ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ರಷ್ಯಾದ ಲಸಿಕೆ ಸಿದ್ಧ; ಆರೋಗ್ಯ ಸಚಿವಾಲಯದ ಘೋಷಣೆ

ಬುಧವಾರ ನೋಂದಣಿಗೆ ಸಿದ್ಧತೆ
Last Updated 10 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌–19ಗೆ ಲಸಿಕೆ ಅಭಿವೃದ್ಧಿಪಡಿಸಿದ್ದೇವೆ. ಅದನ್ನು ಆಗಸ್ಟ್‌ 12ರಂದು ನೋಂದಣಿ ಮಾಡುತ್ತೇವೆ’ ಎಂದು ರಷ್ಯಾ ಆರೋಗ್ಯ ಸಚಿವಾಲಯ ಹೇಳಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ನ್ಯೂಸ್ ವರದಿ ಮಾಡಿದೆ. ನೋಂದಣಿ ಆದರೆ, ಇದು ಜಗತ್ತಿನ ಮೊದಲ ಕೋವಿಡ್‌–19 ಲಸಿಕೆ ಎನಿಸಿಕೊಳ್ಳಲಿದೆ.

‘ಪ್ರತಿಕಾಯಗಳನ್ನು ಆಧರಿಸಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಎರಡು ಹಂತದ ಕ್ಲಿನಿಕಲ್ ಟ್ರಯಲ್ (ಮನುಷ್ಯನ ಮೇಲೆ ಪ್ರಯೋಗ) ಈಗಾಗಲೇ ಮುಗಿದಿವೆ. ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಜೂನ್ 18ಕ್ಕೆ ಅಂತ್ಯವಾಗಿದೆ. ಈ ಟ್ರಯಲ್‌ಗೆ 38 ಆರೋಗ್ಯವಂತ ಸ್ವಯಂಸೇವಕರನ್ನು ಬಳಸಿಕೊಳ್ಳಲಾಗಿತ್ತು. ಲಸಿಕೆ ನೀಡಿದ ನಂತರ ಅವರ ದೇಹದಲ್ಲಿ ಕೋವಿಡ್‌ ಪ್ರತಿಕಾಯಗಳು ಅಭಿವೃದ್ಧಿಯಾಗಿದ್ದವು’ ಎಂದು ರಷ್ಯಾ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

‘ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಕೋವಿಡ್ ರೋಗಿಗಳಿಗೆ ಲಸಿಕೆ ನೀಡಲಾಗಿತ್ತು. ಎಲ್ಲರಲ್ಲೂ ಪ್ರತಿಕಾಯಗಳು ಅಭಿವೃದ್ಧಿಯಾಗಿ, ಕೊರೊನಾವೈರಸ್‌ಗಳ ಸಂಖ್ಯೆ ಕ್ಷೀಣಿಸಿತ್ತು. ಈಗ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

‘ಈ ವಾರದಲ್ಲಿ ವೈದ್ಯಕೀಯ ಸಿಬ್ಬಂದಿ, ಕೋವಿಡ್‌ ಯೋಧರಿಗೆ ಲಸಿಕೆ ನೀಡಲಾಗುತ್ತದೆ. ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳ ವರದಿಯನ್ನು ತಜ್ಞರ ಸಮಿತಿ ಪರಿಶೀಲಿಸುತ್ತಿದೆ. ಮಂಗಳವಾರ ವರದಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್ 12ರಂದು ಲಸಿಕೆಯನ್ನು ನೋಂದಣಿ ಮಾಡಿಸಲು ನಿರ್ಧರಿಸಿದ್ದೇವೆ’ ಎಂದು ಆರೋಗ್ಯ ಸಚಿವ ಮಿಖೇಲ್ ಮಿರಶಾಖೋ ಹೇಳಿದ್ದಾರೆ. ಆಗಸ್ಟ್ ಮೂರನೇ ವಾರದಲ್ಲಿ ತುರ್ತು ಅಗತ್ಯದ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಲಸಿಕೆಗಳ ತಯಾರಿಕೆ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ರೋಗಿಗಳಿಗೆ ನೀಡಲಾಗುತ್ತದೆ ಎಂದು ರಷ್ಯಾ ಆರೋಗ್ಯ ಸಚಿವಾಲಯವು ಹೇಳಿದೆ.

2021ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಆನಂತರ ದೇಶದ ಎಲ್ಲಾ ನಾಗರಿಕರಿಗೆ ಲಸಿಕೆಗಳನ್ನು ನೀಡಲಾಗುತ್ತದೆ. ಲಸಿಕೆ ಕಾರ್ಯಕ್ರಮಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.

ದೇಶದಾದ್ಯಂತ ಲಸಿಕೆ ಕಾರ್ಯಕ್ರಮ
ಆಗಸ್ಟ್ ಮೂರನೇ ವಾರದಲ್ಲಿ ತುರ್ತು ಅಗತ್ಯದ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಲಸಿಕೆಗಳ ತಯಾರಿಕೆ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ರೋಗಿಗಳಿಗೆ ನೀಡಲಾಗುತ್ತದೆ ಎಂದು ರಷ್ಯಾ ಆರೋಗ್ಯ ಸಚಿವಾಲಯವು ಹೇಳಿದೆ.

2021ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಆನಂತರ ದೇಶದ ಎಲ್ಲಾ ನಾಗರಿಕರಿಗೆ ಲಸಿಕೆಗಳನ್ನು ನೀಡಲಾಗುತ್ತದೆ. ಲಸಿಕೆ ಕಾರ್ಯಕ್ರಮಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.

ಆಕ್ಷೇಪಗಳು
ರಷ್ಯಾ ತನ್ನ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್‌ನ ಮಾಹಿತಿ ಮತ್ತು ದತ್ತಾಂಶವನ್ನು ಬಹಿರಂಗಪಡಿಸಿಲ್ಲ. ಅಲ್ಲದೆ, ಟ್ರಯಲ್ ಅನ್ನು ತರಾತುರಿಯಲ್ಲಿ ಪೂರ್ಣಗೊಳಿಸಿದೆ. ಲಸಿಕೆಯ ಅಭಿವೃದ್ಧಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಪಾಲಿಸಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ. ‘ಲಸಿಕೆಗಳನ್ನು ಕ್ಲಿನಿಕಲ್ ಟ್ರಯಲ್‌ಗೆ ಒಳಪಡಿಸಲಾಗಿದೆಯೇ ಇಲ್ಲವೇ ಎಂಬುದೇ ಸ್ಪಷ್ಟವಾಗಿಲ್ಲ. ಲಸಿಕೆಗಳನ್ನು ಜನರಿಗೆ ನೀಡುವ ಮುನ್ನ, ಟ್ರಯಲ್ ನಡೆಸಿರುತ್ತಾರೆ ಎಂದು ಭಾವಿಸಿದ್ದೇನೆ. ನಡೆಸದೇ ಇದ್ದರೆ, ಇದರಿಂದ ಅಪಾಯವೇ ಹೆಚ್ಚು’ ಎಂದು ಅಮೆರಿಕದ ಸೋಂಕುರೋಗ ತಜ್ಞ ಡಾ.ಆ್ಯಂಟನಿ ಫೌಸಿ ಎಂಬುವವರು ಕಳವಳ ವ್ಯಕ್ತಪಡಿಸಿದ್ದಾರೆ.ಲಸಿಕೆ ಅಭಿವೃದ್ಧಿಗೆ ನಿಗದಿ ಮಾಡಿರುವ ಮಾನದಂಡಗಳನ್ನು ಮತ್ತು ಕಾರ್ಯವಿಧಾನಗಳನ್ನು ಚಾಚೂತಪ್ಪದೆ ಅನುಸರಿಸಬೇಕು. ಮೂರು ಹಂತದ ಕ್ಲಿನಿಕಲ್ ಟ್ರಯಲ್‌ನ ಫಲಿತಾಂಶಗಳು ಬಂದ ನಂತರವಷ್ಟೇ ಲಸಿಕೆಯನ್ನು ಬಿಡುಗಡೆ ಮಾಡಬೇಕು. ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ರಷ್ಯಾಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT