ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ: ದ್ವಿಚಕ್ರ ವಾಹನಕ್ಕೆ ₹3.04 ಲಕ್ಷ ದಂಡ

ಪ್ರಕರಣ ದಾಖಲಿಸುವ ಎಚ್ಚರಿಕೆ l ಬಾಕಿ ಪಾವತಿಗೆ ಗಡುವು
Published 12 ಫೆಬ್ರುವರಿ 2024, 0:30 IST
Last Updated 12 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪದಡಿ ದ್ವಿಚಕ್ರ ವಾಹನವೊಂದರ ಮೇಲೆ ₹ 3.04 ಲಕ್ಷ ದಂಡ ವಿಧಿಸಲಾಗಿದ್ದು, ಬಾಕಿ ದಂಡ ಪಾವತಿಗೆ ಪೊಲೀಸರು ಗಡುವು ನೀಡಿದ್ದಾರೆ.

‘ಸುಧಾಮನಗರ ನಿವಾಸಿಯೊಬ್ಬರ ಹೆಸರಿನಲ್ಲಿರುವ ಆಕ್ಟಿವ್ ಹೊಂಡಾ ದ್ವಿಚಕ್ರ ವಾಹನದ (ಕೆಎ 05 ಕೆಎಫ್ 7969) ಮೇಲೆ ₹ 3.04 ಲಕ್ಷ ದಂಡ ಬಾಕಿ ಇದೆ. ಇದರ ವಸೂಲಿಗಾಗಿ ನಿವಾಸಿಗೆ ಮನೆಗೆ ಹೋಗಿ ನೋಟಿಸ್ ನೀಡಲಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೆಲ್ಮೆಟ್ ರಹಿತ ಚಾಲನೆ, ಸವಾರಿ ವೇಳೆ ಮೊಬೈಲ್‌ ಬಳಕೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ₹50 ಸಾವಿರ ಮೇಲ್ಪಟ್ಟು ದಂಡ ಬಾಕಿ ಉಳಿಸಿಕೊಂಡವರ ಮನೆಗಳಿಗೆ ಹೋಗಿ, ದಂಡ ವಸೂಲಿ ಮಾಡಲಾಗುತ್ತಿದೆ. ಇದರ ಭಾಗವಾಗಿ, ಸುಧಾಮನಗರ ನಿವಾಸಿ ಮನೆಗೂ ಹೋಗಿ ಬರಲಾಗಿದೆ’ ಎಂದು ತಿಳಿಸಿದರು.

ದ್ವಿಚಕ್ರ ವಾಹನ ಜಪ್ತಿಗೆ ಒಪ್ಪದ ಪೊಲೀಸರು: ‘ದ್ವಿಚಕ್ರ ವಾಹನ ಮಾಲೀಕನ ಮನೆಗೆ ಹೋಗಿದ್ದ ಪೊಲೀಸರು, ದಂಡ ತುಂಬುವಂತೆ ಹೇಳಿದ್ದರು. ಅಷ್ಟು ಹಣವಿಲ್ಲವೆಂದು ಹೇಳಿದ್ದ ಮಾಲೀಕ, ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ಕೊಂಡೊಯ್ಯುವಂತೆ ಹೇಳಿದ್ದರು. ಆದರೆ, ಪೊಲೀಸರು ಅದಕ್ಕೆ ಒಪ್ಪಿಲ್ಲ. ದಂಡ ಪಾವತಿ ಕಡ್ಡಾಯ. ಇಲ್ಲದಿದ್ದರೆ, ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸವಾರ, ದಂಡ ಪಾವತಿಸಲು ಸಮಯ ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ದಂಡ ಬಾಕಿ ಉಳಿಸಿಕೊಂಡಿರುವ ಜನರು, ಕೂಡಲೇ ದಂಡ ಪಾವತಿ ಮಾಡಬೇಕು. ಇಲ್ಲದಿದ್ದರೆ, ಪೊಲೀಸರು ಮನೆ ಬಾಗಿಲಿಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ’ ಎಂದು ತಿಳಿಸಿದರು.

ಜನಸ್ಪಂದನದಲ್ಲಿ ಸಚಿವರ ಅವಹೇಳನ: ಚಾಲಕ ಬಂಧನ

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿ ಮುನೇಗೌಡ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ. ‘ವಿಧಾನಸೌಧ ಎದುರು ಫೆ. 8ರಂದು ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿದ್ದ ಘಟನೆ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುನೇಗೌಡನನ್ನು ಶನಿವಾರ ಬಂಧಿಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ದೊಡ್ಡಬಳ್ಳಾಪುರದ ಮುನೇಗೌಡ ವಾಹನ ಚಾಲಕ. ತನ್ನ ಚಾಲನಾ ಪರವಾನಗಿ (ಡಿ.ಎಲ್) ನವೀಕರಣಕ್ಕಾಗಿ ಆರ್‌ಟಿಒ ಬಳಿ ಅರ್ಜಿ ಸಲ್ಲಿಸಿದ್ದ. ನಿಗದಿತ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದ್ದ. ಆದರೆ ಹಲವು ದಿನವಾದರೂ ಡಿ.ಎಲ್ ಕೈಗೆ ಸಿಕ್ಕಿರಲಿಲ್ಲ.’ ‘ಡಿ.ಎಲ್ ನೀಡುವಂತೆ ಹಲವು ಬಾರಿ ಆರ್‌ಟಿಒ ಕಚೇರಿ ಅಧಿಕಾರಿಗಳನ್ನು ಕೋರಿದ್ದ. ಆದರೆ ಸ್ಪಂದನೆ ಸಿಕ್ಕಿರಲಿಲ್ಲ. ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದರು. ಇದರಿಂದ ನೊಂದ ಮುನೇಗೌಡ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಬಂದಿದ್ದ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಅಹವಾಲು ಆಲಿಸಿರಲಿಲ್ಲ. ಮತ್ತಷ್ಟು ಸಿಟ್ಟಾದ ಮುನೇಗೌಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ‘ವ್ಯವಸ್ಥೆಯಿಂದ ನೊಂದು ತಾಳ್ಮೆ ಕಳೆದುಕೊಂಡು ಅವಹೇಳನಕಾರಿಯಾಗಿ ಮಾತನಾಡಿದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT