿದೆ. ಇದಕ್ಕಾಗಿ ವಿಶ್ವವಿದ್ಯಾಲಯದ ಜಾಗ ಪಡೆಯಲಿದ್ದೇವೆ’ ಎಂದರು.

‘ನಿತ್ಯ 50 ಸಾವಿರ ಮಂದಿಗೆ ಮೂರು ಹೊತ್ತಿನ ಊಟ’
ರಾಜರಾಜೇಶ್ವರ ನಗರ ಕ್ಷೇತ್ರದಲ್ಲಿ ಹಸಿದ ಹೊಟ್ಟೆಯಲ್ಲಿರುವ 50 ಸಾವಿರಕ್ಕೂ ಅಧಿಕ ನಿರಾಶ್ರಿತರಿಗೆ ಹಾಗೂ ಬಡವರಿಗೆ ದಿನದ ಮೂರು ಹೊತ್ತು ನಿತ್ಯ ಊಟ ಪೂರೈಸಲಾಗುತ್ತಿದೆ’ ಎಂದು ಮುನಿರತ್ನ ತಿಳಿಸಿದರು. ‘ಮೊದಲ ಕಂತಿನಲ್ಲಿ 20 ಸಾವಿರ ಮಂದಿಗೆ ಈಗಾಗಲೇ ಆಹಾರ ಸಾಮಗ್ರಿಗಳ ಕಿಟ್‌ ಪೂರೈಸಿದ್ದೇವೆ. ನಾಲ್ವರು ಸದಸ್ಯರು ಇರುವ ಕುಟುಂಬಕ್ಕೆ ತಲಾ 25 ಕೆ.ಜಿ. ಅಕ್ಕಿ, 2 ಕೆ.ಜಿ.ಎಣ್ಣೆ, 2 ಕೆ.ಜಿ. ಬೇಳೆ, 1 ಕೆ.ಜಿ. ಉಪ್ಪು, 1 ಕೆ.ಜಿ.ಸಕ್ಕರೆ, ತರಕಾರಿ ಸಾಬೂನುಗಳನ್ನು ಒಳಗೊಂಡ ಕಿಟ್‌ ವಿತರಿಸಿದ್ದೇವೆ. ಜನರ ಬೇಡಿಕೆ ಮೇಲೆ ಮೊಟ್ಟೆ ವಿತರಣೆಯನ್ನೂ ಆರಂಭಿಸಲಿದ್ದೇವೆ’ ಎಂದು ಅವರು ತಿಳಿಸಿದರು. ದಾಸೋಹ ಸೇವೆಗೆ 700 ಮಂದಿ ಕಾಯಕ ‘ಊಟ ತಯಾರಿಸುವುದಕ್ಕಾಗಿಯೇ ಕೇಂದ್ರೀಕೃತ ಅಡುಗೆ ಮನೆಯನ್ನು ಸ್ಥಾಪಿಸಲಾಗಿದೆ. ಊಟ ತಯಾರಿಸಲು, ಪೊಟ್ಟಣಗಳನ್ನು ನಿರ್ಮಿಸಿ ವಿತರಿಸಲೆಂದೇ 700 ಮಂದಿಯನ್ನು ನೇಮಿಸಿಕೊಂಡಿದ್ದೇವೆ’ ಎಂದು ಮುನಿರತ್ನ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ಮುನಿರತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT